ಬೆಂಗಳೂರು: ಮುಂಬರುವ 2024-25ನೇ ಸಾಲಿನ ಶಾಲಾ ದಾಖಲಾತಿ ಪ್ರಕ್ರಿಯೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಅಧಿಕೃತ ಶಾಲೆಗಳ ಪಟ್ಟಿಯನ್ನು ಏ.24ರಂದು ತಮ್ಮ ಕಚೇರಿ ಆವರಣದಲ್ಲಿ ಪ್ರಕಟಿಸುವಂತೆ ಶಾಲಾ ಶಿಕ್ಷಣ ಇಲಾಖೆ ಸೂಚಿಸಿದೆ. ಬಿಇಒಗಳು ತಮ್ಮ ವ್ಯಾಪ್ತಿಯ ಪ್ರತಿಯೊಂದು ಶಾಲೆಯನ್ನೂ ಪರಿಶೀಲಿಸಿ ಇಲಾಖೆಯ ಅಧಿಕೃತ ಶಾಲೆಗಳ ಕರಡು ಪಟ್ಟಿಯನ್ನು ಏ.12ಕ್ಕೆ ಪ್ರಕಟಿಸಬೇಕು. ಈ ಕರಡು ಪಟ್ಟಿಗೆ ಏ.19ರವರೆಗೆ ಆಕ್ಷೇಪಗಳನ್ನು ಸ್ವೀಕರಿಸಿ ಇತ್ಯರ್ಥಪಡಿಸಬೇಕು. ಬಳಿಕ ಅಧಿಕೃತ ಶಾಲೆಗಳ ಅಂತಿಮ ಪಟ್ಟಿಯನ್ನು ಏ.24 ರಂದು ತಮ್ಮ ಕಚೇರಿ ಆವರಣದಲ್ಲಿ ಪ್ರಕಟಿಸಬೇಕು. ಏ.25ರಂದು ಶಾಲಾ ಆಡಳಿತ ಮಂಡಳಿಗಳು/ ಶಾಲಾ ಮುಖ್ಯಸ್ಥರು ಕೂಡ ತಮ್ಮ ಶಾಲೆಯ ಸೂಚನ ಫಲಕದಲ್ಲಿ ಶಾಲೆಯ ನೋಂದಣಿ, ಮಾನ್ಯತೆ ನವೀಕರಣ ಪತ್ರ ಪ್ರಕಟಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ ಬಿ. ಬಿ. ಕಾವೇರಿ ಅವರು ಹೊರಡಿಸಿರುವ ಸುತ್ತೋಲೆಯಲ್ಲಿ ನಿರ್ದೇಶನ ನೀಡಿದ್ದಾರೆ.