ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆ ಬಿಜೆಪಿ ಕೆಲವು ಅಚ್ಚರಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಂತ್ರ ರೂಪಿಸಿದೆ. ಈಗಾಗಲೇ ಜಯದೇವ ಆಸ್ಪತ್ರೆಯ ಮಾಜಿ ನಿರ್ದೇಶಕ ಡಾ. ಸಿಎನ್ ಮಂಜುನಾಥ ಹೆಸರು ಕೇಳಿಬರುತ್ತಿದೆ. ಇದರ ಜೊತೆಗೆ ಈಗ ಮೈಸೂರು ಒಡೆಯರ್ ಯದುವೀರ್ ಹೆಸರೂ ಚಾಲ್ತಿಗೆ ಬಂದಿದೆ.

ಮೈಸೂರು ರಾಜವಂಶಸ್ಥ ಯದುವೀರ್ ಒಡೆಯರ್ ಅವರನ್ನು ಕಣಕ್ಕಿಳಿಸಲು ಬಿಜೆಪಿ ಯೋಜನೆ ರೂಪಿಸಿದೆ.

ಇದಕ್ಕಾಗಿ ಯದುವೀರ್ ಜೊತೆ ಮಾತುಕತೆಯನ್ನೂ ನಡೆಸುತ್ತಿದೆ ಎನ್ನಲಾಗಿದೆ. ಈಗಾಗಲೇ ಹಲವು ಬಾರಿ ಯದುವೀರ್ ಒಡೆಯರ್ ಅವರನ್ನು ಪ್ರಧಾನಿ ಮೋದಿಯವರನ್ನು ಹೊಗಳಿ ಮಾತನಾಡಿದ್ದು ಇದೆ. ಇತ್ತೀಚೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

ಹೀಗಾಗಿ ಬಿಜೆಪಿ ಪರ ನಿಲುವು ಹೊಂದಿರುವ ಅವರಿಗೆ ಮೈಸೂರು ಟಿಕೆಟ್ ನೀಡಲು ಬಿಜೆಪಿ ಪ್ಲ್ಯಾನ್ ಮಾಡಿದೆ. ಆದರೆ ಇದಕ್ಕೆ ಯದುವೀರ್ ಒಡೆಯರ್ ಒಪ್ಪುತ್ತಾರಾ ಕಾದು ನೋಡಬೇಕು. ಇಷ್ಟು ದಿನ ರಾಜಕೀಯದಲ್ಲಿರದ ಯದುವೀರ್ ಈಗ ಒಂದು ಪಕ್ಷದ ಜೊತೆ ಅಧಿಕೃತವಾಗಿ ಗುರುತಿಸಿಕೊಳ್ಳುತ್ತಾರಾ ಎನ್ನುವುದು ಅನುಮಾನ.

ಒಂದು ವೇಳೆ ಯದುವೀರ್ ರನ್ನು ಕಣಕ್ಕಿಳಿಸಿದರೆ ಹಾಲಿ ಸಂಸದ ಪ್ರತಾಪ್ ಸಿಂಹಗೆ ಮೈಸೂರು ಟಿಕೆಟ್ ಕೈ ತಪ್ಪಿ ಹೋಗಲಿದೆ. ಮೈಸೂರು-ಬೆಂಗಳೂರು ಹೆದ್ದಾರಿ ನಿರ್ಮಾಣಕ್ಕೆ ಶ್ರಮಿಸಿ ಒಳ್ಳೆಯ ಹೆಸರು ಮಾಡಿಕೊಂಡಿದ್ದರೂ ಸಂಸತ್ ಮೇಲೆ ದಾಳಿ ಪ್ರಕರಣದಲ್ಲಿ ಪ್ರತಾಪ್ ಸಿಂಹ ಆಪ್ತರೇ ಆರೋಪಿಗೆ ಟಿಕೆಟ್ ನೀಡಿರುವ ಆರೋಪ ಕೇಳಿಬಂದಿತ್ತು. ಹೀಗಾಗಿ ಪ್ರತಾಪ್ ಸಿಂಹಗೆ ಈ ಬಾರಿಗೆ ಮೈಸೂರು ಟಿಕೆಟ್ ಸಿಗುವುದು ಅನುಮಾನ ಎನ್ನಲಾಗುತ್ತಿದೆ.