ಬೆಂಗಳೂರು : ಲೇಡಿಸ್‌ ಪಿಜಿಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಯುವತಿಯ ಕತ್ತು ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಕೋರಮಂಗಲದ ಲೇಡಿಸ್‌ ಪಿಜಿಯಲ್ಲಿ ಈ ಘಟನೆ ನಡೆದಿದೆ. ಮೃತ ಯುವತಿಯನ್ನು ಕೃತಿ ಕುಮಾರಿ‌ (24) ಎಂದು ಗುರುತಿಸಲಾಗಿದೆ.

ರಾತ್ರಿ 11.10ರಿಂದ 11.30ರ ಸುಮಾರಿಗೆ ಈ ಹತ್ಯೆ ನಡೆದಿದೆ. ಬಿಹಾರ ಮೂಲದ ಕೃತಿ ಕುಮಾರಿ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಕೋರಮಂಗಲದ ವಿಆರ್ ಲೇಔಟ್​​​ನ ಪಿಜಿಯಲ್ಲಿ ವಾಸವಾಗಿದ್ದರು. ರಾತ್ರಿ ಸುಮಾರು 11.10ಕ್ಕೆ ಯುವಕ ಚಾಕು ಇಟ್ಟುಕೊಂಡು ಯುವತಿ ಇದ್ದ ಲೇಡಿಸ್ ಪಿಜಿಯೊಳಗೆ ನುಗ್ಗಿದ್ದು 3ನೇ ಮಹಡಿಯಲ್ಲಿರುವ ಕೃತಿ ಕುಮಾರಿ ಅವರ ಕೊಠಡಿ ಬಳಿ ಚಾಕುವಿನಿಂದ ಹಲ್ಲೆ ಮಾಡಿದ್ದಾನೆ. ಬಳಿಕ ಕತ್ತು ಕೊಯ್ದು ಹತ್ಯೆ ಮಾಡಿದ್ದಾನೆ. ತೀವ್ರ ಗಾಯಗೊಂಡ ಕೃತಿ ಕುಮಾರಿ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಬಳಿಕ ಯುವಕ ಪರಾರಿಯಾಗಿದ್ದಾನೆ. ಪರಿಚಯಸ್ಥ ಯುವಕನಿಂದಲೇ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಕೋರಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಯುವಕನ ಪತ್ತೆ ಹಚ್ಚಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಪೊಲೀಸರು ಮೃತ ಕೃತಿ ಕುಮಾರಿ ಅವರ ಮೊಬೈಲ್ ಪರಿಶೀಲಿಸುತ್ತಿದ್ದಾರೆ. ಕಾಲ್ ಡಿಟೈಲ್ಸ್ ಹಾಗೂ ಸಿಡಿಆರ್ ಪಡೆದು ಶೋಧಿಸುತ್ತಿದ್ದಾರೆ. ಕೊನೆಯದಾಗಿ ಯಾರಿಗೆ ಕರೆ ಮಾಡಿದ್ದಾರೆ, ಯಾವ ಯಾವ ನಂಬರ್‌ನಿಂದ ಕಾಲ್ ಬಂದಿದೆ ಎಂದು ಪರಿಶೀಲಿಸುತ್ತಿದ್ದಾರೆ.