ಬೆಂಗಳೂರು: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ರಾಜ್ಯದ ಯಾವುದೇ ಬೇಡಿಕೆಗಳಿಗೂ ಮನ್ನಣೆ ನೀಡದೆ ಅತ್ಯಂತ ನಿರಾಶಾದಾಯಕ ಬಜೆಟ್‌ ಮಂಡಿಸಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.

ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ನಿರ್ಮಲಾ ಸೀತಾರಾಮನ್ ಅವರು ರಾಜ್ಯದ ಹಿತವನ್ನು ಸಂಪೂರ್ಣವಾಗಿ ನಿರ್ಲಕ್ಷಿಸುವ ಮೂಲಕ ರಾಜ್ಯದ ಜನತೆಯ ಕೈಗೆ ಚೊಂಬು ಕೊಟ್ಟಿದ್ದಾರೆ. ಪ್ರಧಾನ ಮಂತ್ರಿಗಳು ತನ್ನ ಅಧಿಕಾರ ಉಳಿಸಿಕೊಳ್ಳುವ ಉದ್ದೇಶದಿಂದ ಆಂಧ್ರಪ್ರದೇಶ ಮತ್ತು ಬಿಹಾರ ರಾಜ್ಯಗಳಿಗೆ ವಿಶೇಷ ಅನುದಾನ ಒದಗಿಸಿದ್ದು, ಇತರ ರಾಜ್ಯಗಳನ್ನು ಕಡೆಗಣಿಸಿದ್ದಾರೆ ಎಂದರು.

ಬಜೆಟ್‌ ಪೂರ್ವ ಸಭೆಯಲ್ಲಿ ರಾಜ್ಯ ಸರ್ಕಾರ ಹಲವಾರು ಮನವಿಗಳನ್ನು ಮುಂದಿರಿಸಿತ್ತು. ಆದರೆ ಯಾವುದೇ ಬೇಡಿಕೆಗಳಿಗೂ ಕೇಂದ್ರ ಹಣಕಾಸು ಸಚಿವರು ಸ್ಪಂದಿಸಿಲ್ಲ.
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ಅನುದಾನ ಒದಗಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ನಿರ್ಮಲಾ ಸೀತಾರಾಮ್‌ ಅವರು ಘೋಷಿಸಿದ್ದರು. ಆದರೆ ಈ ಯೋಜನೆಗೆ ನಯಾ ಪೈಸೆ ಒದಗಿಸಿಲ್ಲ. ಈ ಆಯವ್ಯಯದಲ್ಲಿ ಒದಗಿಸುವಂತೆ ಕೋರಲಾಗಿತ್ತು. ಕಲ್ಯಾಣ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಈ ವರ್ಷ 5ಸಾವಿರ ಕೋಟಿ ರೂ. ಅನುದಾನ ಒದಗಿಸುತ್ತಿದೆ. ಆದರೆ ಇದಕ್ಕೆ ಪೂರಕವಾಗಿ ಹಿಂದುಳಿದ ತಾಲ್ಲೂಕುಗಳಿಗೆ ಅನುದಾನ ಒದಗಿಸುವಂತೆ ಮನವಿ ಮಾಡಲಾಗಿತ್ತು. ಇದೇ ರೀತಿ ಮಹಾದಾಯಿ ಯೋಜನೆ, ಮೇಕೆದಾಟು ಯೋಜನೆ, ಕೃಷ್ಣಾ ಮೇಲ್ದಂಡೆ ಯೋಜನೆಗಳ ಕುರಿತು ಬಜೆಟ್‌ನಲ್ಲಿ ಯಾವುದೇ ಪ್ರಸ್ತಾಪ ಮಾಡದೆ ರೈತರಿಗೆ ಮೋಸ ಮಾಡಿದ್ದಾರೆ.

15 ನೇ ಹಣಕಾಸು ಆಯೋಗದ ಶಿಫಾರಸಿನಂತೆ ಪೆರಿಫೆರಲ್‌ ರಸ್ತೆ ನಿರ್ಮಾಣ, ಕೆರೆಗಳ ಅಭಿವೃದ್ಧಿ, ಬೆಂಗಳೂರು ನಗರಾಭಿವೃದ್ಧಿ ಯೋಜನೆಗಳಿಗೆ ಒಟ್ಟು 11,485 ಕೋಟಿ ರೂ. ಅನುದಾನವನ್ನು ನೀಡುವಂತೆ ಕೋರಲಾಗಿತ್ತು. ಜೊತೆಗೆ ಹಲವಾರು ವರ್ಷಗಳಿಂದ ರಾಯಚೂರಿನಲ್ಲಿ ಏಮ್ಸ್‌ ಸ್ಥಾಪಿಸುವಂತೆ ಬೇಡಿಕೆಯಿದ್ದು, ಬಜೆಟ್‌ ಪೂರ್ವಭಾವಿ ಸಭೆಯಲ್ಲಿಯೂ ಈ ಕುರಿತು ಬೇಡಿಕೆ ಸಲ್ಲಿಸಲಾಗಿತ್ತು. ಈ ಯಾವ ಮನವಿಗಳಿಗೂ ಕೇಂದ್ರ ಸರ್ಕಾರ ಮನ್ನಣೆ ನೀಡಿಲ್ಲ.
ಈ ಹಿಂದಿನ ಬಜೆಟ್‌ನಲ್ಲಿ ರಾಜ್ಯಕ್ಕೆ ಘೋಷಿಸಿದ್ದ ಯೋಜನೆಗಳಿಗೇ ಕೇಂದ್ರ ಸರ್ಕಾರ ಇನ್ನೂ ಯಾವುದೇ ಅನುದಾನ ಒದಗಿಸಿಲ್ಲ. ಹೀಗಾಗಿ ಈ ಬಾರಿ ಕೈಗಾರಿಕಾ ಕಾರಿಡಾರ್ ಬಗ್ಗೆ ಪ್ರಸ್ತಾಪಿಸಿರುವುದು ಕೇವಲ ಘೋಷಣೆಯಾಗಿ ಮಾತ್ರ ಉಳಿಯಲಿದೆ ಎಂದರು.

ಈ ಬಜೆಟ್‌ ಜನವಿರೋಧಿಯಾಗಿದ್ದು, ವಿಶೇಷವಾಗಿ ಬಡವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದೆ.
ಈ ಬಜೆಟ್ ನಲ್ಲಿ ರೈತರಿಗೆ ದೊಡ್ಡ ಅನ್ಯಾಯ ಮಾಡಿದ್ದಾರೆ. ರೈತರು 5 ವರ್ಷಗಳಿಂದ ಕನಿಷ್ಠ ಬೆಂಬಲ ಬೆಲೆ ಕಾಯ್ದೆ ರಚಿಸಬೇಕೆಂದು ಒತ್ತಾಯ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಬಜೆಟ್ ನಲ್ಲಿ ಚಕಾರವನ್ನೇ ಎತ್ತಿಲ್ಲ. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸುಗಳ ಜಾರಿ ಬಗ್ಗೆಯೂ ಯಾವುದೇ ಮಾತು ಆಡದೆ ರೈತರಿಗೆ ಪಂಗನಾಮ ಹಾಕಿದೆ ಎಂದು ಹೇಳಿದರು.

ಕೇಂದ್ರ ಸಂಪುಟದಲ್ಲಿ ರಾಜ್ಯದ ಐದು ಜನ‌ ಸಚಿವರಾಗಿದ್ದರೂ, ರಾಜ್ಯಕ್ಕೆ ಯಾವುದೇ ಪ್ರಯೋಜನವಾಗಿಲ್ಲ, ಈ‌ ಐದೂ ಮಂದಿ ರಾಜ್ಯಕ್ಕೆ ಅನುಕೂಲ ಮಾಡಿಸುವಲ್ಲಿ ವಿಫಲರಾಗಿದ್ದಾರೆ.
ಆರೋಗ್ಯ, ರಕ್ಷಣೆ, ಆರೋಗ್ಯ, ಐಟಿ ಮತ್ತು ಸಂವಹನ ಕ್ಷೇತ್ರಗಳಿಗೆ ಕಳೆದ ಫೆಬ್ರವರಿಯಲ್ಲಿ ಮಂಡಿಸಲಾಗಿದ್ದ ಮಧ್ಯಂತರ ಬಜೆಟ್‌ನಲ್ಲಿ ಘೋಷಿಸಿದ್ದ ಅನುದಾನವನ್ನು ಈಗ ಕಡಿತಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಅಲ್ಪಸಂಖ್ಯಾತ ಅಭಿವೃದ್ಧಿಗೆ ಅನುದಾನದಲ್ಲೂ ಗಣನೀಯವಾಗಿ ಕಡಿತಗೊಳಿಸಿರುವುದು ಈ ಸಮುದಾಯಗಳಿಗೆ ಎಸಗಿರುವ ದ್ರೋಹವಾಗಿದೆ ಎಂದರು.

*ಆಗಸ್ಟ್‌ 28 ರಂದು ರಾಜ್ಯಕ್ಕೆ 16ನೇ ಹಣಕಾಸು ಆಯೋಗ ಭೇಟಿ*

ಕೇಂದ್ರದ 16 ನೇ ಹಣಕಾಸು ಆಯೋಗವು ಆಗಸ್ಟ್‌ 28 ರಂದು ರಾಜ್ಯಕ್ಕೆ ಭೇಟಿ ನೀಡಲಿದ್ದು, ಈ ಸಂದರ್ಭದಲ್ಲಿ ಹಿಂದಿನ ಬಾರಿ ರಾಜ್ಯಕ್ಕೆ ಆಗಿರುವ ಅನ್ಯಾಯ ಸರಿಪಡಿಸುವಂತೆ ಮನವಿ ಮಾಡಲಾಗುವುದು. ಈ ಕುರಿತು ಸಮರ್ಥವಾಗಿ ವಿಷಯ ಮಂಡಿಸಲು ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳ ಆರ್ಥಿಕ‌ ಸಲಹೆಗಾರ ಬಸವರಾಜ ರಾಯರೆಡ್ಡಿ, ಸರ್ಕಾರದ ಅಪರ ಮುಖ್ಯಕಾರ್ಯದರ್ಶಿ ಎಲ್.ಕೆ.ಅತೀಕ್, ರಾಜಕೀಯ ಕಾರ್ಯದರ್ಶಿಗಳಾದ ಗೋವದರಾಜು, ನಸೀರ್ ಅಹಮದ್ ಉಪಸ್ಥಿತರಿದ್ದರು.

ರಾಜಕೀಯ ಸೇಡು, ದ್ವೇಷದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತೇವೆ:ಸಿಎಂ ಸಿದ್ದರಾಮಯ್ಯ-ರಾಜಕೀಯ ಸೇಡು, ದ್ವೇಷದಿಂದ ಕೂಡಿದ ನಡೆಯನ್ನು ನಮ್ಮ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಇದನ್ನು ನಾವು ಪ್ರತಿಭಟಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ವಿಧಾನಸೌಧದ ಗಾಂಧಿ ಪ್ರತಿಮೆಯ ಬಳಿ ಸಾಂಕೇತಿಕವಾಗಿ ಹಮ್ಮಿಕೊಂಡಿದ್ದ ಪ್ರತಿಭಟನೆಯ ನಂತರ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು.

ಪ್ರಜಾಪ್ರಭುತ್ವಕ್ಕೆ ಮಾರಕವಾದ ನಡೆಯಿದು. ಪ್ರಜಾಪ್ರಭುತ್ವದಲ್ಲಿ ಯಾವುದೇ ತನಿಖೆಯನ್ನು ಕಾನೂನುಬಾಹಿರವಾಗಿ ಮಾಡುವಂತಿಲ್ಲ ಎಂದರು.

*ಸಂಸತ್ತಿನಲ್ಲಿ ಪ್ರಸ್ತಾಪ ಮಾಡಲಾಗುವುದು*

ಸಂಸತ್ತಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಾಲ್ಮೀಕಿ ನಿಗಮದ ಬಗ್ಗೆ ಪ್ರಸ್ತಾಪಿಸಿರುವ ಬಗ್ಗೆ ಮಾತನಾಡಿ ಈ ಬಗ್ಗೆ ನಮ್ಮ ಪಕ್ಷದ ವರಿಷ್ಠರೊಂದಿಗೆ ಮಾತನಾಡಿದ್ದು ಇಡಿ ದುರುಪಯೋಗ ಮಾಡಿಕೊಳ್ಳುತ್ತಿರುವ ಬಗ್ಗೆ ಪಕ್ಷದ ವರಿಷ್ಠರು ಕೂಡ ಈ ವಿಷಯವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.

*ಕಾನೂನಿನ ಹೋರಾಟಕೆ ಸಿದ್ಧ*
ನಾವು ಕೂಡ ಕಾನೂನಿನ ಪ್ರಕಾರ ಹೋರಾಟ ಮಾಡಲು ಸಿದ್ಧರಿದ್ದೇವೆ. ಇಡಿ, ಸಿಬಿಐ ಏನು ಮಾಡುತ್ತಾರೆ ಎಂದು ನಮಗೆ ತಿಳಿದಿಲ್ಲ. ಆದರೆ ಎಸ್. ಐ ಟಿ ತನಿಖೆ ಮುಗಿದಿದೆ ಎಂದರು.

*ತಪ್ಪಿತಸ್ಥರಿಗೆ ಶಿಕ್ಷೆ*
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಯಾರೇ ತಪ್ಪು ಮಾಡಿದ್ದರೂ ಮುಲಾಜಿಗೆ ಒಳಗಾಗುವುದಿಲ್ಲ. ಯಾರನ್ನೂ ರಕ್ಷಣ ಮಾಡುವುದಿಲ್ಲ ಎಂದರು. ನಾವು ತಪ್ಪಿತಸ್ಥರಿಗೆ ಶಿಕ್ಷೆ ಕೊಟ್ಟೆ ಕೊಡುತ್ತೇವೆ. ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂದರು.

*ಸದನದ ಹೊರಗೆ ಹೋರಾಟ: ಪಕ್ಷದಲ್ಲಿ ತೀರ್ಮಾನ*
ಸದನದಿಂದ ಹೊರಗೆ ಹೋರಾಟ ಮಾಡುವ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ಮಾಡಲಾಗುವುದು ಎಂದರು.

*ಒಂದೇ ಪ್ರಕರಣದ ಬಗ್ಗೆ ಮೂರು ತನಿಖಾ ಸಂಸ್ಥೆಗಳಿಂದ ತನಿಖೆ*

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಕ್ರಮದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿವೆ. ಎಸ್.ಐ.ಟಿ ಯನ್ನು 31-5.2024 ರಂದು ರಚಿಸಲಾಗಿದೆ. 3-6-2024 ರಂದು ಸಿಬಿಐ ಗೆ ಬ್ಯಾಂಕ್ ವತಿಯಿಂದ ದೂರು ನೀಡಲಾಗಿದೆ. ಅದರಲ್ಲಿ ಶುಚಿ ಸ್ಮಿತಾ ರಾವುಲ್, ದೀಪಾ ಹಾಗು ಕೃಷ್ಣಮೂರ್ತಿ ಇವರ ಮೇಲೆ ದೂರು ನೀಡಲಾಗಿದೆ. ಜಾರಿ ನಿರ್ದೇಶನಾಲಯ ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುತ್ತಿದೆ. ಒಂದೇ ಹಗರಣದಲ್ಲಿ ಮೂರು ತನಿಖಾ ಸಂಸ್ಥೆಗಳು ವಿಚಾರಣೆ ಮಾಡುತ್ತಿರುವುದು ವಿಶೇಷ. ಮೂರು ತನಿಖಾ ಸಂಸ್ಥೆಗಳು ಒಂದೇ ಪ್ರಕರಣದ ಬಗ್ಗೆ ತನಿಖೆ ಮಾಡುವುದು ಈವರೆಗೆ ನನ್ನ ಅನುಭವಕ್ಕೆ ಬಂದಿರಲಿಲ್ಲ ಎಂದರು.

*ತ್ವರಿತ ತನಿಖೆ*
ನಾವು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಅಕ್ರಮ ನಡೆದಿಲ್ಲ ಎಂದು ಹೇಳಿಲ್ಲ. ವಿರೋಧ ಪಕ್ಷದವರು ಪದೇ ಪದೇ 187.33 ಕೋಟಿ ರೂ.ಗಳ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ . ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಂ.ಜಿ ರಸ್ತೆ ಶಾಖೆಯಿಂದ ತೆಲಂಗಾಣಕ್ಕೆ ಹೋಗಿರುವುದು 89.63 ಕೋಟಿ ರೂ.ಗಳು. ಎಸ್. ಐ.ಟಿ ರಚನೆಯಾದ ಮೇಲೆ ತ್ವರಿತವಾಗಿ ತನಿಖೆ ಕೈಗೊಂಡಿದ್ದಾರೆ. ಈಗಾಗಲೇ 12 ಜನರನ್ನು ಬಂಧಿಸಿದ್ದು, ಬೇರೆ ಬೇರೆ ಜನರು ಹಂಚಿಕೊಂಡಿದ್ದ ಮೊತ್ತದಲ್ಲಿ 34 ಕೋಟಿ ರೂಪಾಯಿ ನಗದನ್ನು ಹಿಂಪಡೆದಿದ್ದಾರೆ. 89.63 ಕೋಟಿ . 46 ಕೋಟಿ ರೂ.ಗಳನ್ನು ಫ್ಸ್ತ ಫೈನಾನ್ಸ್ ಕೋ ಆಪರೇಟಿವ್ ಬ್ಯಾಂಕ್ , ರತ್ನಾಕರ ಬ್ಯಾಂಕ್ ಲೀ., ನಲ್ಲಿ 46 ಕೋಟಿ ರೂಪಾಯಿ ಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.ಒತ್ತು 85.25 ಕೋಟಿ ಹಿಂಪಡೆದು , ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಒಟ್ಟು ಅಕ್ರಮವಾಗಿರುವುದು 85.63 ಕೋಟಿಗಳು. ಎಸ್. ಐ ಟಿ ಅವರು ಶೇ.95% ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದರು.

*ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಹೆಸರನ್ನು ಬರೆದು ಕೊಡುವಂತೆ ಇಡಿ ಒತ್ತಾಯ*
ಅಕ್ರಮವಾಗಲು ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ, ಉಪವ್ಯವಸ್ಥಾಪಕರು, ಕ್ರೆಡಿಟ್ ಅಧಿಕಾರಿಗಳು ಕಾರಣ ಎಂದು ಬ್ಯಾಂಕಿನಿಂದ ಸೂರು ನೀಡಲಾಗಿದ್ದು ಸಿಬಿಐ ತನಿಖೆ ಮಾಡುತ್ತಿದೆ. ಅವರೇನು ಮಾಡಿದ್ದಾರೆಂದು ತಿಳಿದಿಲ್ಲ. ಇಡಿ ಯವರು ಸ್ವಯಂ ಪ್ರೇರಿತವಾಗಿ ತನಿಖೆ ಪ್ರಾರಂಭ ಮಾಡಿದ್ದು , ನಾಗೇಂದ್ರ ಹಾಗೂ ದದ್ದಲ್ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ನಾಗೇಂದ್ರ ಅವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನದಲ್ಲಿದ್ದಾರೆ. ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ,ಹೆಚ್ಚುವರಿ ನಿರ್ದೇಶಕ ಕಲ್ಲೇಶ್ ಎಂಬುವರು ಹೇಳಿಕೆಯನ್ನು ಕೊಟ್ಟಿದ್ದರೂ ಇವರೇ ಆದೇಶ ಮಾಡಿದ್ದಾರೆ ಎಂದು ಮುಖ್ಯಮಂತ್ರಿ ಹಾಗೂ ಇತರೆ ಸಚಿವರ ಹೆಸರನ್ನು ಬರೆದು ಕೊಡುವಂತೆ ಒತ್ತಾಯ ಮಾಡಿದ್ದಾರೆ. 187.33 ಕೋಟಿಗಳಲ್ಲಿ 43.33 ಕೋಟಿ ರೂಪಾಯಿ ಖಜಾನೆಯಿಂದ ಹೋಗಿದೆ. ಅದಕ್ಕೂ ನಮಗೂ ಸಂಬಂಧವಿಲ್ಲ. ನಮ್ಮ ಹಾಗೂ ಆರ್ಥಿಕ ಇಲಾಖೆ ಪಾತ್ರ ಇದರಲ್ಲಿ ಇರುವುದಿಲ್ಲ. ಬಜೆಟ್ ಒಮ್ಮೆ ಅನುಮೋದನೆಯಾದ ಮೇಲೆ ಅನುದಾನ ಕಾರ್ಯದರ್ಶಿಗಳಿಗೆ, ಅಲ್ಲಿಂದ ಅದನ್ನು ನಿರ್ದೇಶಕರಿಗೆ ಹಾಗೂ ನಿರ್ದೇಶಕರು ಅನುದಾನವನ್ನು ವ್ಯವಸ್ಥಾಪಕ ನಿರ್ದೇಶಕರಿಗೆ ಕೊಡುತ್ತಾರೆ. ಇದು ಪ್ರಕ್ರಿಯೆ ಎಂದು ವಿವರಿಸಿದರು

*ಕಲ್ಲೇಶ್ ಅವರಿಗೆ ಜೀವ ಬೆದರಿಕೆ*
ಜಾರಿ ನಿರ್ದೇನಾಲಯದವರು ಕಲ್ಲೇಶ್ ಅವರಿಗೆ ಹೆದರಿಸಿ, ಬೆದರಿಸಿ, ಜೀವ ಭಯ ಉಂಟು ಮಾಡಿ ಅನಗತ್ಯವಾಗಿ ನನ್ನ ಹೆಸರು ಹೇಳುವಂತೆ ಬೆದರಿಸಿದ್ದಾರೆ. ಪ್ರಕರಣದಲ್ಲಿ ಕಾನೂನಿನ ಪ್ರಕಾರ ನನ್ನ ಮೇಲೆ ಆರೋಪ ಬರುವಂತೆ ಮಾಡಲು ಒತ್ತಾಯಿಸಿದ್ದಾರೆ. ಕಲ್ಲೇಶ್ ದೂರು ನೀಡಿ ಪ್ರಕರಣ ದಾಖಲಾಗಿದೆ. ದೂರಿನಲ್ಲಿ ಏನೇನು ನಡೆಯಿತು ಎಂದು ಹೇಳಿದ್ದಾರೆ ಎಂದರು.

*ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಕೇಂದ್ರ ವಾಮ ಮಾರ್ಗ ಅನುಸರಿಸುತ್ತಿದೆ*
ಒಟ್ಟಾರೆಯಾಗಿ ಕೇಂದ್ರ ಸರ್ಕಾರ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹಾಗೂ ಮುಖ್ಯಮಂತ್ರಿಗಳನ್ನು ಗುರಿಯಾಗಿಸಬೇಕು ಹಾಗೂ ನನ್ನ ಮತ್ತು ಸರ್ಕಾರದ ವರ್ಚಸ್ಸನ್ನು ಹಾಳು ಮಾಡಬೇಕು. ನಮ್ಮ ಸರ್ಕಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿರುದ್ಧ ಇದ್ದೇವೆ ಎಂದು ರಾಜ್ಯದ ಜನರಿಗೆ ಹೇಳಬೇಕೆಂದು ಹೀಗೆ ಮಾಡುತ್ತಿದ್ದಾರೆ. ನಾವು ಎಂದಿಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು, ದುರ್ಬಲ ವರ್ಗದವರ, ಬಡವರ, ರೈತರ , ಕಾರ್ಮಿಕರ ಪರವಾಗಿ ಇದ್ದೇವೆ . ಆದರೂ ಹೇಗಾದರೂ ಮಾಡಿ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿರಬಾರದು, ದುರ್ಬಲಗೊಳಿಸಬೇಕೆಂಬ ಉದ್ದೇಶದಿಂದ ವಾಮ ಮಾರ್ಗವನ್ನು ಅನುಸರಿಸುತ್ತಿದ್ದಾರೆ. ಆರ್ಥಿಕ ಇಲಾಖೆಯಾಗಲಿ, ಮುಖ್ಯಮಂತ್ರಿಯಾಗಲಿ ಈ ಹಗರಣಕ್ಕೆ ಸಂಬಂಧಪಟ್ಟಿಲ್ಲ ಎಂದು ಸ್ಪಷ್ಟಪಡಿಸಿದ ಮುಖ್ಯಮಂತ್ರಿಗಳು , ಹಗರಣ ಆಗಿದೆ ಎಂದು ತನಿಖೆ ಮಾಡಿಸುತ್ತಿದ್ದೇವೆ ಎಂದರು.

ಮೃತ ಚಂದ್ರಶೇಖರ್ ಅವರ ಪತ್ನಿ ಕವಿತಾ ಅವರು ನೀಡಿರುವ ದೂರು, ಪದ್ಮನಾಭ ಅವರ ದೂರಿನನ್ವಯ ತನಿಖೆ ಸರಿಯಾದ ದಾರಿಯಲ್ಲಿ ಸಾಗಿದೆ ಎಂದರು.

*ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಹಗರಣಗಳಿಗೆ ಇಡಿ ಬರಲಿಲ್ಲ*

ಆದರೆ ಬಿಜೆಪಿ ಅಧಿಕಾರದ ಅವಧಿಯಲ್ಲಿ ನಡೆದಿರುವ ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸ್ ಟ್ರಕ್ ಟರ್ಮಿನಲ್, ಎ.ಪಿ .ಎಂ.ಸಿ ಹಾಗೂ ಕೋವಿಡ್ ಹಗರಣಗಳಲ್ಲಿ ಇಡಿ ಬರಲೇ ಇಲ್ಲ. ಬಿಜೆಪಿ ಸಿಬಿಐ ಗೆ ವಹಿಸಲು ಹೇಳುತ್ತಾರೆ. ಅವರು ವಿರೋಧಪಕ್ಷ ದಲ್ಲಿದ್ದಾಗ ಚೋರ್ ಬಚಾವ್ ಸಂಸ್ಥೆ ಎನ್ನುತ್ತಿದ್ದರು. ಅವರ ಸರ್ಕಾರ. ಕೇಂದ್ರದಲ್ಲಿರುವುದರಿಂದ ಸಿಬಿಐ ಗೆ ವಹಿಸುವಂತೆ ಒತ್ತಾಯಿಸುತ್ತಿದ್ದಾರೆ . ನಾವು ಅನೇಕ ಪ್ರಕರಣಗಳನ್ನು ಸಿಬಿಐ ಗೆ ವಹಿಸಿದ್ದೇವೆ. ರಾಘವೇಂದ್ರ ಕೋ-ಆಪರೇಟಿವ್ ಬ್ಯಾಂಕಿನ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿದೆ. ಪರೇಶ್ ಮೆಹ್ತಾ, ರವಿ, ಗಣಪತಿ, ಲಾಟರಿ ಪ್ರಕರಣಗಳನ್ನು ಸಿಬಿಐ ಗೆ ವಹಿಸಲಾಗಿದೆ. ಸರ್ಕಾರ ವಿವೇಚನೆಯನ್ನು ಆಧರಿಸಿ ಪ್ರಕರಣಗಳನ್ನು ವಹಿಸುತ್ತದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮಾರ್ಗಸೂಚಿಗಳು ಪ್ರಕಾರ 25 ಕೋಟಿ ರೂಪಾಯಿ ಗಿಂತ ಹೆಚ್ಚಿನ ಮೊತ್ತವಿದ್ದರೆ ಸಿಬಿಐ ತನಿಖೆ ಮಾಡಬಹುದು. ತನಿಖೆಗೆ ನಮ್ಮ ತಕರಾರಿಲ್ಲ. ಆದರೆ ಕಾನೂನು ಬಾಹಿರವಾಗಿ ತನಿಖೆ ಮಾಡುವುದನ್ನು ಖಂಡಿಸುತ್ತೇವೆ. ಚುನಾಯಿತ ಸರ್ಕಾರವನ್ನು ಅಸ್ಥಿರಗೊಳಿಸುವ ಕೆಲಸವನ್ನು ಮಾಡುತ್ತಿದ್ದು ಇದನ್ನು ಖಂಡಿಸಲು ಸಾಂಕೇತಿಕವಾಗಿ ಪ್ರತಿಭಟನೆ ಮಾಡುತ್ತಿದ್ದೇವೆ. ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನಲ್ಲಿಯೂ ಇದನ್ನು ನಾವು ಪ್ರಸ್ತಾಪಿಸಲಿದ್ದೇವೆ ಎಂದರು.