ಚುನಾವಣೆಗೆ ಸಾಕಷ್ಟು ಮುಂಚಿತವಾಗಿ ಟಿಕೆಟ್ ಘೋಷಣೆ ಮಾಡುವುದಾಗಿ ಹೇಳಿಕೊಂಡಿದ್ದ ಕಾಂಗ್ರೆಸ್ ಇದುವರೆಗೂ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿಲ್ಲ. ಆದರೆ ಬಿಜೆಪಿ ಇದೀಗ ತನ್ನ ಎಂದಿನ ಅಚ್ಚರಿಯ ರಾಜಕೀಯ ತಂತ್ರವಾಗಿ ಅಭ್ಯರ್ಥಿಗಳ ಹೆಸರುಗಳನ್ನು ಘೋಷಣೆ ಮಾಡುವ ಮೂಲಕ ಎದುರಾಳಿಗಳನ್ನು ಚುನಾವಣೆಯ ರಣಕಣದಲ್ಲಿ ದಿಟ್ಟವಾಗಿ ಎದುರಿಸುವ ಸೂಚನೆ ರವಾನಿಸಿದೆ. ಈ ಮೂಲಕ ಚುನಾವಣೆಯಲ್ಲಿ ಎದುರಾಳಿಗಳನ್ನು ಸಮರ್ಥವಾಗಿ ಕಟ್ಟಿಹಾಕಲು ಮುಂದಾಗಿದೆ.

 

ಬೆಂಗಳೂರು : ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಇನ್ನೂ ದಿನಾಂಕ ಘೋಷಣೆ ಮಾಡಿಲ್ಲ. ಆದರೆ ಬಿಜೆಪಿ ಇದೀಗ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡುವ ಮೂಲಕ ಪ್ರಮುಖ ಎದುರಾಳಿ ಕಾಂಗ್ರೆಸ್ ಪಕ್ಷಕ್ಕೆ ತಿರುಗೇಟು ನೀಡಿದೆ. ಇದರಿಂದ ಸಹಜವಾಗಿ ಕಾಂಗ್ರೆಸ್ ಪಕ್ಷಕ್ಕೆ ಒತ್ತಡ ಉಂಟಾಗಿದೆ. ಹೀಗಾಗಿ ಮುಂದಿನ ವಾರ ಕಾಂಗ್ರೆಸ್ ತನ್ನ ಮೊದಲ ಪಟ್ಟಿಯಲ್ಲಿ ರಾಜ್ಯದ ಪ್ರಮುಖ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡುವ ಸಾಧ್ಯತೆ ಇದೆ.

ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೋಲಾರ, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ವಿಜಯಪುರ, ಬೀದರ್, ಬಳ್ಳಾರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ ಕ್ಷೇತ್ರಗಳ ಹೆಸರು ಮೊದಲ ಪಟ್ಟಿಯಲ್ಲಿ ಬಿಡುಗಡೆಯಾಗಲಿದೆ. ಆರರಿಂದ ಹತ್ತು ಕ್ಷೇತ್ರಗಳ ಹೆಸರುಗಳು ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ತೀವ್ರ ಪೈಪೋಟಿಯಿಂದ ಕೂಡಿರುವ ಕ್ಷೇತ್ರಗಳಿಗೆ ನಂತರದ ದಿನಗಳಲ್ಲಿ ಹೆಸರು ಘೋಷಣೆಯಾಗಬಹುದು. ಕಾಂಗ್ರೆಸ್ ಪಕ್ಷ ಈ ಹಿಂದೆ ತಾನು ಚುನಾವಣೆಗೆ ಸಾಕಷ್ಟು ಮೊದಲೇ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿತ್ತು. ಆದರೆ, ಈಗ ಬಿಜೆಪಿ ತನ್ನ ಪಟ್ಟಿ ಬಿಡುಗಡೆ ಮಾಡಿದ್ದರೂ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆ ಇದುವರೆಗೂ ಮಾಡಿಲ್ಲ. ಇದರಿಂದ ಎಚ್ಚೆತ್ತಿರುವ ಕಾಂಗ್ರೆಸ್ ಬರುವ ದಿನಗಳಲ್ಲಿ ಎದುರಾಗಬಹುದಾದ ಹಾನಿಯನ್ನು ತುಂಬುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಆದಷ್ಟು ಶೀಘ್ರದಲ್ಲೇ ತನ್ನ ಅಭ್ಯರ್ಥಿಗಳ ಘೋಷಣೆ ಮಾಡುವ ನಿರೀಕ್ಷೆ ಇದೆ.