ಬೆಂಗಳೂರು : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕ್ರೆಡಿಟ್ ಕಾರ್ಡ್ ಶುಲ್ಕಗಳಲ್ಲಿ ಬದಲಾವಣೆಗಳನ್ನು ಮಾಡಲಾಗುತ್ತಿದೆ. ನೀರಿನ ಬಿಲ್, ವಿದ್ಯುತ್ ಬಿಲ್, ಮೊಬೈಲ್ ಬಿಲ್ ಇತ್ಯಾದಿ ಯುಟಿಲಿಟಿ ಪೇಮೆಂಟ್​ಗಳ ಶುಲ್ಕದಲ್ಲಿ ಬದಲಾವಣೆ ಇದೆ. ಬಡ್ಡಿದರ, ರಿವಾರ್ಡ್ಸ್ ಮಿತಿ, ಟ್ರಾನ್ಸಾಕ್ಷನ್ ಫೀ ಇತ್ಯಾದಿಯಲ್ಲೂ ಬದಲಾವಣೆ ಆಗುತ್ತಿದೆ. ನವೆಂಬರ್ 1ರಿಂದಲೇ ಈ ಹೊಸ ಶುಲ್ಕಗಳು ಅನ್ವಯಕ್ಕೆ ಬರಲಿವೆ. ಎಸ್​ಬಿಐ ಕ್ರೆಡಿಟ್ ಕಾರ್ಡ್ ಮೂಲಕ ದೊಡ್ಡ ಮೊತ್ತದ ಯುಟಿಲಿಟಿ ಬಿಲ್ ಪೇಮೆಂಟ್ ಇದ್ದರೆ ಅದರ ಮೇಲೆ ಶೇ. 1ರಷ್ಟು ಸರ್​ಚಾರ್ಜ್ (ಹೆಚ್ಚುವರಿ ಶುಲ್ಕ) ಅನ್ನು ವಿಧಿಸಲಾಗುತ್ತದೆ. ಒಂದು ಬಿಲ್ಲಿಂಗ್ ಸೈಕಲ್​ನಲ್ಲಿ ನಿಮ್ಮ ಯುಟಿಲಿಟಿ ಪೇಮೆಂಟ್ಸ್ ಮೊತ್ತ 50,000 ರೂ ಮೀರಿದರೆ ಆಗ ಶೇ. 1ರ ಸರ್​ಚಾರ್ಜ್ ಹೇರಿಕೆ ಆಗುತ್ತದೆ. ವಿದ್ಯುತ್, ಗ್ಯಾಸ್ ಮತ್ತು ನೀರಿನ ಬಿಲ್ ಇತ್ಯಾದಿ ಯುಟಿಲಿಟಿ ಪೇಮೆಂಟ್​ಗಳಿಗೆ ಈ ಹೆಚ್ಚುವರಿ ಶುಲ್ಕ ಅನ್ವಯ ಆಗುತ್ತದೆ. ಅನ್​ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್​ಗಳಿಗೆ ಎಸ್​ಬಿಐ ಫೈನಾನ್ಸ್ ಶುಲ್ಕಗಳನ್ನು ಹೆಚ್ಚಿಸುತ್ತಿದೆ. ಶೌರ್ಯ ಕಾರ್ಡ್ ಮತ್ತು ಡಿಫೆನ್ಸ್ ಕಾರ್ಡ್ ಹೊರತುಪಡಿಸಿ ಉಳಿದೆಲ್ಲಾ ಅನ್​ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್​ಗಳಲ್ಲಿ ಫೈನಾನ್ಸ್ ಚಾರ್ಜ್ ತಿಂಗಳಿಗೆ ಶೇ. 3.75ರಷ್ಟಿರುತ್ತದೆ. ಫೈನಾನ್ಸ್ ಚಾರ್ಜ್ ಎಂದರೆ ಬಡ್ಡಿದರ. ಬಿಲ್ ಕಟ್ಟದೇ ಬಾಕಿ ಉಳಿಸಿಕೊಳ್ಳುವ ಹಣಕ್ಕೆ ಮಾಸಿಕವಾಗಿ ಬಡ್ಡಿ ಹಾಕಲಾಗುತ್ತದೆ. ಇಲ್ಲಿ ಅನ್​ಸೆಕ್ಯೂರ್ಡ್ ಕ್ರೆಡಿಟ್ ಕಾರ್ಡ್ ಎಂದರೆ ಯಾವುದೇ ಹಣಕಾಸು ಭದ್ರತೆ ಇಲ್ಲದೇ ನೀಡಲಾಗುವ ಕಾರ್ಡ್. ಸಾಮಾನ್ಯವಾಗಿ ಬಳಕೆಯಲ್ಲಿ ಇರುವ ಬಹುತೇಕ ಕ್ರೆಡಿಟ್ ಕಾರ್ಡ್​ಗಳೂ ಅನ್​ಸೆಕ್ಯೂರ್ಡ್ ಕಾರ್ಡ್​ಗಳೇ.