ನವದೆಹಲಿ: ಲೋಕಪಾಲ್ ಅಧ್ಯಕ್ಷರಾಗಿ ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರನ್ನು ಮಂಗಳವಾರ ನೇಮಿಸಲಾಗಿದೆ.
ನ್ಯಾಯಾಂಗ ಸದಸ್ಯರಾಗಿ ನಿವೃತ್ತ ಮುಖ್ಯ ನ್ಯಾಯಮೂರ್ತಿಗಳಾದ ಎಲ್.ನಾರಾಯಣಸ್ವಾಮಿ, ರಿತುರಾಜ್ ಅವಸ್ತಿ ಹಾಗೂ ಸಂಜಯ್ ಯಾದವ್ ಅವರನ್ನು ನೇಮಕ ಮಾಡಲಾಗಿದೆ. ಸುಶೀಲ್ ಚಂದ್ರ, ಪಂಕಜ್ ಕುಮಾರ್ ಮತ್ತು ಅಜಯ್ ಟಿರ್ಕಿ ನ್ಯಾಯಾಂಗೇತರ ಸದಸ್ಯರಾಗಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನವರಾದ ಎಲ್. ನಾರಾಯಣಸ್ವಾಮಿ, ಕಾನೂನು ಪದವಿ ಪೂರ್ಣಗೊಳಿಸಿ 1987ರಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. 2007ರ ಜುಲೈ 4ರಂದು ಹೈಕೋರ್ಟ್ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. 2009ರ ಏಪ್ರಿಲ್ 17ರಿಂದ ಕಾಯಂ ನ್ಯಾಯಮೂರ್ತಿಯಾಗಿದ್ದರು. 2019ರ ಆಗಸ್ಟ್ನಲ್ಲಿ ಹಿಮಾಚಲಪ್ರದೇಶ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದ ಅವರು, 2021ರ ಜುಲೈ 30ರಂದು ನಿವೃತ್ತರಾಗಿದ್ದರು. ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರನ್ನಾಗಿ 2023ರ ನವೆಂಬರ್ನಲ್ಲಿ ನೇಮಕ ಮಾಡಲಾಗಿತ್ತು.
ರಿತುರಾಜ್ ಅವಸ್ತಿ ಅವರು ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿ 2021ರ ಅಕ್ಟೋಬರ್ನಿಂದ 2022ರ ಜುಲೈವರೆಗೆ ಕಾರ್ಯನಿರ್ವಹಿಸಿದ್ದರು. 2022ರ ನವೆಂಬರ್ನಲ್ಲಿ ಭಾರತೀಯ ಕಾನೂನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.
ಲೋಕಪಾಲ್, ಅಧ್ಯಕ್ಷರು ಸೇರಿದಂತೆ ಎಂಟು ಸದಸ್ಯರನ್ನು ಹೊಂದಿದೆ. ಇದರಲ್ಲಿ ನಾಲ್ವರು ನ್ಯಾಯಾಂಗ ಮತ್ತು ಇತರರು ನ್ಯಾಯಾಂಗೇತರ ಸದಸ್ಯರು.