ಬೆಳಗಾವಿ : ಜಿಲ್ಲೆಯಲ್ಲಿ ಮೊದಲ ಬಾರಿಗೆ ‘ಆ್ಯಪ್’ ಆಧರಿಸಿ ಜಾನುವಾರು ಗಣತಿ ಕಾರ್ಯ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಗಣತಿಯಲ್ಲಿ ರೈತರ ಮಾಹಿತಿ, ರೈತರ ವರ್ಗ, ಜಾನುವಾರುಗಳ ವಯಸ್ಸು, ಎಷ್ಟು ಮಹಿಳೆಯರು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಗಳನ್ನು ಯಾವುದೇ ಲೋಪದೋಷಗಳಿಲ್ಲದೇ ಕಲೆಹಾಕಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ (ಆ.29) ಆಯೋಜಿಸಲಾದ ಸೆಪ್ಟೆಂಬರ್ 1 ರಿಂದ ಡಿಸೆಂಬರ್ 31 ರವರೆಗೆ ನಡೆಯಲಿರುವ 21ನೇ ರಾಷ್ಟ್ರೀಯ ಜಾನುವಾರು ಗಣತಿ -2024ರ ಕಾರ್ಯಗಾರದಲ್ಲಿ ಅವರು ಮಾತನಾಡಿದರು.
21ನೇ ಜಾನುವಾರು ಗಣತಿಯು ಸೆಪ್ಟೆಂಬರ್ 1ಕ್ಕೆ ದೇಶಾದ್ಯಂತ ಆರಂಭಗೊಂಡು ಡಿಸೆಂಬರ-31 ರವರೆಗೆ ಚಾಲ್ತಿಯಲ್ಲಿರುತ್ತದೆ. ಇದುವರೆಗೆ ಪುಸ್ತಕದಲ್ಲಿ ಗಣತಿ ಮಾಹಿತಿ ನಮೂದಿಸಲಾಗುತಿತ್ತು. ಆದರೆ ಮೊದಲ ಬಾರಿಗೆ ಸ್ಮಾರ್ಟಪೋನ್ ಬಳಸಿ ಮನೆ ಮನೆಗೆ ತೆರಳಿ ಗಣತಿಯಲ್ಲಿ ತೊಡಗಿಸಿಕೊಳ್ಳಲಾತ್ತಿದೆ. ಇದಕ್ಕಾಗಿ ಕೇಂದ್ರ ಪಶು ಸಂಗೋಪನೆ ಇಲಾಖೆಯಿಂದಲೇ ’21ಸ್ಟ್ ಲೈವ್‌ಸ್ಪಾಕ್ ಸೆನ್ಸಸ್’ ಎನ್ನುವ ಪ್ರತ್ಯೇಕ ಆ್ಯಪ್ ಅಭಿವೃದ್ಧಿ ಪಡಿಸಲಾಗಿದೆ. ಗಣತಿದಾರರು ಆ್ಯಪ್ ಬಳಕೆ ಮಾಹಿತಿ ಪಡೆದು 21ನೇ ರಾಷ್ಟ್ರೀಯ ಜಾನುವಾರು ಗಣತಿ ಅಭಿಯಾನವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಗಣತಿ ಕಾರ್ಯದಲ್ಲಿ ಯಾವುದೇ ದತ್ತಾಂಶ ಸಂಗ್ರಹಣೆಯಲ್ಲಿ ಲೋಪದೋಷ ಆಗಬಾರದು. ಜಾನುವಾರುಗಳಿಗೆ ವ್ಯಾಕ್ಸಿನ್, ಔಷಧಿಗಳ ಬಳಕೆ ಬಗ್ಗೆ ಸಮಗ್ರ ಮಹಿಸಿ ನೀಡಬೇಕು. ನಿರಂತರ ಸಂಚರಿಸುವ ಅಗತ್ಯ ಇರುವುದರಿಂದ ಗಣತಿದಾರರು, ಮೇಲ್ವಿಚಾರಕರು ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ಗಣತಿ ಕಾರ್ಯದಲ್ಲಿ ತೊಡಗಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ ಅವರು ಸಲಹೆ ನೀಡಿದರು.
ಆ್ಯಪ್ ಮೂಲಕ ಗಣತಿ ಕಾರ್ಯ; ಅಚ್ಚುಕಟ್ಟು ನಿರ್ವಹಣೆಗೆ ಸಿದ್ಧತೆ :
ಕಳೆದ ನಾಲ್ಕು ತಿಂಗಳುಗಳಿಂದ ಪಶುಸಂಗೋಪನಾ ಇಲಾಖೆ ಈ ಬೃಹತ್ ಸಮೀಕ್ಷಾ ಕಾರ್ಯಕ್ರಮಕ್ಕೆ ಸಿದ್ಧತೆ ನಡೆಸಿದೆ. ಈಗಾಗಲೇ ಜಿಲ್ಲೆಯಲ್ಲಿ ಒಟ್ಟು 8 ಜನ ಮಾಸ್ಟರ್ ಟ್ರೇನರ್‌ಗಳು ಆಗಸ್ಟ್ 12 ರಂದು ರಾಜ್ಯಮಟ್ಟದಲ್ಲಿ ನಡೆದ ತರಬೇತಿಯಲ್ಲಿ ತರಬೇತಿ ಪಡೆದುಕೊಂಡಿದ್ದಾರೆ ಎಂದು ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೂಲೇರ್ ಅವರು ಮಾಹಿತಿ ನೀಡಿದರು.
1919 ರಿಂದ ಜಾನುವಾರು ಗಣತಿ ನಡೆಯುತ್ತಾ ಬಂದಿದೆ. ಕಳೆದ 100 ವರ್ಷಗಳಲ್ಲಿ 20 ಗಣತಿ ನಡೆದಿವೆ. ಇದು 21ನೇ ಜಾನುವಾರು ಗಣತಿಯಾಗಿರುತ್ತದೆ. ಈ ಹಿಂದೆ ಪುಸ್ತಕದಲ್ಲಿ 200 ಕಾಲಂಗಳನ್ನು ಭರ್ತಿ ಮಾಡಬೇಕಾಗಿತ್ತು. ಈ ಬಾರಿ ಚುಟುಕಾಗಿ ಆ್ಯಪ್ ಮೂಲಕ ಮಾಹಿತಿ ನಮೂದಿಸಬಹುದು. ನೆಟ್ವರ್ಕ್ ಇಲ್ಲದಿದ್ದರೂ ಈ ಆ್ಯಪ್ ನೆಟ್ವರ್ಕ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಕೇಂದ್ರ ಸರ್ವರ್ ಜತೆ ಮಾಹಿತಿಯನ್ನು ಹಂಚಿಕೊಳ್ಳುವಂತೆ ವಿನ್ಯಾಸ ಪಡಿಸಲಾಗಿದೆ. ಎಣಿಕೆದಾರರಿಗೆ ಮತ್ತು ಮೇಲ್ವಿಚಾರಕರಿಗೆ ಪ್ರತ್ಯೇಕವಾದ ಯುಸರ್ ಐಡಿ ಮತ್ತು ಪಾಸ್ ವರ್ಡ್ ನೀಡಲಾಗುವುದು ಎಂದರು.
ಗಣತಿಯಲ್ಲಿ ಗಣತಿದಾರರು ಯಾವ ತಳಿಯ ಜಾನುವಾರುಗಳಿವೆ? ಅವುಗಳ ವಯಸೆಷ್ಟು, ಎಷ್ಟು ರೈತರು, ಯಾವ ವರ್ಗದ ರೈತರು, ಎಷ್ಟು ಮಹಿಳೆಯರು ಜಾನುವಾರು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಕಲೆಹಾಕಬೇಕು ಎಂಬುದನ್ನು ಈಗಾಗಲೇ ತಿಳಿಸಿಲಾಗಿದೆ. ಗಣತಿ ಮಹಿಯನ್ನಾಧರಿಸಿ ಸರಕಾರಗಳು ತಮ್ಮ ಮುಂದಿನ ಯೋಜನೆಯನ್ನು ಸಿದ್ಧಪಡಿಸುವುದು ಇದರ ಮುಖ್ಯ ಉದ್ದೇಶವಾಗಿದೆ. ರೈತರು ಹಾಗೂ ಹೈನುಗಾರಿಕೆ ಕ್ಷೇತ್ರಗಳಿಗೆ ಬೇಕಾದ ನೀತಿ, ಕಾರ್ಯಕ್ರಮ ರೂಪಿಸುವುದಕ್ಕಾಗಿ ಗಣತಿಯ ಅಂಶಗಳು ಬಳಕೆಯಾಗುತ್ತವೆ ಎಂದು ಹೇಳಿದರು.
ಗೋಶಾಲೆಗಳ ಮಾಹಿತಿ ಪಡೆಯಲು ನಿರ್ದೇಶನ:
ಜಾನುವಾರು ಸಾಕಾಣಿಕೆದಾರರು ಸಾಕಲಾಗುವ ದನ , ಎತ್ತು, ಎಮ್ಮೆ, ಕೋಣ, ಆಡು, ಕುರಿ, ಕೋಳಿ, ನಾಯಿ, ಕುದುರೆ, ಹಂದಿ ಬಾತುಕೋಳಿ ಹಾಗೂ ಎಮು ಹಕ್ಕಿಗಳ ಮಾಹಿತಿ ಪಡೆಯಲಾಗುವುದು. ಮಾಲಿಕರಿಲ್ಲದ ದನ ಕರುಗಳು, ನಾಯಿಗಳ ಮಾಹಿತಿಯನ್ನೂ ಸಹ ಸೇರಿಸಲಾಗುತ್ತದೆ. ಅದೇ ರೀತಿಯಲ್ಲಿ
ದೇವಸ್ಥಾನದಲ್ಲಿ ಆನೆ, ದನ ಸಾಕುವುದಿದ್ದರೆ, ಗೋಶಾಲೆಗಳಿದ್ದರೆ ಮಾಹಿತಿ ಪಡೆಯಲಾಗುತ್ತದೆ. 10ಕ್ಕಿಂತ ಜಾಸ್ತಿ ದನಗಳಿದ್ದರೆ, 1,000ಕ್ಕಿಂತ ಜಾಸ್ತಿ ಕೋಳಿ ಸಾಕಿದರೆ, 50ರ ಮೇಲ್ಪಟ್ಟು ಆಡು ಸಾಕಣೆಯಿದ್ದರೆ ಅವುಗಳನ್ನು ಫಾರಂ ಎಂದು ಪರಿಗಣಿಸಿ ಮಾಹಿತಿ ನಮೂದಿಸಿಕೊಳ್ಳಬೇಕು ಎಂದು ತಿಳಿಯಲಾಗಿದೆ.ಬೆಳಗಾವಿ ಜಿಲ್ಲೆಯ ಎಲ್ಲ ಮನೆಗಳಿಗೆ ಗಣತಿದಾರರು ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಲು ತಿಳಿಸಿಲಾಗಿದೆ. ಅದಕ್ಕಾಗಿ 247 ಗಣತಿದಾರರು, 54 ಮೇಲ್ವಿಚಾರಕರು ಇರುತ್ತಾರೆ. ಗಣತಿದಾರರು ಮನೆ ಮನೆಗೆ ತೆರಳಿದರೆ, ಮೇಲ್ವಿಚಾರಕರು ಹಾಗೂ ನೋಡಲ್ ಅಧಿಕಾರಿಗಳು ಅದರ ಒಟ್ಟು ಉಸ್ತುವಾರಿ ವಹಿಸಿಕೊಳ್ಳುಲಿದ್ದಾರೆ. ಜಿಲ್ಲೆಯಲ್ಲಿ ನಗರ ಪ್ರದೇಶದಲ್ಲಿ 3,24,584 ಕುಟುಂಬಗಳ ಸಂಖ್ಯೆಯಿದೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ 8,35,657 ಕುಟುಂಬಗಳ ಸಂಖ್ಯೆಯಿದೆ. ಒಟ್ಟು ಜಿಲ್ಲೆಯಲ್ಲಿ ಅಂದಾಜು 11,60,241 ಕುಟುಂಬಗಳ ಸಂಖ್ಯೆಯಿದ್ದು, 247 ಗಣತಿದಾರರು ಹಾಗೂ 54 ಮೇಲ್ವಿಚಾರಕರು ಗಣತಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.
ಗಣತಿ ಕಾರ್ಯ ನಿರ್ವಹಿಸಲು ಜಾನುವಾರು ಗಣತಿದಾರರು ಮನೆಮನೆಗೆ ತೆರಳಿ ಸಾರ್ವಜನಿಕರಿಂದ ಸಂಪೂರ್ಣ ಮಾಹಿತಿಗಳನ್ನು ಕಲೆಹಾಕಿ ಸಂಪೂರ್ಣ ಸಹಕಾರ ನೀಡುವುದರ ಮೂಲಕ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು
ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕೂಲೇರ ಅವರು ಕಾರ್ಯಗಾರದಲ್ಲಿ ತಿಳಿಸಿದರು.ಮಾಸ್ಟರ್ ಟ್ರೈನರ್ ಡಾ. ಆನಂದ ಪಾಟೀಲ ಮತ್ತು ಡಾ. ವಿರುಪಾಕ್ಷ ಅಡ್ಡನಗಿ, ಗಣತಿಕಾರ್ಯ ನಿರ್ವಹಿಸಲು ’21ಸ್ಟ್ ಲೈವ್‌ಸ್ಪಾಕ್ ಸೆನ್ಸಸ್’ ಆ್ಯಪ್ ಬಳಕೆಯ ಕುರಿತು ಮಾಹಿತಿ ನೀಡಿದರು.
ಕೈಪಿಡಿ- ಮಾಹಿತಿ ಪುಸ್ತಕ ಬಿಡುಗಡೆ: ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಕಾಧಿಕಾರಿ ರಾಹುಲ್ ಶಿಂಧೆ, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಡಾ. ರಾಜೀವ ಕುಲೇರ್,
ಮಾಹಿತಿ ಕೈಪಿಡಿ, ಪೋಸ್ಟರ್ ಬ್ಯಾನರ್ ಹಾಗೂ ಗಣತಿ ಕಾರ್ಯದಲ್ಲಿ ಮನೆಗಳಿಗೆ ಅಂಟಿಸುವ ಸ್ಟಿಕರ್ ಗಳನ್ನು ಬಿಡುಗಡೆ ಮಾಡಿದರು.ಪಶು ಸಂಗೋಪನಾ ಇಲಾಖೆಯ ಸಹಾಯ ನಿರ್ದೇಶಕರಾದ ಡಾ. ಅಂಬುರಾಯ ಕೊಡಗಿ, ಡಾ. ಮೋಹನ್ ಕಾಮತ್, ಡಾ. ಸದಾಶಿವ ಉಪ್ಪಾರ, ಮೇಲ್ವಿಚಾರಕರು, ಪಶು ವೈದ್ಯರು ಸೇರಿದಂತೆ ಪಶು ಸಂಗೋಪನಾ ಇಲಾಖೆ ಅಧಿಕಾರಿ, ಸಿಬ್ಬಂದಿಗಳು ಕಾರ್ಯಗಾರದಲ್ಲಿ ಪಾಲ್ಗೊಂಡಿದ್ದರು.