ನವದೆಹಲಿ: ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಕೊನೆಗೂ ನೇಮಕ ನಡೆದಿದೆ.

ಅತಿಶಿ ಅವರು ನೂತನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಲಿದ್ದಾರೆ.
ಶಿಕ್ಷಣ ಮತ್ತು ಪಿಡಬ್ಲ್ಯುಡಿಯಂತಹ ಪ್ರಮುಖ ಖಾತೆಗಳನ್ನು ಹೊಂದಿರುವ ದೆಹಲಿ ಸಚಿವರಾದ ಅತಿಶಿ ಮುಖ್ಯಮಂತ್ರಿ ಹುದ್ದೆಯ ಪ್ರಮುಖ ಸ್ಪರ್ಧಿಗಳಲ್ಲಿ ಒಬ್ಬರು. ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿ ಮತ್ತು ರೋಡ್ಸ್ ಸ್ಕಾಲರ್‌ ಆದ ಅತಿಶಿ ಅವರು ದೆಹಲಿಯ ಶಾಲೆಗಳಲ್ಲಿ ಶಿಕ್ಷಣವನ್ನು ಕೂಲಂಕಷವಾಗಿ ಪರಿಶೀಲಿಸಲು ಎಎಪಿ(AAP)ಯ ಪ್ರಮುಖ ಪ್ರಕ್ರಿಯೆಗಳಲ್ಲಿ ವ್ಯಾಪಕವಾಗಿ ಕೆಲಸ ಮಾಡಿದ್ದಾರೆ. ಕಲ್ಕಾಜಿಯ ಶಾಸಕರಾಗಿದ್ದ 43 ವರ್ಷದ ಅತಿಶಿ ಈಗ ರದ್ದುಗೊಂಡಿರುವ ದೆಹಲಿ ಮದ್ಯ ನೀತಿಗೆ ಸಂಬಂಧಿಸಿದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಸೋಡಿಯಾ ಅವರನ್ನು ಬಂಧಿಸಿದ ನಂತರ ಸಚಿವರಾದರು. ಕೇಜ್ರಿವಾಲ್ ಮತ್ತು ಸಿಸೋಡಿಯಾ ಜೈಲಿನಲ್ಲಿದ್ದಾಗ , ಅತಿಶಿ ಪಕ್ಷದ ಪ್ರಮುಖರಾಗಿ ಆ ಸ್ಥಾನವನ್ನು ನಿಭಾಯಿಸಿದರು. ಆಗಸ್ಟ್ 15 ರಂದು, ದೆಹಲಿ ಸರ್ಕಾರದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಲು ಕೇಜ್ರಿವಾಲ್ ಅವರು ಅತಿಶಿ ಅವರನ್ನು ಆಯ್ಕೆ ಮಾಡಿದ್ದರು. ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅವರು ಕೇಜ್ರಿವಾಲ್‌ ಅವರ ಯೋಜನೆಯನ್ನು ವಿಫಲಗೊಳಿಸಿದರು. ಆದರೆ ಎಎಪಿ ನಾಯಕತ್ವವು ಶ್ರೀಮತಿ ಅತಿಶಿಯಲ್ಲಿ ಹೆಚ್ಚಿನ ನಂಬಿಕೆ ಇರಿಸಿದೆ ಎಂಬುದು ಸ್ಪಷ್ಟವಾಗುತ್ತದೆ.

ಎರಡು ದಿನದಲ್ಲಿ ರಾಜೀನಾಮೆ ನೀಡುವುದಾಗಿ ಅರವಿಂದ ಕೇಜ್ರಿವಾಲ್ ಘೋಷಿಸಿದ್ದು, ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಜನರ ತೀರ್ಪಿನ ನಂತರವೇ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ ಎಂದು ಹೇಳಿದ್ದರು.

ಎಎಪಿ ಪಕ್ಷದ ಶಾಸಕಾಂಗ ಸಭೆಯಲ್ಲಿ ಅರವಿಂದ ಕೇಜ್ರಿವಾಲ್ ಅವರು ಸಚಿವೆ ಆತಿಶಿ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಪಕ್ಷವು ಸರ್ವಾನುಮತದಿಂದ ಒಪ್ಪಿಗೆ ನೀಡಿದೆ.

ಭ್ರಷ್ಟಾಚಾರ ಪ್ರಕರಣದಲ್ಲಿ ಜೈಲು ಸೇರಿದ್ದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಜಾಮೀನು ಪಡೆದು ಹೊರಬಂದ ಬಳಿಕ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಹೇಳಿದ್ದರು. ದೆಹಲಿ ಜನತೆ ತಮ್ಮನ್ನು ಪ್ರಾಮಾಣಿಕ ಎಂದು ಒಪ್ಪಿಕೊಂಡ ಮೇಲೆ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದಾಗಿ ಪಕ್ಷದ ಕಾರ್ಯಕರ್ತರೊಂದಿಗಿನ ಸಭೆಯಲ್ಲಿ ಘೋಷಣೆ ಮಾಡಿದ್ದರು.

ಇಂದು ಸಂಜೆ ಕೇಜ್ರಿವಾಲ್ ಅವರು, ಲೆಫ್ಟಿನಂಟ್ ಗವರ್ನರ್ ವಿ.ಕೆ.ಸಕ್ಸೇನಾ ಅವರನ್ನು ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ.

ಕೇಜ್ರಿವಾಲ್ ಅವರ ಅನುಪಸ್ಥಿತಿಯಲ್ಲಿ ಬಹುತೇಕ ಇಲಾಖೆಗಳ ಉಸ್ತುವಾರಿ ಹೊಂದಿದ್ದ ಸಚಿವೆ ಆತಿಶಿ, ಕೇಜ್ರಿವಾಲ್ ಅವರ ನಿಷ್ಠರು ಎಂದೇ ಗುರುತಿಸಲಾಗಿದೆ.