ನವದೆಹಲಿ : 2024ರ ಲೋಕಸಭಾ ಚುನಾವಣೆಯ ಪ್ರಚಾರದ ವೇಳೆ ಪ್ರತಿಪಕ್ಷಗಳು ತಮ್ಮ ಮೇಲೆ ಸಾಕಷ್ಟು ವೈಯಕ್ತಿಕ ದಾಳಿ ನಡೆಸಿವೆ’ ಎಂದು ಆರೋಪಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಪ್ರತಿಪಕ್ಷಗಳು ನನ್ನನ್ನು ಎಷ್ಟೇ ಬೈಯಲಿ. ನಾನು 1999ರಲ್ಲಿ ಗುಜರಾತ್ ಮುಖ್ಯಮಂತ್ರಿ ಆದ ಬಳಿಕ 24 ವರ್ಷಗಳಿಂದ ಅಧಿಕಾರದಲ್ಲಿದ್ದೇನೆ ಹಾಗೂ ಈ 24 ವರ್ಷಗಳಲ್ಲಿ ನಾನು ‘ಬೈಗುಳ ನಿರೋಧಕ’ (ನಿಂದನಾ ನಿರೋಧಕ/ ಗಾಲಿ ಪ್ರೂಫ್) ಆಗಿಬಿಟ್ಟಿದ್ದೇನೆ’ ಎಂದಿದ್ದಾರೆ.
ಎಎನ್‌ಐ ಸುದ್ದಿಸಂಸ್ಥೆಗೆ ಮಂಗಳವಾರ ಸಂದರ್ಶನ ನೀಡಿದ ಮೋದಿ, ‘ಕಳೆದ 24 ವರ್ಷಗಳಿಂದ ನಿರಂತರವಾಗಿ ನಿಂದನೆಗೊಳಗಾದ ನಂತರ, ನಾನು ‘ಗಾಲಿ ಪ್ರೂಫ್’ ಆಗಿದ್ದೇನೆ. ನನ್ನನ್ನು ‘ಮೌತ್ ಕಾ ಸೌದಾಗರ್’ (ಸಾವಿನ ವ್ಯಾಪಾರಿ) ಮತ್ತು ‘ಗಂದಿ ನಾಲಿ ಕಾ ಕೀಡಾ’ (ಗಟಾರದ ಒಳಗಿನ ಹುಳ) ಎಂದು ಕರೆದವರು ಯಾರು? ನಮ್ಮ ಸಂಸದರು, ‘ಮೋದಿ ಅವರ ಮೇಲೆ 101 ಬೈಗುಳಗಳು ಕೇಳಿಬಂದಿವೆ’ ಎಂದು ಲೆಕ್ಕ ಹಾಕಿದ್ದಾರೆ. ಆದ್ದರಿಂದ ಚುನಾವಣೆ ಇರಲಿ ಅಥವಾ ಚುನಾವಣೆಯಿಲ್ಲದಿರಲಿ, ಈ ಜನರು (ವಿರೋಧ ಪಕ್ಷ) ಬೈಯುವ ಹಕ್ಕು ತಮಗೆ ಮಾತ್ರ ಇದೆ ಎಂದು ಭಾವಿಸುತ್ತಾರೆ. ಅವರು ಹತಾಶೆಗೊಂಡಿದ್ದಾರೆ ಮತ್ತು ಅವರು ಈಗ ನಿಂದನೆಯನ್ನೇ ತಮ್ಮ ಸ್ವಭಾವ ಮಾಡಿಕೊಂಡಿದ್ದಾರೆ’ ಎಂದು ತರಾಟೆಗೆ ತೆಗೆದುಕೊಂಡರು.
ತನಿಖಾ ಸಂಸ್ಥೆಗಳನ್ನು ನಿಗ್ರಹಿಸಲು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ವಿರೋಧ ಪಕ್ಷದ ನಾಯಕರ ಆರೋಪಗಳನ್ನು ತಳ್ಳಿಹಾಕಿದ ಮೋದಿ, ‘ಈ ಕಸ (ಆರೋಪ) ಎಸೆಯುವವರನ್ನು ಕೇಳಿ. ನೀವು ಹೇಳುತ್ತಿರುವುದಕ್ಕೆ ಪುರಾವೆ ಏನಿದೆ? ಈ ಕಸವನ್ನು ಗೊಬ್ಬರವನ್ನಾಗಿ ಪರಿವರ್ತಿಸಿ ಅದರಿಂದ ದೇಶಕ್ಕೆ ಒಂದಿಷ್ಟು ಒಳ್ಳೆಯದನ್ನು ಉತ್ಪಾದಿಸುತ್ತೇನೆ’ ಎಂದು ಟಾಂಗ್ ನೀಡಿದರು.
‘ಮನಮೋಹನ್ ಸಿಂಗ್ ಅಧಿಕಾರದಲ್ಲಿದ್ದಾಗ 10 ವರ್ಷಗಳಲ್ಲಿ ಇ.ಡಿ. 34 ಲಕ್ಷ ರು. ವಶಪಡಿಸಿಕೊಂಡಿತ್ತು. ಆದರೆ ನಮ್ಮ ಸರ್ಕಾರ 10 ವರ್ಷಗಳಲ್ಲಿ 2,200 ಕೋಟಿ ರು.ಗಳನ್ನು ಇ.ಡಿ. ವಶಪಡಿಸಿಕೊಂಡಿದೆ. ಈ ರೀತಿ ಹಣ ವಶ ಮಾಡಿಕೊಂಡವರನ್ನು ಗೌರವಿಸಬೇಕೇ ವಿನಾ, ಬೈಯಬಾರದು. ಭ್ರಷ್ಟಾಚಾರದ ಬಗ್ಗೆ ನನ್ನದು ಶೂನ್ಯ ಸಹಿಷ್ಣುತೆ’ ಎಂದರು.
‘ಇಂಡಿಯಾ ಒಕ್ಕೂಟಕ್ಕೆ ದೇಶದ ಅಭಿವೃದ್ಧಿ ಆಗಬಾರದು ಎಂಬ ಉದ್ದೇಶವಿದೆ. ಅದಕ್ಕೇ ಅವರು ನನ್ನನ್ನು ಬೈಯುತ್ತಾರೆ ಹಾಗೂ ಬೆದರಿಸುತ್ತಾರೆ. ಆದರೆ ಬರೀ ತಮ್ಮ ಖಜಾನೆ ಭರ್ತಿ ಆಗಬೇಕು ಎಂಬ ಉದ್ದೇಶ ಹೊಂದಿರುವವರು ನನ್ನನ್ನು ಬೈಯಬಾರದರು’ ಎಂದರು.