ಬೆಂಗಳೂರು: ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ (ಸಿಜೆ) ನಿಲಯ್ ವಿಪಿನ್​ಚಂದ್ರ ಅಂಜಾರಿಯ ಭಾನುವಾರ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ ಗೌಪ್ಯತಾ ಪ್ರಮಾಣವಚನ ಬೋಧಿಸಿದರು.

ನ್ಯಾ.ನಿಲಯ್ ವಿ.ಅಂಜಾರಿಯ ಅವರನ್ನು ರಾಜ್ಯ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಇತ್ತೀಚೆಗೆ ನೇಮಕ ಮಾಡಲಾಗಿತ್ತು. ಗುಜರಾತ್ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ಅವರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಫೆಬ್ರವರಿ ಆರಂಭದಲ್ಲಿ ಶಿಫಾರಸು ಮಾಡಿತ್ತು. ಇತ್ತೀಚೆಗೆ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ.ಎಸ್.ದಿನೇಶ್ ಕುಮಾರ್ ಅವರು ಫೆಬ್ರವರಿ 24ರಂದು ನಿವೃತ್ತಿಯಾಗಿದ್ದರು. ಅವರು ಕೇವಲ 24 ದಿನಗಳ ಕಾಲ ಮಾತ್ರ ಮುಖ್ಯ ನ್ಯಾಯಮೂರ್ತಿಯಾಗಿದ್ದರು. ಇತ್ತೀಚಿನ ವರ್ಷಗಳಲ್ಲಿ ಅತಿ ಕಡಿಮೆ ಅವಧಿಗೆ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ ಜಸ್ಟೀಸ್​​​ ಅವರಾಗಿದ್ದಾರೆ.

ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ ಎನ್.​ವಿ.ಅಂಜಾರಿಯ ಅವರನ್ನು ಕರ್ನಾಟಕ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಶಿಫಾರಸು ಮಾಡಿತ್ತು. ಅಂಜಾರಿಯ ನವೆಂಬರ್ 2011ರಲ್ಲಿ ಗುಜರಾತ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದರು. ಅಂದಿನಿಂದಲೂ ಅಲ್ಲಿಯೇ ಕಾರ್ಯನಿರ್ವಹಿಸಿದ್ದಾರೆ. ಅದಕ್ಕೂ ಮುನ್ನ ಗುಜರಾತ್ ಹೈಕೋರ್ಟ್‌ನಲ್ಲಿ ಸಿವಿಲ್, ಸಾಂವಿಧಾನಿಕ, ಕಂಪೆನಿ ಕಾನೂನು, ಕಾರ್ಮಿಕ ಮತ್ತು ಸೇವಾ ವಿಷಯಗಳಲ್ಲಿ ಅಭ್ಯಾಸ ಮಾಡಿದ್ದರು.

ಮುಖ್ಯ ನ್ಯಾಯಮೂರ್ತಿ ವಿಪಿನ್​ಚಂದ್ರ ಅಂಜಾರಿಯ ಪ್ರಮಾಣವಚನ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ.ಪಾಟೀಲ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜ್, ಮಾಜಿ ಕೇಂದ್ರ ಸಚಿವ ಡಾ.ಎಂ.ವೀರಪ್ಪ ಮೊಯಿಲಿ ಇತರರು ಇದ್ದರು.