ಬೆಂಗಳೂರು :“ಚನ್ನಪಟ್ಟಣ ಅಭ್ಯರ್ಥಿ ವಿಚಾರವಾಗಿ ಪಕ್ಷದ ಯಾವುದೇ ಕಾರ್ಯಕರ್ತರು ಹಾಗೂ ಮುಖಂಡರಲ್ಲಿ ಅಸಮಾಧಾನವಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮಗಳ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯೆ ನೀಡಿದರು.
ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನದ ಬಗ್ಗೆ ಕೇಳಿದಾಗ, “ಯಾರಲ್ಲೂ ಅಸಮಾಧಾನವಿಲ್ಲ. ಕೆಲವರು ಡಿ.ಕೆ. ಸುರೇಶ್ ಸ್ಪರ್ಧಿಸಬೇಕು ಎಂದು ಆಸೆಪಟ್ಟಿದ್ದರು. ಆದರೆ ಈಗ ಅಸಮಾಧಾನವಿಲ್ಲ. ಸುರೇಶ್ ಅವರೇ ಜವಾಬ್ದಾರಿ ವಹಿಸಿದ್ದು, ಅವರೇ ಅಭ್ಯರ್ಥಿಯನ್ನು ಮೊದಲು ಭೇಟಿ ಮಾಡಿದ್ದಾರೆ. ಪಕ್ಷದ ಹಿತದಿಂದ ನಾವು ಈ ತೀರ್ಮಾನ ಮಾಡಿದ್ದೇವೆ” ಎಂದು ತಿಳಿಸಿದರು.
“ನಾನು ಹಾಗೂ ಮುಖ್ಯಮಂತ್ರಿ ಗಳು ಚನ್ನಪಟ್ಟಣ ಉಪಚುನಾವಣೆ ಅಭ್ಯರ್ಥಿ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸುತ್ತೇವೆ. ಶಿಗ್ಗಾವಿ ಕ್ಷೇತ್ರದ ಅಭ್ಯರ್ಥಿ ಇನ್ನು ಮಾಹಿತಿ ಬಂದಿಲ್ಲ. ಮಾಹಿತಿ ಬಂದ ತಕ್ಷಣ ನಾವು ಪ್ರಕಟಿಸುತ್ತೇವೆ. ಆಂತರಿಕ ಸಮೀಕ್ಷೆ ನಡೆಯುತ್ತಿದೆ. ಕೆಲವರ ಅಭಿಪ್ರಾಯ ಪಡೆಯಲಾಗುತ್ತಿದೆ. ರಾಜಕೀಯವಾಗಿ ನಮಗೆ ಲಾಭವಾಗುವ ಅಂಶಗಳನ್ನು ನೋಡುತ್ತಿದ್ದೇವೆ” ಎಂದು ತಿಳಿಸಿದರು.
ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಪರವಾಗಿದೆ: ಡಿ. ಕೆ. ಸುರೇಶ್
ಬೆಂಗಳೂರು : ಸಿ.ಟಿ.ರವಿ ಅವರ ಸಹಕಾರ ಯೋಗೇಶ್ವರ್ ಅವರ ಪರವಾಗಿದೆ. ಮಿಕ್ಕ ವಿಶ್ಲೇಷಣೆ ನೀವು (ಮಾಧ್ಯಮದವರು) ಮಾಡಿಕೊಳ್ಳಿ” ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಹೇಳಿದರು.ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರ ಪ್ರಶ್ನೆಗಳಿಗೆ ಗುರುವಾರ ಪ್ರತಿಕ್ರಿಯಿಸಿದರು.
ಸಿ.ಪಿ.ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಕಾಂಗ್ರೆಸ್ ದುರ್ಬಲವೆಂದು ತೋರಿಸಿಕೊಂಡಿದೆ ಎನ್ನುವ ಸಿ.ಟಿ.ರವಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಬಿಜೆಪಿಯವರ ಹಾಗೂ ಬಿಜೆಪಿಯ ಬಗ್ಗೆ ನಾನು ವಿಶ್ಲೇಷಣೆ ಮಾಡಲು ಹೋಗುವುದಿಲ್ಲ. ವಿಶ್ಲೇಷಣೆಯನ್ನು ತೀವ್ರವಾಗಿ ಮಾಡಬಹುದು ಆದರೆ ಮಾಡುವುದಿಲ್ಲ.” ಎಂದರು.
ಬಿಜೆಪಿಯ ಕೆಲ ನಾಯಕರಿಂದಾಗಿ ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ ಎಂಬ ಕುಮಾರಸ್ವಾಮಿ ಹಾಗೂ ನಿಖಿಲ್ ಅವರ ಹೇಳಿಕೆ ಬಗ್ಗೆ ಕೇಳಿದಾಗ “ನಾನು ಸಿ.ಟಿ.ರವಿಯವರ ಹೇಳಿಕೆಗೆ ಮಾತ್ರ ಉತ್ತರ ನೀಡುತ್ತಿದ್ದು, ಮಿಕ್ಕ ಚರ್ಚೆ, ವಿಶ್ಲೇಷಣೆಯನ್ನು ನೀವು ಮಾಡಿ. ಮಾಧ್ಯಮದವರು ಹೆಚ್ಚು ವ್ಯಾಖ್ಯಾನ ಮಾಡುವುದರಿಂದ ಇದರ ಸಾಧಕ- ಬಾಧಕಗಳು ಹಾಗೂ ಕಳೆದ ಒಂದು ವಾರಗಳಿಂದ ನಡೆದ ವಿದ್ಯಮಾನಗಳನ್ನು ರಾಜ್ಯದ ಜನರಿಗೆ ನೀವು ತಿಳಿಸಬೇಕು” ಎಂದರು.
ನಿಖಿಲ್ ಅಥವಾ ಅನಸೂಯಾ ಮಂಜುನಾಥ್ ಅವರನ್ನು ಕಣಕ್ಕೆ ಇಳಿಸಬೇಕು ಎನ್ನುವ ಚರ್ಚೆಯ ಬಗ್ಗೆ ಕೇಳಿದಾಗ “ಅದು ಆಯಾಯ ಪಕ್ಷದ ತೀರ್ಮಾನ” ಎಂದರು.
ಚನ್ನಪಟ್ಟಣದಲ್ಲಿ ಜೆಡಿಎಸ್ ನಿಂದ ಪ್ರಬಲ ವ್ಯಕ್ತಿಯನ್ನೇ ಕಾಂಗ್ರೆಸ್ ಗೆ ಕರೆತರಲಾಗುತ್ತದೆ ಎನ್ನುವ ಸುದ್ದಿಯ ಬಗ್ಗೆ ಕೇಳಿದಾಗ “ಕಾದು ನೋಡೋಣ” ಎಂದಷ್ಟೇ ಉತ್ತರಿಸಿದರು.
ಚನ್ನಪಟ್ಟಣದಲ್ಲಿ ಡಿ.ಕೆ.ಸುರೇಶ್ ಅವರಿಗೆ ಟಿಕೆಟ್ ನೀಡಲು ಶಿವಕುಮಾರ್ ಅವರು ಹಿಂದೇಟು ಹಾಕಿದರು ಎನ್ನುವ ಬಗ್ಗೆ ಕೇಳಿದಾಗ “ನಾನು ಲೋಕಸಭಾ ಚುನಾವಣೆಯಲ್ಲಿ ಸೋತಿದ್ದೇನೆ. ತಕ್ಷಣ ಇನ್ನೊಂದು ಚುನಾವಣೆಗೆ ನಿಂತರೆ, ಜನರಿಗೆ ಒಳ್ಳೆಯ ಸಂದೇಶ ನೀಡಿದಂತೆ ಆಗುವುದಿಲ್ಲ. ಹೀಗಾಗಿ ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೈಕಮಾಂಡ್ ಗೆ ಹಾಗೂ ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಅನೇಕ ಕಾರ್ಯಕರ್ತರು ನಾನೇ ನಿಲ್ಲಬೇಕು ಎಂದು ಹೇಳಿದರು. ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ” ಎಂದರು.
ಯೋಗೇಶ್ವರ್ ಅವರು ಪಕ್ಷದಲ್ಲಿ ಮೂರು ವರ್ಷ ದುಡಿದ ನಂತರ ಟಿಕೆಟ್ ನೀಡಿ ಎನ್ನುವ ಕಾರ್ಯಕರ್ತರ ಹೇಳಿಕೆಗಳ ಬಗ್ಗೆ ಕೇಳಿದಾಗ, “ಪಕ್ಷದ ಶಿಸ್ತಿನ ಸಿಪಾಯಿಗಳಾಗಿ ನಾವುಗಳು, ಮುಖಂಡರು, ಕಾರ್ಯಕರ್ತರಾದಿಯಾಗಿ ಎಲ್ಲರೂ ಪಕ್ಷ ತೆಗೆದುಕೊಂಡಿರುವ ತೀರ್ಮಾನಕ್ಕೆ ಬದ್ಧವಾಗಿರಬೇಕಾಗುತ್ತದೆ. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯವಿರುತ್ತದೆ. ನಾಮಪತ್ರ ಸಲ್ಲಿಕೆಯಾದ ನಂತರ ಎಲ್ಲರ ಬಳಿಯೂ ನಾನೇ ಖುದ್ದಾಗಿ ಮಾತನಾಡುತ್ತೇನೆ” ಎಂದರು.
ಶಿಗ್ಗಾವಿಯಲ್ಲಿ ಮುಸ್ಲಿಂ ಅಭ್ಯರ್ಥಿ ಹೊರತಾಗಿ ಬೇರೆಯವರನ್ನು ಘೋಷಣೆ ಮಾಡಲಾಗುತ್ತದೆಯೇ ಎಂದು ಕೇಳಿದಾಗ, “ಇದನ್ನು ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸ್ಕ್ರೀನಿಂಗ್ ಕಮಿಟಿಯವರು ಈಗಾಗಲೇ ನಾಲ್ಕರಿಂದ ಐದು ಜನ ಆಕಾಂಕ್ಷಿಗಳ ಹೆಸರನ್ನು ದೆಹಲಿಗೆ ಕಳಿಸಿರಬಹುದು. ಮಾಜಿ ಮುಖ್ಯಮಂತ್ರಿ ಕ್ಷೇತ್ರವಾಗಿರುವುದರಿಂದ, ಗೆಲ್ಲುವಂತಹ ಪ್ರಭಾವಿ ವ್ಯಕ್ತಿಗೆ ಟಿಕೆಟ್ ನೀಡಬಹುದು” ಎಂದರು.
ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎನ್ನುವ ಸಚಿವ ಜಮೀರ್ ಅವರ ಬಹಿರಂಗ ಹೇಳಿಕೆ ಬಗ್ಗೆ ಕೇಳಿದಾಗ, “ಪ್ರತಿ ಬಾರಿಯೂ ಶಿಗ್ಗಾಂವಿ ಕ್ಷೇತ್ರದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಲಾಗುತ್ತಿದೆ. ಕ್ಷೇತ್ರದ ಅಭ್ಯರ್ಥಿ ಆಯ್ಕೆ ಉಸ್ತುವಾರಿಯನ್ನು ಜಮೀರ್ ಅವರಿಗೆ ಹೈಕಮಾಂಡ್ ನೀಡಿರುವುದರಿಂದ ಹಾಗೂ ಅವರು ಸಹ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಕಾರಣಕ್ಕೆ ಈ ರೀತಿಯ ಬೇಡಿಕೆ ಇಡುವುದು ಸಹಜ” ಎಂದರು.
ಶಿಗ್ಗಾವಿಯಲ್ಲಿ ಟಿಕೆಟ್ ಹಂಚಿಕೆ ಗೊಂದಲದ ಬಗ್ಗೆ ಕೇಳಿದಾಗ “ಈ ಹಿಂದಿನ ಚುನಾವಣೆಯಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಹಾಗೂ ಬೇರೆಯವರು ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಎಲ್ಲಾ ಸಮಾಜದವರ ಬಳಿ ಮಾತನಾಡಿ ಒಮ್ಮತದ ಅಭ್ಯರ್ಥಿಯನ್ನು ಘೋಷಣೆ ಮಾಡಬೇಕು ಎನ್ನುವ ತೀರ್ಮಾನಕ್ಕೆ ಹೈಕಮಾಂಡ್ ಬಂದಿದೆ” ಎಂದರು.
ಮುಸ್ಲಿಮರಿಗೆ ಪ್ರತಿ ಬಾರಿಯೂ ಟಿಕೆಟ್ ನೀಡುತ್ತಿರುವುದರಿಂದ ಸೋಲಾಗುತ್ತಿದೆ. ಈ ಬಾರಿ ಹಿಂದುಗಳಿಗೆ ಟಿಕೆಟ್ ನೀಡಿ ಎನ್ನುವ ಕೂಗಿನ ಬಗ್ಗೆ ಕೇಳಿದಾಗ “ಇದರ ಬಗ್ಗೆ ತಿಳಿದಿಲ್ಲ” ಎಂದರು.
ಸಿ.ಪಿ.ಯೋಗೇಶ್ವರ್ ಅವರ ನಾಮಪತ್ರ ಸಲ್ಲಿಕೆಗೂ ಮುನ್ನ ರೋಡ್ ಶೋನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾತುಗಳು:
ಎರಡು ಬಾರಿ ಸಿಎಂ ಆಗಿದ್ದಾಗ ಚನ್ನಪಟ್ಟಣ ಕ್ಷೇತ್ರದ ಅಭಿವೃದ್ದಿಗೆ ತಮ್ಮ ಕೊಡುಗೆ ಏನು ಎನ್ನುವ ಪಟ್ಟಿಯನ್ನು ಕುಮಾರಸ್ವಾಮಿ ಅವರು ಬಿಡುಗಡೆ ಮಾಡಲಿ. ಕ್ಷೇತ್ರದ ಅಭಿವೃದ್ದಿಗೆ ಅವರ ಸಾಕ್ಷಿ ಗುಡ್ಡೆಯನ್ನು ಜನರ ಮುಂದಿಡಲಿ.
ಶುಭ ಘಳಿಗೆಯಲ್ಲಿ ಯೋಗೇಶ್ವರ್ ಪಕ್ಷ ಸೇರಿದ್ದಾರೆ. ಇವರ ಕೈ ಬಲಪಡಿಸುವುದರ ಮೂಲಕ ದೇಶಕ್ಕೆ ಬಲವಾದ ಸಂದೇಶ ನೀಡಬೇಕು. ಅತಿ ಹೆಚ್ಚು ಮತಗಳ ಅಂತರದಿಂದ ಇವರನ್ನು ಗೆಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ.
ಮುಂದಿನ ದಿನಗಳಲ್ಲಿ ಮಿಕ್ಕ ವಿಚಾರಗಳನ್ನು ನಾನು ಮಾತನಾಡುತ್ತೇನೆ. ಮುಂದಿನ ದಿನಗಳಲ್ಲಿ ಸಾಕಷ್ಟು ಸಿನಿಮಾಗಳನ್ನು ನಾವು ನೋಡಬೇಕಿದೆ. ಚುನಾವಣೆ ಗೆಲ್ಲುವುದೊಂದೇ ನಮ್ಮ ಗುರಿ. ಲೋಕಸಭಾ ಚುನಾವಣೆ ಯಲ್ಲಿ ಡಿ.ಕೆ.ಸುರೇಶ್ ಅವರಿಗೆ ಚನ್ನಪಟ್ಟಣದ ಜನತೆ 80 ಸಾವಿರಕ್ಕೂ ಹೆಚ್ಚು ಮತಗಳನ್ನು ನೀಡಿದ್ದರು. ಆದರೆ ಮಿಕ್ಕ ಕಡೆ ಕಡಿಮೆ ಮತಗಳು ಬಂದ ಕಾರಣಕ್ಕೆ ಗೆಲುವು ಸಾಧ್ಯವಾಗಲಿಲ್ಲ.
ಡಿ.ಕೆ.ಶಿವಕುಮಾರ್ ಹಾಗೂ ಸುರೇಶ್ ಅವರನ್ನು ನಂಬಿ ಬಿಜೆಪಿ ಮತ್ತು ದಳದಿಂದ ಅನೇಕ ಕಾರ್ಯಕರ್ತರು ಬಂದಿದ್ದಾರೆ. ನೀವು ನಮ್ಮ ಕೈ ಬಲಪಡಿಸಿದ್ದೀರಿ, ಯಾವುದೇ ಕಾರಣಕ್ಕೂ ನಿಮ್ಮ ಹಾಗೂ ಕಾಂಗ್ರೆಸ್ ಕಾರ್ಯಕರ್ತರನ್ನು ನಡು ನೀರಿನಲ್ಲಿ ಕೈ ಬಿಡುವ ಪ್ರಶ್ನೆಯಿಲ್ಲ. ಭವಿಷ್ಯದಲ್ಲಿಯೂ ನಿಮ್ಮ ಜೊತೆ ನಾವಿರುತ್ತೇವೆ. ಯೋಗೇಶ್ವರ್ ಅವರ ಜೊತೆಯೂ ಇರುತ್ತೇವೆ.
ಚನ್ನಪಟ್ಟಣಕ್ಕೆ ಹೊಸರೂಪವನ್ನು ನೀಡುವುದಕ್ಕೆ ನಾವು ಬದ್ಧವಾಗಿದ್ದೇವೆ. ಕರ್ನಾಟಕದ ಅಭಿವೃದ್ದಿಯೇ ನಮ್ಮ ಸಂಕಲ್ಪ. ಈ ಗುರಿಯನ್ನಿಟ್ಟುಕೊಂಡು ಕಾಂಗ್ರೆಸ್ ಸರ್ಕಾರ ಕೆಲಸ ಮಾಡುತ್ತಿದೆ. ಚನ್ನಪಟ್ಟಣದ ಅಭಿವೃದ್ದಿಗೆ ಮುಖ್ಯಮಂತ್ರಿಗಳ ಬಳಿ ಮಾತನಾಡಿ ಸುಮಾರು 500 ಕೋಟಿ ಅನುದಾನ ನೀಡಲಾಗಿದೆ.
ಜಾತ್ಯಾತೀತ ಎನ್ನುವ ಹೆಸರನ್ನು ಇಟ್ಟುಕೊಂಡಿರುವ ಜನತಾದಳ ಕೋಮುವಾದಿ ಬಿಜೆಪಿ ಜೊತೆ ಏಕೆ ಮೈತ್ರಿ ಮಾಡಿಕೊಂಡಿತು. ದಳದವರು ಅನುಕೂಲದ ರಾಜಕಾರಣಕ್ಕಾಗಿ ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಕುಮಾರಸ್ವಾಮಿ ಅವರು ತಮ್ಮ ಭಾವನನ್ನೇ ಬಿಜೆಪಿಯಿಂದ ಕಣಕ್ಕೆ ಇಳಿಸಿದರು.
ಚನ್ನಪಟ್ಟಣದ ಋಣವನ್ನು ತೀರಿಸಬೇಕು. ಈ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಜೊತೆ ಕೈ ಜೋಡಿಸಿ, ಜನಸೇವೆ ಮಾಡಬೇಕು ಎನ್ನುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕಮಲ ಕೆರೆಯಲ್ಲಿದ್ದರೆ ಚಂದ, ತೆನೆ ಹೊಲದಲ್ಲಿದ್ದರೆ ಚೆಂದ, ದಾನ ಧರ್ಮ ಮಾಡುವ ಕೈ ಅಧಿಕಾರದಲ್ಲಿದ್ದರೆ ಚೆಂದ. ಈ ಕೈ ಚನ್ನಪಟ್ಟಣದಲ್ಲಿ ಇದ್ದರೇ ಅಭಿವೃದ್ದಿ ಸಾಧ್ಯ.