
ಮಂಗಳೂರು : ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್ ತಮಗೆ ಜೀವ ಬೆದರಿಕೆ ಇರುವ ವಿಚಾರವಾಗಿ ಮಂಗಳೂರಿನ ಕದ್ರಿ ಠಾಣೆಗೆ ಭಾನುವಾರ ದೂರು ನೀಡಿದ್ದಾರೆ.
ಶರಣ್ ಪಂಪ್‌ವೆಲ್ ನೀಡಿರುವ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಕದ್ರಿ ಠಾಣೆ ಪೊಲೀಸರು ಇನ್‌ಫಾರ್ಮೇಶನ್ ಟೆಕ್ನಾಲಜಿ ಆ್ಯಕ್ಟ್ ಮತ್ತು ಬಿಎನ್‌ಎಸ್ ಕಾಯ್ದೆ 351(4) ಸೆಕ್ಷನ್ ಅಡಿ ಪ್ರಕರಣ ದಾಖಲಿಸಿದ್ದಾರೆ.
ಶರಣ್ ಪಂಪ್‌ವೆಲ್‌ಗೆ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಜೀವ ಬೆದರಿಕೆ ಒಡ್ಡಿದ್ದರು. “ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್. ಶರಣ್ ಹತ್ಯೆಯಾಗಲು ತಯಾರಾಗು” ಎಂದು ಸಾಮಾಜಿಕ ಮಾಧ್ಯಮ ಸಂದೇಶದಲ್ಲಿ ಬೆದರಿಕೆ ಹಾಕಲಾಗಿತ್ತು. ಶರಣ್ ಪಂಪ್‌ವೆಲ್ ಮಾತ್ರವಲ್ಲದೆ ಇನ್ನೂ ಕೆಲವು ಮಂದಿ ಮುಖಂಡರಿಗೆ ಸಾಮಾಜಿಕ ಮಾಧ್ಯಮದ ಮೂಲಕ ಬೆದರಿಕೆ ಹಾಕಲಾಗಿದೆ.
ಬಜರಂಗದಳ ಮುಖಂಡ ಭರತ್ ಕುಮ್ಡೇಲ್ ಹತ್ಯೆ ಬೆದರಿಕೆ ಸಂದೇಶ ವಿಚಾರವಾಗಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಿಎನ್‌ಎಸ್ ಕಾಯ್ದೆ 196(1)(C), 353(2) ಸೆಕ್ಷನ್ ಅಡಿ ಪ್ರಕರಣ ದಾಖಲಿಸಲಾಗಿದೆ.
“ಅಶ್ರಫ್ ಕೊಂದ ಭರತ್‌ನನ್ನು ಮರೆತಿಲ್ಲ ಎಂದು ಕಿಡಿಗೇಡಿಗಳು ಪೋಸ್ಟ್ ಹಾಕಿದ್ದರು. “Wait and watch” ಎಂದು ತಲ್ವಾರ್ ಫೋಟೋ ಪೋಸ್ಟ್ ಮಾಡಿದ್ದರು.
ಸುಹಾಸ್ ಶೆಟ್ಟಿ ಕೊಲೆ ಪ್ರಕರಣದಿಂದ ಕರಾವಳಿಯಲ್ಲಿ ಕೋಮು ಉದ್ವಿಗ್ನತೆ ಹೆಚ್ಚಾಗಿರುವ ಸಂದರ್ಭದಲ್ಲೇ ಇಂತಹ ಸಾಮಾಜಿಕ ಮಾಧ್ಯಮ ಸಂದೇಶಗಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನಿಶ್ಚಿತತೆ ಸೃಷ್ಟಿಸಿವೆ. ಮುಂದಿನ ಟಾರ್ಗೆಟ್ ಶರಣ್ ಪಂಪ್‌ವೆಲ್ ಮತ್ತು ಭರತ್ ಕುಮ್ಡೇಲ್ ಎಂಬ ಬರಹವುಳ್ಳ ಸಂದೇಶಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದವು.