
ನವದೆಹಲಿ: ಗ್ರಾಹಕರಿಗೆ ರಕ್ಷಣೆ ಕಲ್ಪಿಸಲು ಗ್ಯಾಸ್ ಮೀಟರ್‌ಗಳಿಗೆ ಸಂಬಂಧಿಸಿದ ಹೊಸ ಕರಡು ನಿಯಮಗಳನ್ನು ರೂಪಿಸಲಾಗಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ ಸಚಿವಾಲಯವು ಸೋಮವಾರ ತಿಳಿಸಿದೆ.
ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶಕ್ಕೆ ಬಳಸುವ ಎಲ್ಲಾ ಗ್ಯಾಸ್ ಮೀಟರ್‌ಗಳನ್ನು ಬಳಸುವ ಮೊದಲು ಪರೀಕ್ಷಿಸುವುದು, ಪರಿಶೀಲಿಸುವುದು ಮತ್ತು ಅನುಮೋದಿಸುವಿಕೆಯನ್ನು ಕಡ್ಡಾಯಗೊಳಿಸುವ ಹೊಸ ನಿಯಮಗಳ ಚೌಕಟ್ಟನ್ನು ರಚಿಸಲಾಗಿದೆ ಎಂದು ತಿಳಿಸಿದೆ.
ಕಾನೂನು ಮಾಪನಶಾಸ್ತ್ರದ ಸಾಮಾನ್ಯ ನಿಯಮಗಳು-2011ರ ಅಡಿ ಅನಿಲ ಮಾಪನದಲ್ಲಿ ನಿಖರತೆ ಮತ್ತು ವಿಶ್ವಾಸಾರ್ಹತೆಯನ್ನು ಖಚಿತಪಡಿಸುವುದು, ಬಿಲ್ಲಿಂಗ್ (ಪಾವತಿ) ವಿವಾದಗಳನ್ನು ತಡೆಗಟ್ಟುವುದು ಮತ್ತು ದೋಷಯುಕ್ತ ಉಪಕರಣಗಳಿಂದ ಗ್ರಾಹಕರನ್ನು ರಕ್ಷಿಸುವ ಗುರಿಯನ್ನು ಹೊಂದಿದೆ.
ಕರಡು ನಿಯಮಗಳು ಬಳಕೆಯಲ್ಲಿರುವ ಮೀಟರ್‌ಗಳ ಮರು ಪರಿಶೀಲನೆಯನ್ನು ಒಳಗೊಂಡಿವೆ. ಅಂತರರಾಷ್ಟ್ರೀಯ ಕಾನೂನು ಮಾಪನಶಾಸ್ತ್ರ ಮಾನದಂಡಗಳಿಗೆ ಅನುಗುಣವಾಗಿ ತಯಾರಕರು ಮತ್ತು ವಿತರಣಾ ಕಂಪನಿಗಳಿಗೆ ಈ ಚೌಕಟ್ಟನ್ನು ಸ್ಥಾಪಿಸಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.