Join The Telegram | Join The WhatsApp |
ನವದೆಹಲಿ:
₹500 ಹಾಗೂ ₹1,000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಗಳ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಕಟಿಸಿದೆ. ನೋಟು ಅಮಾನ್ಯಗೊಳಿಸಿದ ಸರ್ಕಾರದ ನಿರ್ಧಾರವನ್ನು 4:1ರ ಬಹುಮತದ ತೀರ್ಪಿನೊಂದಿಗೆ ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ನ್ಯಾಯಮೂರ್ತಿ ಎಸ್.ಎ. ನಜೀರ್ ನೇತೃತ್ವದ ಐವರು ನ್ಯಾಯಮೂರ್ತಿಗಳಿರುವ ಸಾಂವಿಧಾನಿಕ ಪೀಠದ ತೀರ್ಪನ್ನು ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಮತ್ತು ಬಿ.ವಿ.ನಾಗರತ್ನ ಅವರು ಪ್ರತ್ಯೇಕವಾಗಿ ಪ್ರಕಟಿಸಿದರು.
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಕೇಂದ್ರ ಸರ್ಕಾರದ ನಡುವೆ ಸಮಾಲೋಚನೆ ನಡೆದಿರುವುದರಿಂದ ಕೇಂದ್ರದ ನಿರ್ಧಾರ ದೋಷಪೂರಿತವಾಗಿರಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿ ಎಸ್. ಎ. ನಜೀರ್ ನೇತೃತ್ವದ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಸಂವಿಧಾನ ಪೀಠ ಅಭಿಪ್ರಾಯಪಟ್ಟಿತು.
ಗರಿಷ್ಠ ಮೌಲ್ಯದ ಕರೆನ್ಸಿ ನೋಟುಗಳನ್ನು ರದ್ದು ಮಾಡಿದ ಸರ್ಕಾರದ ಅಧಿಸೂಚನೆಯು ಅಸಮಂಜಸವೆಂದು ಹೇಳಲಾಗುವುದಿಲ್ಲ. ನಿರ್ಧಾರ ಕೈಗೊಳ್ಳಲು ಇರುವ ಪ್ರಕ್ರಿಯೆಗಳ ನೆಪ ಮುಂದಿಟ್ಟು ಒಂದು ನಿರ್ಧಾರವನ್ನು ರದ್ದು ಮಾಡಲು ಸಾಧ್ಯವಿಲ್ಲ ಎಂದರು.
ಈ ನಿರ್ಧಾರದ ಹಿಂದಿನ ಉದ್ದೇಶವನ್ನು ಸಾಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ಈಗ ಪ್ರಸ್ತುತವಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಅಂತಿಮವಾಗಿ ‘2016ರ ನವೆಂಬರ್ 8ರಂದು ನೋಟುಗಳನ್ನು ರದ್ದು ಮಾಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಅಧಿಸೂಚನೆಯು ಮಾನ್ಯವಾಗಿದೆ’ ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಎ ಎಸ್ ಬೋಪಣ್ಣ, ವಿ ರಾಮಸುಬ್ರಮಣಿಯನ್ ಮತ್ತು ಬಿ ವಿ ನಾಗರತ್ನ ಅವರನ್ನು ಒಳಗೊಂಡ ಪೀಠವು ಹೇಳಿತು.
ನೋಟು ಅಮಾನ್ಯ ಪ್ರಶ್ನಿಸಿ ಸಲ್ಲಿಸಲಾಗಿದ್ದ 58 ಅರ್ಜಿಗಳ ವಿಚಾರಣೆ ನಡೆಸಿರುವ ಕೋರ್ಟ್ ಇಂದು ತೀರ್ಪು ನೀಡಿತು.
ಭಿನ್ನಮತದ ತೀರ್ಪು ನೀಡಿದ ನ್ಯಾ. ನಾಗರತ್ನ
ಆರ್‌ಬಿಐ ಕಾಯ್ದೆ 26(2) ಅಡಿಯಲ್ಲಿ ಸರ್ಕಾರಕ್ಕಿರುವ ಅಧಿಕಾರದ ವಿಚಾರವಾಗಿ ಬಹುಮತದ ತೀರ್ಪಿಗೆ ವಿರುದ್ಧವಾದ ನಿಲುವು ತಳೆದಿರುವ ನ್ಯಾಯಮೂರ್ತಿ ಬಿ.ವಿ ನಾಗರತ್ನ ಭಿನ್ನಮತದ ತೀರ್ಪು ನೀಡಿದರು.
ನೋಟುಗಳ ರದ್ದತಿಯನ್ನು ಕಾನೂನಿನ ಮೂಲಕ ಮಾಡಬೇಕಾಗಿತ್ತೇ ಹೊರತು ಅಧಿಸೂಚನೆಯ ಮೂಲಕ ಅಲ್ಲ ಎಂದು ಅವರು ಹೇಳಿದ್ದಾರೆ.
Join The Telegram | Join The WhatsApp |