ಜ.10 ರಂದು ತ್ಯಾಗವೀರ ಸಿರಸಂಗಿ ಲಿಂಗರಾಜರ 164ನೇ ಜಯಂತಿ ಉತ್ಸವ ಹಾಗೂ ರಕ್ತದಾನ ಶಿಬಿರ ಮಹಾದಾನಿ, ತ್ಯಾಗವೀರ ಸಿರಸಂಗಿ ಲಿಂಗರಾಜರ 164ನೇ ಜಯಂತಿ ಉತ್ಸವ ಜ.10 ರಂದು ಲಿಂಗರಾಜ ಮಹಾವಿದ್ಯಾಲಯದ ಕೇಂದ್ರ ಸಭಾಗೃಹದಲ್ಲಿ ಬೆಳಗ್ಗೆ 11.00 ಗಂಟೆಗೆ ಜರುಗಲಿದೆ.ಸಾನ್ನಿಧ್ಯವನ್ನು ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ವಹಿಸಲಿದ್ದರು, ಅತಿಥಿ ಉಪನ್ಯಾಸಕರಾಗಿ ಸಾಹಿತಿ ಬಾಗಲಕೋಟೆ ಪ್ರಥಮದರ್ಜೆ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಜಿ.ಜಿ.ಹಿರೇಮಠ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಕೆಎಲ್‍ಇ ಸಂಸ್ಥೆಯ ಅಧ್ಯಕ್ಷರು ಹಾಗೂ ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ವಹಿಸಲಿದ್ದಾರೆ. ಲಿಂಗರಾಜ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ಹಾಗೂ ಕೆಎಲ್‍ಇ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತಟವಟಿ ಆಗಮಿಸಲಿದ್ದಾರೆ.

10 ರಂದು ಮುಂಜಾನೆ 9.00 ಗಂಟೆಯಿಂದ ಕೆಎಲ್‍ಇ ಸಂಸ್ಥೆಯ ಡಾ.ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ರಕ್ತಭಂಡಾರದ ಸಹಯೋಗದಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಬಹುಸಂಖ್ಯೆಯಲ್ಲಿ ರಕ್ತದಾನಿಗಳು ಆಗಮಿಸಿ ಯಶಸ್ಸುಗೊಳಿಸಬೇಕೆಂದು ಉತ್ಸವ ಸಮಿತಿಯ ಕಾರ್ಯಾಧ್ಯಕ್ಷ ಪ್ರಾಚಾರ್ಯ ಡಾ.ಎಚ್.ಎಸ್.ಮೇಲಿನಮನಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ನಾಡು-ನುಡಿಗಳ ಸೇವೆಗಾಗಿ, ಸಮಾಜದ ವಿದ್ಯಾಭಿವೃದ್ಧಿಗಾಗಿ, ಸಂಸ್ಕøತಿಯ ಉದ್ಧಾರಕ್ಕಾಗಿ, ಒಟ್ಟಾರೆ ನಾಡಿ ಸರ್ವತೋಮುಖವಾದ ಪ್ರಗತಿ ಸುಗತಿಗಳಿಗಾಗಿ ತಮ್ಮ ತನು-ಮನ-ಧನಗಳನ್ನು ಅಂತಃಕರಣಪೂರ್ವಕವಾಗಿ ಧಾರೆಯೆರೆದು ಕೀರ್ತಿಶೇಷರಾದ ತ್ಯಾಗವೀರ ಸಿರಸಂಗಿ ಲಿಂಗರಾಜರ ಜಯಂತಿಯನ್ನು ಆಚರಿಸುವದಂತೂ ಪುಣ್ಯಪ್ರದವಾದುವೆಂದು ನಾನು ಬೇರೆ ಹೇಳಬೇಕಾಗಿಲ್ಲ.
ಲಿಂಗರಾಜರ ಜೀವನವೇ ಒಂದು ಕಾವ್ಯ. ಆ ದೃಷ್ಟಿಯಿಂದಲೇ ನಾವು ಅವರ ಜೀವನವನ್ನು ಅವಲೋಕಿಸುವದು ಉತ್ತಮವೆಂದು ನಾನು ತಿಳಿದಿದ್ದೇನೆ. ಜನತೆಯ ಏಳ್ಗೆಗೆ ಸರಿಯಾದ ಶಿಕ್ಷಣವೇ ಮೂಲವೆಂದು ತಿಳಿದುಕೊಂಡ ತತ್ವವು ಅವರ ದೂರದರ್ಶಿತ್ವಕ್ಕೆ ಇಂದಿಗೂ ಸಾಕ್ಷಿಯಾಗಿ ನಿಂತಿದೆ. ಅವರು ತಮ್ಮ ಇಡೀ ಸಂಪತ್ತನ್ನು ಮತ್ತಾವುದುಕ್ಕಾದರೂ ಬಳಸಬಹುದಾಗಿತ್ತು, ಆದರೆ ಸಮಾಜದ ಸುಖವೇ ತನ್ನ ಸುಖವೆಂದು ಎಲ್ಲವನ್ನೂ ಧಾರೆದ ಲಿಂಗರಾಜರು ಭವ್ಯಮಾನವರು. ಒಂದು ಕಾಲದಲ್ಲಿ ಉದಾತ್ತ ಉದ್ದೇಶಕ್ಕಾಗಿ ಅರ್ಥಾತ್ ಶಿಕ್ಷಣ ಪ್ರೀತಿಗಾಗಿ, ಸಮಾಜದ ಉಜ್ವಲ ಭವಿಷ್ಯಕ್ಕಾಗಿ ದಾನ ನೀಡಿ ಔದಾರ್ಯವನ್ನು ಮೆರೆದಿದ್ದಾರೆ. ಇಂಥ ದಾನಿಗಳಲ್ಲಿ ಉದಾರವಾಗಿ ದಾನ ನೀಡಿದವರೆಂದರೆ ಸಿರಸಂಗಿ ಲಿಂಗರಾಜರು, ರಾಜಾಲಖಮಗೌಡರು ಹಾಗೂ ಭೂಮರಡ್ಡಿ ಬಸಪ್ಪನವರು. ಇವರೆಲ್ಲ ಸ್ವಾತಂತ್ರ್ಯಪೂರ್ವದ ದಿನಗಳಲ್ಲಿ ನೀರು ಗೊಬ್ಬರವಾಗಿ ನಮ್ಮ ಸಮಾಜವನ್ನು ಪೋಷಿಸಿ ಬೆಳೆಸಿದರು. ಒಂದು ಆದರ್ಶವಾಗಿ ಮುಂದಿನ ತಲೆಮಾರಿನವರಿಗೆ ದಾನ ನೀಡಲು ಪ್ರೇರಣೆ ಒದಗಿಸಿದರು.
ಲಿಂಗರಾಜರು ಬದುಕಿದ್ದು ಕೇವಲ 45 ವರ್ಷಗಳು ಮಾತ್ರ. ಅವರು ಜನಿಸಿದ್ದು 1861 ರಲ್ಲಿ, ಲಿಂಗೈಕ್ಯರಾಗಿದ್ದು 1906ರಲ್ಲಿ. ಲಿಂಗರಾಜರಂತೆ ಇಡೀ ಸಂಸ್ಥಾನವನ್ನೇ ಸಮಾಜದ ಒಳಿತಿಗಾಗಿ ದಾನ ಮಾಡಿರುವ ಉದಾಹರಣೆಗಳಿಲ್ಲ.
ಭಾರತದಲ್ಲಿದ್ದ ಸುಮಾರು 600 ಸಂಸ್ಥಾನಗಳ ಇತಿಹಾಸದಲ್ಲಿಯೇ ಯಾವ ಸಂಸ್ಥಾನಿಕರೂ ಮಾಡಿರದ ತ್ಯಾಗವನ್ನು ಮಾಡಿದವರೆಂದರೆ ಸಿರಸಂಗಿ ಲಿಂಗರಾಜರು ಮಾತ್ರ. ಅಂತೆಯೆ ಅವರ ದಾನ ಅಮರ, ಅನನ್ಯ, ಚಿರಂತನವೆನಿಸಿದೆ.
ಲಿಂಗರಾಜರ ತ್ಯಾಗದಲ್ಲಿ ಒಂದು ವೈಶಿಷ್ಟ್ಯವುಂಟು. ಅವರು ಸ್ವಾರ್ಥವನ್ನು ಸಂಪೂರ್ಣವಾಗಿ ಮರೆತು ತಮ್ಮ ಇಡಿಯ ಆಸ್ತಿಯನ್ನು ಸಮಾಜದ ಶಿಕ್ಷಣಕ್ಕಾಗಿ ಧಾರೆಯೆರೆದರು. ‘ಶಿಕ್ಷಣಕ್ಕಾಗಿ ದಾನ ನೀಡುವುದು ಮಹಾದಾನ’ ಎಂದು ಅರಿತು ಹಿಂದುಮುಂದು ನೋಡದೆ ಸಮಾಜದ ಭಾವೀ ಜೀವನದ ಪ್ರಗತಿಯನ್ನು ಲಕ್ಷಿಸಿ, ಮಾಡಿದ ತ್ಯಾಗ.
ಅವರ ತ್ಯಾಗದಿಂದ ಸಿರಸಂಗಿ-ನವಲಗುಂದ ಟ್ರಸ್ಟು ರೂಪುಗೊಂಡು ನಿಂತಿದೆ. ಶಿಕ್ಷಣ ಸಂಸ್ಥೆಗಳ ಅಂಕುರಕ್ಕೆ ನೀರೆರೆದು ಪೋಷಿಸುತ್ತ ಬಂದಿದೆ. ಟ್ರಸ್ಟಿನ ಮೂಲಕ ಶಿಷ್ಯವೇತನ ಪಡೆದು ಸಮಾಜದಲ್ಲಿ ಗುರುತಿಸಿಕೊಂಡವರು ರ್ಯಾಂಗ್ಲರ್ ಡಿ.ಸಿ.ಪಾವಟೆ, ದಿವಂಗತರಾದ ಬಿ.ಡಿ.ಜತ್ತಿ, ಡಾ. ಆರ್.ಸಿ. ಹಿರೇಮಠ, ಪ್ರಿನ್ಸಿಪಾಲ ಬಿ. ರುದ್ರಪ್ಪ, ಚಿತ್ರಕಲಾವಿದ ಡಿ.ಜಿ.ಬಡಿಗೇರ, ರತ್ನಪ್ಪಣ್ಣ ಕುಂಬಾರ, ಡಾ. ಎಂ. ಸಿ. ಮೋದಿ ಮುಂತಾದವರು.
‘ನೂರು ವರ್ಷಗಳು ಕಳೆದರೂ ಲಿಂಗರಾಜರಂಥ ದಾನಿಗಳು ಅಭಿಮಾನಿಗಳು ಹುಟ್ಟುವುದು ವಿರಳ’ ಎಂಬ ಅಂದಿನ ಬೆಳಗಾವಿ ಕಲೆಕ್ಟರ್ ಮೆ.ಜಾಕ್ಸನ್ ಅವರ ಮಾತು ಇಂದಿಗೂ ದಾಖಲಾರ್ಹವೆನಿಸಿವೆ. ‘ದಾನ ಎಂಬುದು ದೈವೀಗುಣ, ಅದು ಅಂತರಾಳದಿಂದ ಮೂಡಿಬರಬೇಕು’. ‘ದಾನದ ಬೆಲೆ ಅದು ಕೊಡುವ ವಿಧಾನದಿಂದ ಬರುತ್ತದೆ’ ಎಂಬ ಮಾತು ಲಿಂಗರಾಜರಿಗೆ ಅನ್ವಯಿಸುತ್ತವೆ. ಅವರು ದಾನವನ್ನು ದಾಸೋಹವನ್ನಾಗಿ ಮಾಡಿದವರು.
ಔದಾರ್ಯ ಮತ್ತು ಕರುಣೆ ಲಿಂಗರಾಜರ ಉದಾತ್ತ ಬದುಕಿನ ಮೌಲ್ಯಗಳಾಗಿದ್ದವು. ಲಿಂಗರಾಜರು ಮರಣ ಹೊಂದುವ ಪೂರ್ವದಲ್ಲಿ ತಮ್ಮ ಆತ್ಮೀಯ ಮಿತ್ರರಾಗಿದ್ದ ರಾವಬಹದ್ದೂರ ಅರಟಾಳ ರುದ್ರಗೌಡರನ್ನು ಕರೆಸಿಕೊಂಡರು. ಅವರಿಗೆ ತಾವು ಮಾಡಿರುವ ದಾನಪತ್ರದ ವಿಷಯ ತಿಳಿಸಿದರು. ಸಂಸ್ಥಾನದ ಸಕಲ ಸಂಪತ್ತನ್ನು ಲಿಂಗಾಯತ ಮಕ್ಕಳ ಶಿಕ್ಷಣಕ್ಕಾಗಿ ಮುಡುಪಾಗಿಟ್ಟರು. ಮಾತ್ರವಲ್ಲದೆ ಅರಟಾಳ ರುದ್ರಗೌಡರನ್ನೇ ಪ್ರಧಾನ ಟ್ರಸ್ಟಿಯನ್ನಾಗಿ ನೇಮಿಸಿರುವದಾಗಿ ಹೇಳಿದರು. ಕೊನೆಗೆ ರುದ್ರಗೌಡರನ್ನು ಕುರಿತು “ಪರಮಮಿತ್ರರೆ ಲಿಂಗಾಯತರ ಕಡೆ ಲಕ್ಷ್ಯವಿರಲಿ” ಎಂದು ಹೇಳಿ ಹೋದ ಸಿರಸಂಗಿ ಲಿಂಗರಾಜರು ದಾನಿಗಳಲ್ಲಿ ರಾಜನಾಗಿ, ರಾಜರಲ್ಲಿಯೇ ಮಹಾದಾನಿಯಾಗಿ, ಸಂಸ್ಥಾನಿಕರ ಶಿರೋಮಣಿಯಾಗಿ ಇತಿಹಾಸದ ಪುಟಗಳಲ್ಲಿ ಅಮರರಾಗಿದ್ದಾರೆ.
ವ್ಯಕ್ತಿಗೆ ದೊಡ್ಡಸ್ತಿಕೆ ಬರುವುದು ಅಧಿಕಾರ, ಅಂತಸ್ತಿನಿಂದ ಅಲ್ಲ. ಅವನು ಮಾಡುವ ಸೇವೆಯಿಂದ. ಲಿಂಗರಾಜರು ತಮ್ಮ ಬದುಕಿನಲ್ಲಿ ಅದನ್ನು ಸಾಧಿಸಿದರು. ಲಿಂಗರಾಜರು ತಮ್ಮ ಬದುಕಿನುದ್ದಕ್ಕೂ ಸಮಾಜ-ಧರ್ಮದ ಹಿತಕ್ಕಾಗಿ ದುಡಿದರು. ಕೃಷಿ, ಉದ್ಯೋಗ, ಕೆರೆಕಟ್ಟೆಗಳ ನಿರ್ಮಾಣ, ದೇವಾಲಯಗಳ ಜೀರ್ಣೋದ್ಧಾರ ಹೀಗೆ ಹತ್ತು ಹಲವಾರು ರಚನಾತ್ಮಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಲಿಂಗರಾಜರದು ಆದರ್ಶಪಥವಾಗಿತ್ತು. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರು. ಮನೆ ರಣರಂಗವಾಯಿತು. ತಾಯಿ ಉಮಾಬಾಯಿಯಿಂದ ಕೋರ್ಟಿನಲ್ಲಿ ವ್ಯಾಜ್ಯಗಳನ್ನು ಎದುರಿಸಬೇಕಾಯಿತು. ಲಿಂಗರಾಜರು ಪ್ರವಾಹದ ವಿರುದ್ಧ ಹೋರಾಡಿದರು. ಅಂಜಲಿಲ್ಲ, ಅಳುಕಲಿಲ್ಲ. ಸಮಾಜಕ್ಕೆ ಒಳಿತನ್ನೇ ಮಾಡಿದರು. ಲಿಂಗರಾಜರು ಬರೆದುದು ಮೃತ್ಯುಪತ್ರವಲ್ಲ, ಅದು ಇಚ್ಛಾಪತ್ರವಾಗಿತ್ತು. ತಮ್ಮ ಸಕಲ ಸಂಪತ್ತನ್ನು ವೀರಶೈವ ಸಮಾಜದ ಶಿಕ್ಷಣಾಭಿವೃದ್ಧಿಗೆ ಮೀಸಲಿಡುವಂತೆ ಬರೆದ ಮಹಾದಾನಪತ್ರವಾಗಿತ್ತು. ಲಿಂಗರಾಜರಂತಹ ಪುಣ್ಯ ಪುರುಷರನ್ನು, ದಾನಶ್ರೀಗಳನ್ನು ಪಡೆದ ನಾಡು ನಿಜಕ್ಕೂ ಧನ್ಯ. ಆ ಮಹಾನ್ ವ್ಯಕ್ತಿಯನ್ನು, ಅನ್ನದಾತನನ್ನು, ಜ್ಞಾನದಾತನನ್ನು ನಾಡವರು ಎಷ್ಟೂ ಸ್ಮರಿಸಿದರೂ ಕಡಿಮೆಯೇ.
ಲಿಂಗರಾಜರ ಸತ್‍ಸಂಕಲ್ಪ ಹಾಗೂ ದೂರದರ್ಶಿತ್ವಗಳ ಫಲವಾಗಿ ಲಿಂಗಾಯತ ವೀರಶೈವ ಸಮಾಜ ಇಂದು ಸುಶಿಕ್ಷಿತವಾಗಲೂ ಸಾಧ್ಯವಾಗಿದೆ. ತಲೆಎತ್ತಿ ನಿಲ್ಲಬಲ್ಲ ಸಾಮಥ್ರ್ಯವನ್ನು ಹೊಂದಿದೆ.

ಲಿಂಗರಾಜರ ಹೆಸರನ್ನು ಅಮರಗೊಳಿಸಿದ ಕೆಎಲ್‍ಇ ಸಂಸ್ಥೆ:
1916ರಲ್ಲಿ ಸ್ಥಾಪನೆಗೊಂಡ ಕೆಎಲ್‍ಇ ಸಂಸ್ಥೆಯ ಸಂಸ್ಥಾಪಕರಿಗೆ ಲಿಂಗರಾಜರ ಬದುಕು ಸ್ಫೂರ್ತಿಯ ಸೆಳೆಯಾಗಿತ್ತು, ಲಿಂಗರಾಜರ ತ್ಯಾಗ ದಾನವನ್ನು ಹತ್ತಿರದಿಂದ ನೋಡಿದ್ದ ಕೆಎಲ್‍ಇ ಸಪ್ತರ್ಷಿಗಳು ತಾವು ಸ್ಥಾಪಿಸಿದ ಮೊದಲ ಕಾಲೇಜಿಗೆ ‘ಲಿಂಗರಾಜ ಕಾಲೇಜು’ ಎಂದು ನಾಮಕರಣ ಮಾಡಿ ಉಪಕೃತರಾಗಿದ್ದಾರೆ. ಅಂತೆಯೆ ಪ್ರತಿವರ್ಷ ಲಿಂಗರಾಜ ಜಯಂತಿ ಉತ್ಸವವನ್ನು ಎಲ್ಲ ಅಂಗಸಂಸ್ಥೆಗಳಲ್ಲಿ ಆಚರಿಸುತ್ತಾ ಬಂದಿದ್ದಾರೆ. ಇಂದಿಗೂ ಅದು ನಮ್ಮ ಸಂಸ್ಥೆಯಲ್ಲಿ ಲಿಂಗರಾಜರ ಜಯಂತಿ ಉತ್ಸವ ಸಮಿತಿಯು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಾ ಬಂದಿರುವುದು ಹೆಮ್ಮೆಯ ವಿಷಯ.
ಸಿರಸಂಗಿ ಲಿಂಗರಾಜರು ಕೆ.ಎಲ್.ಇ. ಸೊಸೈಟಿಗೆ ತಮ್ಮ ಆಸ್ತಿಯನ್ನು ದಾನ ಮಾಡಲಿಲ್ಲ. ಲಿಂಗರಾಜರು ಲಿಂಗೈಕ್ಯರಾಗಿ(1906) 10 ವರ್ಷಗಳ ನಂತರ ಕೆಎಲ್‍ಇ ಸಂಸ್ಥೆ ಸ್ಥಾಪನೆಗೊಂಡಿತು. ಲಿಂಗರಾಜ ಕಾಲೇಜು ನಿರ್ಮಾಣವಾದ ಮೇಲೆ ವಿದ್ಯಾರ್ಥಿಗಳ ವಸತಿಯ ನಿಲಯ ನಿರ್ಮಾಣಕ್ಕಾಗಿ ಕೆ.ಎಲ್.ಇ. ಸಂಸ್ಥಾಪಕ ಆಜೀವ ಸದಸ್ಯರು ಟ್ರಸ್ಟಿನ ನೆರವು ಪಡೆದರು. ಸಿರಸಂಗಿ ಟ್ರಸ್ಟಿನ ಮೂಲಕ 50,000 ರೂಪಾಯಿಗಳನ್ನು ಪಡೆದು ಹಾಸ್ಟೆಲ್ ನಿರ್ಮಿಸಿದರು. ಆ ಹಾಸ್ಟೇಲಿಗೆ ‘ಲಿಂಗರಾಜ ಹಾಸ್ಟೇಲ್’ ಎಂದು ನಾಮಕರಣ ಮಾಡಿ ಸಪ್ತರ್ಷಿಗಳು ಲಿಂಗರಾಜ ದಿವ್ಯಚೇತನಕ್ಕೆ ಕೃತಜ್ಞತೆ ಅರ್ಪಿಸಿದರು.
ಕೆಎಲ್‍ಇ ಪ್ರಸಾರಾಂಗವು ಕೂಡ ಲಿಂಗರಾಜರ ಕುರಿತು ಗ್ರಂಥಗಳನ್ನು ಪ್ರಕಟಿಸಿದೆ. ನಮ್ಮ ಸಂಸ್ಥೆಯ ವಿದ್ಯಾರ್ಥಿಗಳು ಲಿಂಗರಾಜರ ಮಹಾನ್ ದಾನವನ್ನು ಪಠ್ಯದ ಮೂಲಕ ಅಭ್ಯಾಸಿಸುವಂತೆ ಮಾಡಿದೆ. ಕೆಎಲ್‍ಇ ಸಂಸ್ಥೆ ಲಿಂಗರಾಜರನ್ನು ಪೂಜಿಸಿದೆ, ಗೌರವಿಸಿದೆ, ಅಮರರನ್ನಾಗಿ ಮಾಡಿದೆ.
ಬೆಳಗಾವಿಯ ಜಿಲ್ಲಾ ಆಡಳಿತವು ಕೂಡ ಕಾಲೇಜು ರಸ್ತೆಗೆ ‘ತ್ಯಾಗವೀರ ಸಿರಸಂಗಿ ಲಿಂಗರಾಜ ಕಾಲೇಜು ರಸ್ತೆ’ ಎಂದು ಮರುನಾಮಕರಣ ಮಾಡಿ ಕೃತಜ್ಞತೆಯನ್ನು ಸಲ್ಲಿಸಿರುವುದು ಹೆಮ್ಮೆಯ ಸಂಗತಿ. ಲಿಂಗರಾಜರು ಲಿಂಗೈಕ್ಯರಾಗಿ ಒಂದುನೂರಾ ಹತ್ತೊಂಬತ್ತು ವರ್ಷವಾಯಿತು. ಅವರ ನೆನಪು ಸದಾಸ್ಮರಣೀಯ ಇಂದು ಆ ಪುಣ್ಯಪುರುಷರ 164ನೇ ಜನ್ಮದಿನ. ಇಂತಹ ಪುಣ್ಯಪುರುಷರನ್ನು, ಪ್ರಾಥಃಸ್ಮರಣೀಯರನ್ನು ಸ್ಮರಿಸುವುದು ಅವರ ಪಥದಲ್ಲಿ ಮುನ್ನಡೆಯುವುದು ‘ಘನಮುಕ್ತಿ ಪದಂ’ ಅಲ್ಲವೇ.