ಶ್ರೀನಗರ : ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯಲ್ಲಿ ಗುರುವಾರ ಸದನ ಪುನರಾರಂಭವಾಗುತ್ತಿದ್ದಂತೆ ಹೈಡ್ರಾಮಾ ನಡೆಯಿತು. ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು ಎಂಬ ನಿರ್ಣಯದ ಕುರಿತಾಗಿ ಕಲಾಪದಲ್ಲಿ ಗದ್ದಲ ನಡೆಯಿತು.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಮರು ಸ್ಥಾಪಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಗೊತ್ತುವಳಿಯನ್ನು ಭಾರಿ ಗದ್ದಲದ ನಡುವೆ ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಬುಧವಾರ ಅಂಗೀಕರಿಸಿದೆ. ವಿಶೇಷ ಸ್ಥಾನಮಾನ ಮರುಸ್ಥಾಪನೆಗಾಗಿ ಕೇಂದ್ರ ಮತ್ತು ಚುನಾಯಿತ ಪ್ರತಿನಿಧಿಗಳ ನಡುವೆ ಸಂವಾದವನ್ನು ಕೋರಿ ಸದನವು ನಿರ್ಣಯವನ್ನು ಅಂಗೀಕರಿಸಿತ್ತು. ಉಪಮುಖ್ಯಮಂತ್ರಿ ಸುರೀಂದರ್ ಕುಮಾರ್ ಚೌಧರಿ ಅವರು ಮಂಡಿಸಿದ ನಿರ್ಣಯವನ್ನು ಧ್ವನಿ ಮತದ ಮೂಲಕ ಅಂಗೀಕರಿಸಲಾಯಿತು. ವಿಧಾನಸಭೆಯಲ್ಲಿ ಪ್ರತಿಪಕ್ಷ ಬಿಜೆಪಿ ಹೊರತುಪಡಿಸಿ ಎಲ್ಲಾ ಪಕ್ಷಗಳು ಇದಕ್ಕೆ ಬೆಂಬಲ ಸೂಚಿಸಿದ್ದವು.
ಗುರುವಾರ ವಿಧಾನಸಭೆ ಪುನರಾರಂಭಗೊಳ್ಳುತ್ತಿದ್ದಂತೆ, ಇಂಜಿನಿಯರ್ ರಶೀದ್ ಅವರ ಸಹೋದರ ಮತ್ತು ಶಾಸಕ ಖುರ್ಷಿದ್ ಅಹ್ಮದ್ ಶೇಖ್ ಅವರು 370 ನೇ ವಿಧಿಯ ಬ್ಯಾನರ್ ಅನ್ನು ಪ್ರದರ್ಶಿಸಿದರು. ಇದು ಜಮ್ಮು-ಕಾಶ್ಮೀರ ವಿಧಾನಸಭೆಯಲ್ಲಿ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಬಿಜೆಪಿ ನಾಯಕ ಮತ್ತು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿಪಕ್ಷ ನಾಯಕ ಸುನೀಲ ಶರ್ಮಾ ಅವರು ನಿರ್ಣಯವನ್ನು “ಕಾನೂನುಬಾಹಿರ” ಎಂದು ಕರೆದರೆ, ಸ್ವತಂತ್ರ ಶಾಸಕ ಖುರ್ಷೀದ್ ಶೇಖ್, ಜೈಲಿನಲ್ಲಿರುವ ಸಂಸದ ಅಬ್ದುಲ್ ರಶೀದ್ ಶೇಖ್ (ಇಂಜಿನಿಯರ್ ರಶೀದ್) ಅವರ ಸಹೋದರ, 370 ಮತ್ತು 35 ಎ ಅನ್ನು ತಕ್ಷಣವೇ ಮರುಸ್ಥಾಪಿಸಲು ಒತ್ತಾಯಿಸಿದರು. “ನಾವು ಆರ್ಟಿಕಲ್ 370 ಮತ್ತು 35ಎ ಮರುಸ್ಥಾಪನೆಗೆ ಒತ್ತಾಯಿಸುತ್ತೇವೆ” ಎಂಬ ಬ್ಯಾನರ್ ಅನ್ನು ಹಿಡಿದುಕೊಂಡು ಖುರ್ಷೀದ್ ಬಾವಿಗೆ ಇಳಿದರು. ಇದರಿಂದ ಕೆರಳಿದ ಬಿಜೆಪಿ ಸದಸ್ಯರು ಕೂಡ ಬಾವಿಗೆ ಹಾರಿ, ಬ್ಯಾನರ್ ಕಿತ್ತುಕೊಂಡು ಹರಿದು ಹಾಕಿದರು. ಇದು ಗದ್ದಲಕ್ಕೆ ಕಾರಣವಾಯಿತು.
ಇದಕ್ಕೆ ವಿಪಕ್ಷದ ನಾಯಕ ಮತ್ತು ಬಿಜೆಪಿ ಶಾಸಕ ಸುನಿಲ ಶರ್ಮಾ ಅವರು ಆಕ್ಷೇಪಿಸಿದ್ದಾರೆ.ಬಿಜೆಪಿ ಶಾಸಕರು ಸದನದ ಬಾವಿಗೆ ತೆರಳಿ ಶೇಖ್ ಅವರ ಬ್ಯಾನರ್ ಕಿತ್ತುಕೊಳ್ಳಲು ಯತ್ನಿಸಿದರು. ಇದು ಮಾತಿನ ಚಕಮಕಿಗೆ ಕಾರಣವಾಯಿತು. ಬಿಜೆಪಿ ಶಾಸಕರು ಪಿಡಿಪಿ, ಪಿಸಿ ಮತ್ತು ಆಡಳಿತ ಪಕ್ಷದ ಸದಸ್ಯರೊಂದಿಗೆ ವಾಗ್ವಾದ ನಡೆಸಿದರು. ಗದ್ದಲದ ನಂತರ ಮಾರ್ಷಲ್ಗಳು ಮಧ್ಯಪ್ರವೇಶಿಸಿ ಶಾಸಕರನ್ನು ಪ್ರತ್ಯೇಕಿಸಿದರು. ಸದನದಲ್ಲಿ ಉಂಟಾಗಿದ್ದ ಸ್ಪೀಕರ್ ಅಬ್ದುಲ್ ರಹೀಮ್ ರಾಥರ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.
ಅಧಿವೇಶನ ಪುನರಾರಂಭವಾದಾಗ, ಬಿಜೆಪಿ ಶಾಸಕರು ಪದೇ ಪದೇ ಸ್ಪೀಕರ್ ಕರೆಗಳನ್ನು ಧಿಕ್ಕರಿಸಿ ಸದನದ ಬಾವಿಗೆ ನುಗ್ಗಿದರು. “ಈ ಸದನವು ಮೀನು ಮಾರುಕಟ್ಟೆಯಲ್ಲ; ಇದು ವಿಧಾನಸಭೆ” ಎಂದು ಸ್ಪೀಕರ್ ಅವರು ಸುವ್ಯವಸ್ಥೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದರು. ನಂತರ ಬಿಜೆಪಿ ಸದಸ್ಯರನ್ನು ಹೊರ ಹಾಕುವಂತೆ ಸೂಚಿಸಿದರು.