ಬೆಂಗಳೂರು : ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಟಕ್ಕರ್ ಕೊಡುವ ಉದ್ದೇಶದಿಂದ ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಮುಂದಾಗಿತ್ತು. ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಭರ್ಜರಿ ಸಿದ್ಧತೆ ಮಾಡಿಕೊಂಡಿದೆ. ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣಕ್ಕೆ ಮುಂಚೆಯೇ ಇದರ ಪ್ಲಾನ್‌ಗಳು ಬಹುತೇಕ ಫೈನಲ್ ಆಗಿವೆ. ಇನ್ನು ತಮಿಳುನಾಡಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಪ್ರಾರಂಭದಲ್ಲೇ ಸಂಕಷ್ಟ ಎದುರಾಗಿದೆ. ಈ ಮೂಲಕ ತಮಿಳುನಾಡಿನ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಹೌದು ತಮಿಳುನಾಡಿನಲ್ಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವುದಕ್ಕೆ ತಮಿಳುನಾಡು ಸರ್ಕಾರ ಉತ್ಸುಕವಾಗಿದ್ದರೂ. ಅಲ್ಲಿನ ಜನ ಈ ಯೋಜನೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಕರ್ನಾಟಕಕ್ಕೆ ಟಕ್ಕರ್ ಕೊಡುವುದಕ್ಕೆ ಮುಂದಾಗಿದ್ದ ತಮಿಳುನಾಡಿಗೆ ಅಲ್ಲಿನ ಜನರಿಂದಲೇ ವಿರೋಧ ವ್ಯಕ್ತವಾಗುತ್ತಿದೆ. ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಮುಂದಿನ ದಿನಗಳಲ್ಲಿ ಒತ್ತಡ ಹೆಚ್ಚಾಗಲಿದೆ. ಇದೇ ಕಾರಣಕ್ಕಾಗಿ ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಭರ್ಜರಿ ಸಿದ್ಧತೆ ನಡೆದಿದೆ. ಇದರ ನಡುವೆ ತಮಿಳುನಾಡು ಸಹ ಬೆಂಗಳೂರಿನ ಗಡಿಯಿಂದ ಕೆಲವೇ ಕಿ.ಮೀ ದೂರದಲ್ಲಿರುವ ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಪ್ಲಾನ್ ಮಾಡಿದೆ. ಇದು ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣ ಹಾಗೂ ಎರಡನೇ ವಿಮಾನ ನಿಲ್ದಾಣಕ್ಕೆ ಹೊಡೆತ ಬೀಳಲಿದೆ ಎಂದು ಅಂದಾಜಿಸಲಾಗಿತ್ತು.
ರೈತರಿಂದ ವಿರೋಧ: ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಹೊಸೂರಿನ ಸುತ್ತಮುತ್ತಲಿನ ಹಳ್ಳಿಗಳ ರೈತರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಹೊಸೂರಿನ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುವುದರಿಂದ ತಮಿಳುನಾಡಿನ ಡೆಂಕಣಿಕೊಟ್ಟೈ ಮತ್ತು ಹೊಸೂರು ತಾಲ್ಲೂಕುಗಳ ಏಳು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಕಷ್ಟ ಎದುರಾಗಲಿದೆ. ವಿಮಾನ ನಿಲ್ದಾಣದಿಂದ ಕೃಷಿಭೂಮಿಗಳ ಮೇಲೆ ಪರಿಣಾಮ ಬೀರಲಿದೆ. ಕೃಷಿ ಹಾಗೂ ಇಲ್ಲಿನ ಜನರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎನ್ನುವ ಆತಂಕವನ್ನು ತಮಿಳುನಾಡಿನವರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ತಮಿಳುನಾಡಿನ ಹೊಸೂರಲ್ಲಿ ವಿಮಾನ ನಿಲ್ದಾಣ ಮಾಡುವುದರಿಂದ ಹೊಸಪುರಂ, ಕಲುಕೊಂಡಪಲ್ಲಿ ಹಾಗೂ ಗೋಬನಪಲ್ಲಿ ಎನ್ನುವ ಭಾಗದ ಜನರಿಗೆ ಕಷ್ಟವಾಗಲಿದೆ. ಡ್ರೋನ್ ಸರ್ವೆಗಳು ನಡೆದಿದ್ದು. ಡ್ರೋನ್ ಸರ್ವೆಗೆ ಸಹ ಸ್ಥಳೀಯರು ಸಹ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ಹೇಳಲಾಗಿದೆ. ಇದರ ನಡುವೆ ತಮಿಳುನಾಡು ಸರ್ಕಾರವು ಕೃಷ್ಣಗಿರಿ ಜಿಲ್ಲೆಯಲ್ಲಿ ಎರಡು ಜಾಗಗಳನ್ನು ಶಾರ್ಟ್ ಲಿಸ್ಟ್ ಮಾಡಿದೆ ಎಂದು ಹೇಳಲಾಗಿದೆ.
ಹೊಸೂರಲ್ಲಿ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಉತ್ಸಾಹ: ತಮಿಳುನಾಡು ಸರ್ಕಾರವು ಹೊಸೂರಿನಲ್ಲಿ ಎರಡನೇ ವಿಮಾನ ನಿಲ್ದಾಣ ನಿರ್ಮಾಣ ಮಾಡುವುದಕ್ಕೆ ಅತ್ಯಂತ ಉತ್ಸುಕವಾಗಿದೆ. ಇದಕ್ಕೆ ಮುಖ್ಯ ಕಾರಣ ತಮಿಳುನಾಡಿನ ಕೈಗಾರಿಕಾ ಪ್ರದೇಶಗಳಲ್ಲಿ ಹೊಸೂರು ಪ್ರಮುಖ ಪ್ರದೇಶವಾಗಿದೆ. ಅಲ್ಲದೆ ಬೆಂಗಳೂರಿನಿಂದ ಕೆಲವೇ ಕಿ.ಮೀ ಅಂತರದಲ್ಲಿ ಇದೆ. ಹೀಗಾಗಿ, ಇಲ್ಲಿ ಎರಡು ಪ್ರದೇಶಗಳನ್ನು ತಮಿಳುನಾಡು ಸರ್ಕಾರ ಅಂತಿಮ ಮಾಡಿದೆ. ವಿಮಾನ ನಿಲ್ದಾಣದ ವಿಚಾರದಲ್ಲಿ ತಮಿಳುನಾಡು ಸರ್ಕಾರವು ಕರ್ನಾಟಕ ಸರ್ಕಾರಕ್ಕಿಂತ ಮುಂಚೂಣಿಯಲ್ಲಿದೆ.