ರಾಯ್ಪುರ : ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಭದ್ರತಾ ಸಿಬ್ಬಂದಿ ತೆರಳುತ್ತಿದ್ದ ವಾಹನವನ್ನು ಗುರಿಯಾಗಿಸಿ ಪ್ರಬಲ ಐಇಡಿ ಸಾಧನ ಸ್ಫೋಟಿಸಿದ್ದು, ದಂತೇವಾಡ ಜಿಲ್ಲಾ ಮೀಸಲು ಗಾರ್ಡ್ (ಡಿಆರ್‌ಜಿ)ನ ಎಂಟು ಜವಾನರು ಮತ್ತು ಒಬ್ಬ ಚಾಲಕ ಸೇರಿದಂತೆ ಒಂಬತ್ತು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವರದಿಯಾಗಿದೆ.

ದಾಂತೇವಾಡ, ನಾರಾಯಣಪುರ ಮತ್ತು ಬಿಜಾಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ವಾಪಸಾಗುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ. ಐಜಿ ಬಸ್ತಾರ್ ಪ್ರಕಾರ, ವಾಹನವನ್ನು ಸುಧಾರಿತ ಸಾಧನದಿಂದ ಸ್ಫೋಟಿಸಲಾಗಿದೆ. ಇದರ ಪರಿಣಾಮವಾಗಿ ವಾಹನದಲ್ಲಿದ್ದ ಎಲ್ಲಾ ಒಂಬತ್ತು ಮಂದಿ ಸಾವಿಗೀಡಾಗಿದ್ದಾರೆ.

ಬಸ್ತಾರ್ ಪ್ರದೇಶದ ಕುಟ್ರುನಲ್ಲಿ ಮಧ್ಯಾಹ್ನ 2:15 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಇಂದು, ಸೋಮವಾರ ಮುಂಜಾನೆ, ಛತ್ತೀಸ್‌ಗಢದ ಅಬುಜ್ಮದ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮಾವೋವಾದಿಗಳ ಮೇಲೆ ದಾಳಿ ಮಾಡಿ ಇಬ್ಬರು ಮಹಿಳೆಯರು ಸೇರಿದಂತೆ ಐವರನ್ನು ಹೊಡೆದುರುಳಿಸಿದ್ದಾರೆ. ಅವರಿಂದ ಸ್ವಯಂಚಾಲಿತ ಶಸ್ತ್ರಾಸ್ತ್ರಗಳಾದ ಎಕೆ 47 ಮತ್ತು ಸೆಲ್ಫ್ ಲೋಡ್ ರೈಫಲ್ಸ್ ವಶಪಡಿಸಿಕೊಳ್ಳಲಾಗಿದೆ. ಕಾರ್ಯಾಚರಣೆ ನಡೆಸಿ ಯೋಧರು ಹಿಂತಿರುಗುತ್ತಿದ್ದಾಗ ನಕ್ಸಲರು ರಸ್ತೆಯಲ್ಲಿ ಸುಧಾರಿತ ಸ್ಫೋಟಕಗಳನ್ನಿಟ್ಟು ಅವರ ವಾಹನವನ್ನು ಸ್ಫೋಟಿಸಿದ್ದಾರೆ ಎನ್ನಲಾಗಿದೆ.
ಎಂಟು ಭದ್ರತಾ ಸಿಬ್ಬಂದಿಗಳು ಜಿಲ್ಲಾ ರಿಸರ್ವ್ ಗಾರ್ಡ್‌ಗೆ ಸೇರಿದವರಾಗಿದ್ದಾರೆ. ಇದು ರಾಜ್ಯದಲ್ಲಿ ಮಾವೋವಾದಿಗಳನ್ನು ಎದುರಿಸಲು ಸ್ಥಾಪಿಸಲಾದ ವಿಶೇಷ ಪೊಲೀಸ್ ಘಟಕವಾಗಿದ್ದು, ಸ್ಫೋಟದಿಂದ ಸ್ಥಳದಲ್ಲಿ ಬೃಹತ್ ಕುಳಿ ಬಿದ್ದಿದೆ.
ಛತ್ತೀಸ್‌ಗಢದ ಮಾವೋವಾದಿ ಪ್ರಾಬಲ್ಯದ ಪ್ರದೇಶಗಳಲ್ಲಿ ಭದ್ರತಾ ಪಡೆಗಳು ಬಂಡುಕೋರರನ್ನು ಸದೆಬಡಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹಿನ್ನಲೆಯಲ್ಲಿ ಮಾವೋವಾದಿಗಳ ದಾಳಿ ನಡೆದಿದೆ.