ಬೆಂಗಳೂರು: ಆಂಧ್ರಪ್ರದೇಶದ ಶ್ರೀಶೈಲ ದೇವಸ್ಥಾನದಲ್ಲಿ ಏ.6ರಿಂದ 10ರವರೆಗೆ ಯುಗಾದಿ ಮಹೋತ್ಸವ ನಡೆಯಲಿದ್ದು, ಭ್ರಮರಾಂಭ ಮಲ್ಲಿಕಾರ್ಜುನ ಸ್ವಾಮಿ ದೇವರ ಸ್ಪರ್ಶ ದರ್ಶನಕ್ಕೆ (ನೇರ ದರ್ಶನ) ಅವಕಾಶವಿಲ್ಲ ಎಂದು ಶ್ರೀಶೈಲ ದೇವಸ್ಥಾನದ ಆಡಳಿತ ಮಂಡಳಿಯ ಮುಖಂಡ ಡಾ.ಸಿ.ಅನಿಲ್‌ಕುಮಾರ್ ತಿಳಿಸಿದರು.

ಪ್ರತಿ ವರ್ಷ ಯುಗಾದಿ ಮಹೋತ್ಸವ ಶ್ರೀಶೈಲದಲ್ಲಿ ಅದ್ದೂರಿಯಾಗಿ ನೆರವೇರುತ್ತದೆ. ಉತ್ತರ ಕರ್ನಾಟಕದ ಲಕ್ಷಾಂತರ ಭಕ್ತಾದಿಗಳು ಪಾದಯಾತ್ರೆ ಮೂಲಕ ಈ ಉತ್ಸವದಲ್ಲಿ ಪಾಲ್ಗೊಳ್ಳುತ್ತಾರೆ. ಮಹೋತ್ಸವದ ಹಿನ್ನೆಲೆಯಲ್ಲಿ ಸ್ವಾಮಿಯ ನೇರ ದರ್ಶನಕ್ಕೆ 5 ದಿನಗಳ ಕಾಲ ಅವಕಾಶ ಇರುವುದಿಲ್ಲ. ಮಾ.27ರಿಂದ ಏ.5ರವರೆಗೆ ದೇವರ ನೇರ ದರ್ಶನಕ್ಕೆ 500 ರು. ಶುಲ್ಕ ನಿಗದಿಪಡಿಸಲಾಗಿದೆ ಎಂದು ಹೇಳಿದರು. ಯುಗಾದಿಗೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಉಚಿತ ಬಸ್‌, ಬ್ಯಾಟರಿ ವಾಹನ ವ್ಯವಸ್ಥೆ, ಅನ್ನ ಪ್ರಸಾದ, ಚಪ್ಪರಗಳು, ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲ ಅನುಕೂಲಗಳನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.