ಬೆಳಗಾವಿ: ಹುಬ್ಬಳ್ಳಿಯ ಕಾಲೇಜಿನಲ್ಲಿ ಗುರುವಾರ ನಡೆದ ವಿದ್ಯಾರ್ಥಿನಿ ನೇಹಾ ಕೊಲೆ ಖಂಡಿಸಿ, ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿಯಲ್ಲಿ ವಿವಿಧ ಸಮುದಾಯಗಳ ನಾಗರಿಕರು, ಕಾಂಗ್ರೆಸ್‌ ಮುಖಂಡರು ಪ್ರತ್ಯೇಕವಾಗಿ ತೀವ್ರ ಪ್ರತಿಭಟನೆ ನಡೆಸಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗಿತಗೊಳಿಸಿ ಆಕ್ರೋಶ ಹೊರಹಾಕಿದರು.
ಎಂಸಿಎ ಓದುತ್ತಿದ್ದ ನೇಹಾ ಹಿರೇಮಠ (25) ಅವರನ್ನು ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮದ ಸಹಪಾಠಿ ಫಯಾಜ್‌ (27) ಕಾಲೇಜು ಆವರಣದಲ್ಲೇ ಚಾಕು ಇರಿದು ಕೊಲೆ ಮಾಡಿದ್ದ. ಫಯಾಜ್‌ ಮುನವಳ್ಳಿ ಗ್ರಾಮದವನಾದ್ದರಿಂದ ಗ್ರಾಮದ ಜನ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಅಲ್ಲದೇ ಗ್ರಾಮದಲ್ಲಿ ವ್ಯಾಪಾರ ವಹಿವಾಟು, ರಸ್ತೆ ಸಂಚಾರ ಬಂದ್‌ ಮಾಡಿ ಆರೋಪಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಇದಕ್ಕೂ ಮೊದಲು ಗ್ರಾಮದಲ್ಲಿ ಐತಿಹಾಸಿಕ ಪಂಚಲಿಂಗೇಶ್ವರ ದೇವಸ್ಥಾನದ ಬಳಿ ಜನ ಧರಣಿ ನಡೆಸಿದರು. ಹಿಂದೂ, ಮುಸ್ಲಿಂ, ವೀರಶೈವ ಲಿಂಗಾಯತ ಸಮುದಾಯ ಸೇರಿದಂತೆ ವಿವಿಧ ಸಮುದಾಯಗಳ ಜನರೂ ಪಾಲ್ಗೊಂಡರು.ವಿದ್ಯಾರ್ಥಿನಿ ಕೊಲೆ ಅತ್ಯಂತ ನೋವು ತರಿಸಿದೆ. ಆರೋಪಿ ಫಯಾಜ್‌ಗೆ ಕಠಿಣ ಶಿಕ್ಷೆ ಕೊಡಿಸಬೇಕು. ಇಂಥ ಘಟನೆಗಳು ಮರುಕಳಿಸದಂತೆ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರಿಗೆ ರಕ್ಷಣೆ ಒದಗಿಸಬೇಕು ಎಂದು ಆಗ್ರಹಿಸಿದರು.
ಅಘೋಷಿತ ಬಂದ್‌: ರಾಜ್ಯ ಹೆದ್ದಾರಿಗೆ ಹೊಂದಿಕೊಂಡ, ಐತಿಹಾಸಿಕ ಮಹತ್ವದ ಪಡೆದ ಮುನವಳ್ಳಿ ಗ್ರಾಮ ಪ್ರಮುಖ ವಾಣಿಜ್ಯ ಕೇಂದ್ರವೂ ಆಗಿದೆ. ಆದರೆ, ಶುಕ್ರವಾರ ಬೆಳಿಗ್ಗೆಯಿಂದ ಇಡೀ ಗ್ರಾಮದಲ್ಲಿ ಅಘೋಷಿತ ಬಂದ್‌ ವಾತಾವರಣ ನಿರ್ಮಾಣವಾಯಿತು.
ಪ್ರತಿಭಟನೆ ಆರಂಭವಾಗುತ್ತಿದ್ದಂತೆಯೇ ಎಲ್ಲ ವರ್ತಕರು ಸ್ವಯಂಪ್ರೇರಿತವಾಗಿ ಮಳಿಗೆಗಳನ್ನು ಬಂದ್‌ ಮಾಡಿದರು. ಬೀದಿಬದಿಯಲ್ಲಿ ಹಣ್ಣು, ಹೂವು, ತರಕಾರಿ ಮಾರುವವರೂ ತಮ್ಮ ವ್ಯಾಪಾರ ನಿಲ್ಲಿಸಿದರು. ಗ್ರಾಮದಲ್ಲಿ ಜನಸಂಚಾರ ವಿರಳವಾಗಿದ್ದು, ಆತಂಕದ ವಾತಾವರಣ ಮನೆ ಮಾಡಿದೆ. ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.