ನಿಸರ್ಗ ತತ್ವದಂತೆ ರೂಪುಗೊಂಡ ಈ ಸೃಷ್ಟಿಯ ಆರಾಧನೆ ವೇದಕಾಲದಲ್ಲೇ ಮಹತ್ವ ಪಡೆದಿತ್ತು. ಪಂಚಭೂತಗಳಿಲ್ಲದೆ ಜಗತ್ತೇ ಇಲ್ಲ. ನೀರು, ಮಣ್ಣು, ಆಕಾಶ, ಸೂರ್ಯ ಮತ್ತು ಅಗ್ನಿಗಳೇ ನಮ್ಮ ಪೂರ್ವಜರ ಆರಾಧ್ಯದೈವವಾಗಿದ್ದವು. ಮುಂದೆ ಪುರಾಣ ಕಾಲದಲ್ಲಿ ದೇವರ, ದೈವತ್ವದ ಕಲ್ಪನೆ ಬೇರೆಯಾಯಿತಾದರೂ ನಿಸರ್ಗದ ಮಹತ್ವವನ್ನು ಅಲ್ಲಗಳೆಯಲು ಸಾಧ್ಯವಾಗಲಿಲ್ಲ. ಆದ್ದರಿಂದಲೇ ನಮ್ಮ ಪ್ರತಿಯೊಂದು ಹಬ್ಬದ ಹಿಂದೆಯೂ ಈ ನಿಸರ್ಗ ತತ್ವದ ಪ್ರಭಾವವನ್ನು ಕಾಣುತ್ತೇವೆ. ಹಬ್ಬಗಳೆಂದರೆ ಕೆಲವರು ಭಾವಿಸುವಂತೆ ನಿರರ್ಥಕ ಆಚರಣೆಗಳಲ್ಲ. ಅವುಗಳ ಹಿಂದೆ ಒಂದು ನಿರ್ದಿಷ್ಟ ಉದ್ದೇಶ, ಅರ್ಥ ಅಡಗಿಕೊಂಡಿರುವುದನ್ನು ಕಾಣಬಹುದು.
ಭಾರತವೆಂದರೆ ಹಬ್ಬಗಳ ದೇಶವೆ. ವರ್ಷಾರಂಭದ ಚೈತ್ರಮಾಸದಿಂದ ಫಾಲ್ಗುಣದತನಕವೂ ಒಂದಿಲ್ಲೊಂದು ಹಬ್ಬಗಳು ಜನಪದ ಜೀವನವನ್ನು ಚೈತನ್ಯಯುಕ್ತವಾಗಿ ಇರಿಸುತ್ತ ಬಂದಿವೆ. ದೈವೀ ಭಾವನೆ, ನಂಬಿಕೆಗಳ ಹಿನ್ನಲೆಯೂ ಕೆಲವು ಹಬ್ಬಗಳಿಗಿರಬಹುದು. ಆದರೆ ಹೆಚ್ಚಿನ ಹಬ್ಬಗಳು ಈ ನಿಸರ್ಗದ ಆರಾಧನೆಯ ಸಂಕೇತಗಳೇ ಆಗಿರುವುದನ್ನು ಅಲ್ಲಗಳೆಯಲಾಗದು. ದೀಪಾವಳಿ ಭಾರತೀಯರ ದೊಡ್ಡ ಹಬ್ಬವೆನಿಸಿದರೂ ನವರಾತ್ರಿ ಹಬ್ಬದ ವೈವಿಧ್ಯತೆ ಇತರ ಯಾವ ಹಬ್ಬಗಳಿಗೂ ಇಲ್ಲ. ಏಕೆಂದರೆ ಇದು ಒಂಬತ್ತು ದಿವಸಗಳ ಕಾಲ ನಡೆಯುವ ಹಬ್ಬ. ಭಾರತದ ಒಂದೊಂದು ಪ್ರದೇಶದಲ್ಲೂ ಒಂದೊಂದು ಹೆಸರು ಪಡೆದುಕೊಂಡಿರುವ ಈ ಶರನ್ನವರಾತ್ರಿಯ ವ್ಯಾಪಕ ಸ್ವರೂಪ ಮತ್ತು ಅದರ ವೈವಿಧ್ಯತೆ ಅಸದೃಶವಾದದ್ದು. ಈ ಹಬ್ಬಕ್ಕೂ ದುಷ್ಟ ಶಿಕ್ಷೆ – ಶಿಷ್ಟ ರಕ್ಷೆಯ ಕತೆ ಹಿನ್ನೆಲೆಯಾಗಿದ್ದರೂ ಅದಕ್ಕಿಂತ ಹೆಚ್ಚಿನ ಹಲವು ಸಂಗತಿಗಳು ಈ ಹಬ್ಬದಲ್ಲಿ ಅಡಕವಾಗಿವೆ. ನವರಾತ್ರಿ, ದಸರಾ, ನಾಡಹಬ್ಬ, ವಿಜಯದಶಮಿ ಮೊದಲಾದ ಹೆಸರುಗಳಲ್ಲಿ ಕರೆಯಲ್ಪಡುವ ಈ ಹಬ್ಬ ಬರುವ ಕಾಲವೇ ಚೇತೋಹಾರಿಯಾದುದು. ನಾಲ್ಕು ತಿಂಗಳುಗಳ ನಿರಂತರ ಮಳೆಯಿಂದ ಮನೆ ಹಿಡಿದು ಕುಳಿತವರನ್ನು ಆಶ್ವಿಜ ಮಾಸದ ಶರದ್ಋತುವಿನ ಶುಭ್ರ ಆಕಾಶ, ಹಸಿರು ತುಂಬಿದ ಗುಡ್ಡಬೆಟ್ಟಗಳು, ಮಾಗಿದ ಫಸಲು ತುಂಬಿದ ಹೊಲಗದ್ದೆಗಳು, ಮೈದುಂಬಿಕೊಂಡ ಜಲಪಾತಗಳು, ಹೊಳೆಹಳ್ಳ ಜಲಾಶಯಗಳು ಎಲ್ಲವೂ ನಮ್ಮ ಮುಂದೆ ಹೊಸದೊಂದು ಜಗತ್ತನ್ನೇ ನಿರ್ಮಿಸಿ ಮನಸ್ಸಿಗೆ ಉಲ್ಲಾಸ ನೀಡುವಂತಹ ಸಮಯದಲ್ಲಿ ಬರುವ ನವರಾತ್ರಿ ಹಬ್ಬದ ಸೊಬಗೇ ಬೇರೆ, ವೈಶಿಷ್ಟ್ಯವೇ ಬೇರೆ. ಅಲ್ಲದೆ ಒಮ್ಮುಖವಾದ ಹಬ್ಬವಲ್ಲ ಇದು. ಅಚ್ಚರಿಗೊಳಿಸುವಷ್ಟು ವೈವಿಧ್ಯತೆ ಇದೆ ಈ ಹಬ್ಬದಲ್ಲಿ.
ಪಿತೃಪಕ್ಷದ ಮಹಾಲಯಾ ಅಮಾವಾಸ್ಯೆಯ ಕತ್ತಲನ್ನು ಕಳೆದು ಆಶ್ವಿಜ ಶುದ್ಧ ಪಾಡ್ಯದ ದಿನದಿಂದ ನಿರಂತರ ಒಂಬತ್ತು ದಿನ ಆಚರಿಸಲ್ಪಡುವ ನವರಾತ್ರಿ ವಿಜಯದಶಮಿಯೊಂದಿಗೆ ಮುಕ್ತಾಯಗೊಳ್ಳುವತನಕದ ಅವಧಿಯಲ್ಲಿ ಅದೆಷ್ಟೊಂದು ಬಗೆಯ ಆಚರಣೆಗಳು ತುಂಬಿಕೊಂಡಿವೆ!
ಬ್ರಹ್ಮಾಂಡವೆಂಬ ಘಟ ( ಮಡಕೆ)ದಲ್ಲಿ ಅವತರಿಸಿದ ಆದಿಶಕ್ತಿ ಜಗನ್ಮಾತೆಯನ್ನು ಒಂಬತ್ತು ದಿನ ನಿರಂತರ ಉರಿಯುವ ನಂದಾದೀಪದ ಮೂಲಕ ಆರಾಧಿಸುವ ಘಟಸ್ಥಾಪನೆ, ಲಲಿತ ಪಂಚಮಿ, ಶಾರದಾಪೂಜೆ, ದುರ್ಗಾಷ್ಟಮಿ, ಶಮೀಪೂಜೆ, ಲಕ್ಷ್ಮೀಪೂಜೆ, ಅಷ್ಟಾವಧಾನ, ಶಕ್ತಿಯ ಆರಾಧನೆ, ಆಯುಧಪೂಜೆ, ಬನ್ನಿ ಪೂಜೆ, ಅಪರಾಜಿತಾ ಪೂಜೆ – ಇತ್ಯಾದಿಗಳೆಲ್ಲವೂ ಈ ನವರಾತ್ರಿಯಲ್ಲೇ ನಡೆಯುತ್ತವೆ. ನಿಸರ್ಗವನ್ನು ಸ್ತ್ರೀರೂಪದಲ್ಲಿ ಕಾಣುವುದರೊಡನೆ ನವರಾತ್ರಿಯ ಸಂದರ್ಭದಲ್ಲಿ ಭೂಮಿಪೂಜೆ ಮತ್ತು ಸ್ತ್ರೀಪೂಜೆಯನ್ನೂ ನಡೆಸುವುದು ಅರ್ಥಪೂರ್ಣವಾಗಿದೆ. ಸುಗ್ಗಿಹಬ್ಬವೆಂದರೆ ಅದು ಫಲವತ್ತತೆಯ, ಸಮೃದ್ಧಿಯ ಸಂಕೇತ. ಅದೇವೇಳೆಗೆ ಮಾತೃಸ್ವರೂಪಿ ದೇವಿಯರ ಆರಾಧನೆಯೂ ನಡೆಯುತ್ತದೆ. ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ, ವಿದ್ಯೆಯ ಅಧಿದೇವತೆಯಾದ ಶಾರದೆ ಮತ್ತು ಶಕ್ತಿಸ್ವರೂಪಿಣಿಯಾದ ಪಾರ್ವತಿ ಈ ಮೂವರಿಗೂ ನವರಾತ್ರಿ ಕಾಲದಲ್ಲಿ ಪೂಜೆ ಸಲ್ಲುತ್ತದೆ. ದಶಮಹಾವಿದ್ಯಾ ಪರಂಪರೆಯ ದೇವತೆಗಳಾದ ಕಾಳಿ, ತಾರಾದೇವಿ, ತ್ರಿಪುರಸುಂದರಿ, ಭುವನೇಶ್ವರಿ, ಛಿನ್ನಮಸ್ತಾದೇವಿ, ಭೈರವಿ, ಧೂಮಾವತಿದೇವಿ, ಬಗಲಾಮುಖಿ ದೇವಿ, ಮಾತಂಗಿ ಮತ್ತು ಕಲಾತ್ಮಕೆಯರ ಆರಾಧನೆ ಒಂದೆಡೆಯಾದರೆ, ಶ್ರೀಶೈಲ ಪುತ್ರಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರಿ, ಮಹಾಗೌರಿ ಮತ್ತು ಸಿದ್ಧಿದಾತ್ರಿಯರ ಪೂಜೆ ಇನ್ನೊಂದೆಡೆ. ಇದರೊಂದಿಗೆ ಯೋಗನಿದ್ರಾದುರ್ಗಾ ಪೂಜೆ, ದೇವಜಾತ ದುರ್ಗಾ ಪೂಜೆ, ಮಹಿಷಮರ್ದಿನಿ ದುರ್ಗಾ ಪೂಜೆ, ಶೈಲಜಾತಾ ದುರ್ಗಾ ಪೂಜೆ, ದೂಮೃಹಾ ದುರ್ಗಾಪೂಜೆ, ಚಂಡಮುಂಡಹಾ ದುರ್ಗಾ ಪೂಜೆ, ರಕ್ತಬೀಜಹಾ ದುರ್ಗಾಪೂಜೆ , ನಿಶುಂಭಹಾ ದುರ್ಗಾ ಪೂಜೆ, ಶುಂಭ ಹಾ ದುರ್ಗಾಪೂಜೆ..ಈ ಒಂಬತ್ತು ಬಗೆಯ ಶಕ್ತಿಸ್ವರೂಪಿಣಿಯರ ಪೂಜೆ ಮತ್ತೊಂದೆಡೆ. ಆರಾಧನೆಯ ವಿಭಿನ್ನ ರೂಪಗಳನ್ನು ನಾವಿಲ್ಲಿ ಕಾಣಬಹುದು.
ಈ ಬಗೆಯ ದೇವತಾರಾಧನೆಯಲ್ಲದೆ ನಿಸರ್ಗಾರಾಧನೆಯ ಹಲವು ಸ್ವರೂಪಗಳೂ ವಿವಿಧ ಪ್ರದೇಶಗಳಲ್ಲಿ ಕಂಡುಬರುತ್ತವೆ. ಸ್ರ್ತೀಯರ ಮಾತೃಶಕ್ತಿಯ ಪ್ರತೀಕವಾಗಿ ” ದೀಪಗರ್ಭ ಪೂಜೆ ” ಗುಜರಾತ ಭಾಗದಲ್ಲಿ ನಡೆಯುತ್ತದೆ. ಹಲವು ತೂತುಗಳಿರುವ ಮಣ್ಣಿನ ಮಡಕೆಯಲ್ಲಿ ದೀಪ ಹಚ್ಚಿಡಲಾಗುತ್ತದೆ. ಕೆಲವೆಡೆ ಕುಟುಂಬ ಕುಲಾಚಾರದ ಸ್ವರೂಪದಲ್ಲೂ ಪೂಜೆ ನಡೆಯುವುದುಂಟು. ಗದ್ದೆಯ ಮಣ್ಣನ್ನು ತಂದು ಚೌಕಾಕಾರದಲ್ಲಿಟ್ಟು ಅದರ ನಡುವೆ ಐದು ಅಥವಾ ಏಳು ಬಗೆಯ ಧಾನ್ಯಗಳನ್ನು ಇಟ್ಟು ಪೂಜಿಸಲಾಗುತ್ತದೆ. ಮಣ್ಣಿನ ಕಲಶದಲಿ ನೀರು , ಗಂಧ, ಹೂವು, ಗರಿಕೆ, ಅಡಿಕೆ ಮೊದಲಾದವುಗಳನ್ನಿಡುವ ಪದ್ಧತಿಯಿದೆ. ಇದು ನಿಸರ್ಗ ಪೂಜೆಯ ಒಂದು ಸ್ವರೂಪ.” ನಾರಿಯರನ್ನು ಪೂಜಿಸುವ ಪುಣ್ಯಭೂಮಿ” ಇದು ಎನ್ನುವ ಮಾತಿನಂತೆ ನವರಾತ್ರಿಯ ಒಂಬತ್ತು ದಿವಸಗಳ ಕಾಲವೂ ಮುತ್ತೈದೆಯರನ್ನು ಮನೆಗೆ ಕರೆದು ಬಾಗಿನ ನೀಡಿ, ಭೋಜನದೊಂದಿಗೆ ಗೌರವಿಸುವ ಪದ್ಧತಿ ಇದೆ. ಇದು ಭಾರತೀಯ ಸಂಸ್ಕೃತಿಯ ಹಿರಿಮೆ.
ಅಕ್ಷರ ಪೂಜೆ :
**********
ನವರಾತ್ರಿ ಹಬ್ಬ ಎಂದರೆ ಕೇವಲ ದೇವತೆಗಳ ಆರಾಧನೆಗೆ ಸೀಮಿತವಲ್ಲ. ಸಪ್ತಮಿಯಿಂದ ಮೂರುದಿನ ನಡೆಯುವ ಶಾರದಾ ಪೂಜೆಯಲ್ಲಿ ಪುಸ್ತಕಗಳನ್ನುಬರೆಹದ ವಸ್ತುಗಳನ್ನು ಇಟ್ಟು ಪೂಜಿಸುವುದು ಅಕ್ಷರ ಪೂಜೆಯ ಸಂಕೇತ. ಜ್ಞಾನ ಸಂಪತ್ತಿನ ಮಹತ್ವವನ್ನು ಸಾರುವ ಪೂಜೆ ಇದು. ಅಷ್ಟೇ ಅಲ್ಲ, ಸಣ್ಣ ಮಕ್ಕಳ ಅಕ್ಷರಾಭ್ಯಾಸವನ್ನು ಆರಂಭಿಸಲು ಇದು ಶುಭ ಮುಹೂರ್ತವೆಂದು ಭಾವಿಸಲಾಗುತ್ತದೆ. ಹಿಂದೆ ದೇವಾಲಯ, ಗುರುಮಠಗಳಲ್ಲೆಲ್ಲ ಆ ದಿನ ಮಕ್ಕಳಿಂದ ಮರಳಿನ ಮೇಲೆ ಅ, ಆ..ಬರೆಸಿ ಅವರಿಗೆ ಶಿಕ್ಷಣಾಭ್ಯಾಸದ ಪ್ರಥಮ ಪಾಠವನ್ನು ಹೇಳಿಕೊಡಲಾಗುತ್ತಿತ್ತು. ಈಗಲೂ ಆ ಪದ್ಧತಿ ಬೇರೆ ಸ್ವರೂಪದಲ್ಲಿ ಪ್ರಚಲಿತದಲ್ಲಿದೆ.
ವಿಜಯದಶಮಿ ಮೂಲತಃ ಕ್ಷತ್ರಿಯರಿಗೆ ಬಹಳ ಮಹತ್ವದ ದಿನ. ಶಕ್ತಿದೇವತೆಯನ್ನು ಪೂಜಿಸಿ ಯುದ್ಧಸನ್ನದ್ಧರಾಗಿ ಅರಸರು ವಿಜಯಯಾತ್ರೆ ಕೈಕೊಳ್ಳುತ್ತಿದ್ದರು. ಇಂದು ಸಾಂಕೇತಿಕವಾಗಿ ಇದು ಆಯುಧಪೂಜೆಗೆ ಸೀಮಿತವಾಗಿದೆ. ತ್ರೇತಾಯುಗದಲ್ಲಿ ಶ್ರೀರಾಮ ರಾವಣನನ್ನು ವಧಿಸಿದ್ದು ಮತ್ತು ದ್ವಾಪರಾಯುಗದಲ್ಲಿ ಪಾಂಡವರು ಕೌರವರ ಮೇಲೆ ವಿಜಯ ಸಾಧಿಸಿದ್ದು ವಿಜಯದಶಮಿಯ ಸಂದರ್ಭದಲ್ಲೇ ಎನ್ನಲಾಗುತ್ತದೆ. ಅಂದರೆ ಅಧರ್ಮದ ಮೇಲೆ ಧರ್ಮ ಜಯವನ್ನು ಪಡೆಯುವ ಸಂದೇಶವನ್ನೂ ಈ ಹಬ್ಬ ನೀಡುತ್ತದೆ.
ಅಂದರೆ ನವರಾತ್ರಿ ಹಬ್ಬದ ಆಚರಣೆಯೊಳಗೆ ನಿಸರ್ಗದ ಆರಾಧನೆ, ಜ್ಞಾನ ಸರಸ್ವತಿಯ ಆರಾಧನೆ, ಮಾತೃಸ್ವರೂಪಿ ಮಹಿಳೆಯರ ಆರಾಧನೆ, ಶಕ್ತಿ ಸ್ವರೂಪಿಣಿ ದುರ್ಗೆಯ ಆರಾಧನೆ ಎಲ್ಲವೂ ಅಡಕವಾಗಿದೆಯೆನ್ನುವುದು ನಾವು ಗಮನಿಸಬೇಕಾದ ವಿಷಯ. ಆಧುನಿಕ ಯುಗದಲ್ಲಿ ಇದು ನಾಡಹಬ್ಬವಾಗಿ ತಾಯಿ ಭುವನೇಶ್ವರಿಯ ಆರಾಧನೆಯ ಮೂಲಕ ನಾಡುನುಡಿ ನೆಲಜಲ, ಕಲೆ ಸಾಹಿತ್ಯ ಸಂಸ್ಕೃತಿಗಳ ಪೋಷಣೆಗೆ ದಾರಿಮಾಡಿಕೊಟ್ಟಿದೆ . ಹಬ್ಬಗಳು ನಮ್ಮ ಜೀವನೋತ್ಸಾಹದ ಸಂಕೇತ. ಜನರು ತಮ್ಮನ್ನು ತಾವೇ ಚೈತನ್ಯಯುತವಾಗಿ ಇರಿಸಿಕೊಳ್ಳಲು ಹಬ್ಬಗಳು ನೆರವಾಗುತ್ತವೆ.
ಅಷ್ಟೇ ಏಕೆ , ಹಬ್ಬಗಳು ದೇಶದ ಆರ್ಥಿಕ ವ್ಯವಸ್ಥೆಯನ್ನು ಬಲಪಡಿಸುವುದಕ್ಕೂ ನೆರವಾಗುತ್ತವೆನ್ನುವುದನ್ನು ನಾವು ಮರೆಯಬಾರದು. ಒಂದು ಸಮೀಕ್ಷೆಯ ಪ್ರಕಾರ ದೇಶದಲ್ಲಿ ಆಚರಿಸುವ ಹತ್ತು ಪ್ರಮುಖ ಹಬ್ಬಗಳಲ್ಲಿ ಹತ್ತು ಸಾವಿರ ಕೋಟಿಗೂ ಹೆಚ್ಚಿನ ವ್ಯವಹಾರ ನಡೆಯುತ್ತದಲ್ಲದೆ ಕೋಟ್ಯಂತರ ಜನರ ಉಪಜೀವನಕ್ಕೆ ಅನುಕೂಲ ಮಾಡಿಕೊಡುತ್ತಿದೆ. ಅದಕ್ಕೆ ಪೂರಕವಾಗಿ ಈಚೆಗೆ ಧಾರ್ಮಿಕ ಪ್ರವಾಸೋದ್ಯಮ ಸಹ ಬೆಳೆಯುತ್ತಿರುವುದು ಉಲ್ಲೇಖನಾರ್ಹ.– ಎಲ್.ಎಸ್.ಶಾಸ್ತ್ರಿ
ಬೆಳಗಾವಿ
ಮೊ.9482251696