ಲೋಕಸಭೆಯ ರಣಕಣ ಸಿದ್ಧವಾಗಿದೆ. ವಿವಿಧ ಪಕ್ಷಗಳ ಅಭ್ಯರ್ಥಿಗಳ ಅಂತಿಮ ಯಾದಿ ಸಿದ್ಧವಾಗಿ ನಾಮಪತ್ರ ಸಲ್ಲಿಸುವ ಪ್ರಕ್ರಿಯೆಯೂ ಆರಂಭವಾಗಿದೆ. ಸ್ಪರ್ಧಿಸಲು ಟಿಕೆಟ್ ಪಡೆಯುವ ಅಭ್ಯರ್ಥಿಗಳ ಅರ್ಹತೆ ಅನರ್ಹತೆಗಳ ಕುರಿತಾದ ಬಿಸಿ ಬಿಸಿ ಚರ್ಚೆಗೆ ಈಗ ಪೂರ್ಣವಿರಾಮ ಬಿದ್ದಂತಾಗಿದೆ. ಅವರು ಯೋಗ್ಯ, ಇವರು ಅಯೋಗ್ಯ ಎಂದೆಲ್ಲ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕು ಜನರಿಗಿದೆ ನಿಜ. ಆದರೆ ಕೊನೆಗೂ ರಾಜಕೀಯ ಪಕ್ಷಗಳು ತಮಗೆ ಸೂಕ್ತ ಕಂಡವರನ್ನೇ ಆಯ್ಕೆ ಮಾಡಿ ಟಿಕೆಟ್ ಕೊಡುತ್ತಾರೆ. ಅವರಿಗೆ ಹಣಬಲ, ಜಾತಿಬಲ ಇವೆಲ್ಲ ಇದ್ದು ಗೆಲ್ಲುವುದು ಮುಖ್ಯವೆನಿಸುತ್ತದೆ. ಇನ್ನುಳಿದಿರುವುದು ಮತದಾರರ ನಿರ್ಣಯ. ಇದ್ದವರಲ್ಲೇ ಯಾರು ಹಿತವರು ನಮಗೆ ಎಂದು ಆಲೋಚಿಸಬೇಕಾದವರು ಮತದಾರರು. ಅಭ್ಯರ್ಥಿ ಅರ್ಹನೋ ಅನರ್ಹನೋ ಎನ್ನುವ ವಿಮರ್ಶೆಗೆ ತೊಡಗದೆ ನಮಗೆ ಬೇಕೆನಿಸುವ ವ್ಯಕ್ತಿ ಅಥವಾ ಪಕ್ಷವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮತ ಹಾಕುವುದಕ್ಕೆ ಮತದಾರನ ಅಧಿಕಾರ ಸೀಮಿತವಾದದ್ದು.
ಈ ಮಧ್ಯೆ ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ಅಭ್ಯರ್ಥಿ ಯಾರಾಗಬೇಕು ಎನ್ನುವ ವಿಚಾರದಲ್ಲಿ ಸಾಕಷ್ಟು ವಿಚಾರ ಮಥನ ಆಗಿದೆ. ನಾಲ್ಕು ವರ್ಷಗಳ ನಂತರ ಧಿಡೀರನೇ ಎದ್ದು ಮತಕ್ಷೇತ್ರದಲ್ಲಿ ಕಾಣಿಸಿಕೊಂಡ ಹಾಲಿ ಸಂಸದ ಅನಂತ ಹೆಗಡೆಯವರೊಂದಿಗೆ ಚಕ್ರವರ್ತಿ ಸೂಲಿಬೆಲೆ, ಹರಿಪ್ರಸಾದ ಕೋಣೆಮನೆ, ಶಶಿಭೂಷಣ ಹೆಗಡೆ ಮೊದಲಾದ ಹೆಸರುಗಳೂ ಕಾಣಿಸಿಕೊಂಡವು. ಆದರೆ ಪಕ್ಷದ ವರಿಷ್ಠರು ಆಯ್ಕೆ ಮಾಡಿದ್ದು ವಿಶ್ವೇಶ್ವರ ಹೆಗಡೆ ಕಾಗೇರಿಯವರನ್ನು. ಸಾಮಾಜಿಕ ಜಾಲತಾಣದಲ್ಲೂ ಪತ್ರಿಕೆಗಳಲ್ಲೂ ಈ ಎಲ್ಲರ ಪರ ಹಾಗೂ ವಿರೋಧದ ಅಭಿಪ್ರಾಯಗಳು ಬಂದವು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲರಿಗೂ ಇದ್ದೇ ಇದೆ ಮತ್ತು ವಿಚಾರ ಭೇದವೂ ಇರುವಂತಹದೆ. ಯಾರನ್ನೇ ಆಗಲಿ ಬೆಂಬಲಿಸಲು ಅಥವಾ ವಿರೋಧಿಸಲು ಪ್ರತಿಯೊಬ್ಬರಿಗೂ ಅವರವರದೇ ಆದ ಕಾರಣಗಳು, ಸಮರ್ಥನೆಗಳು ಇದ್ದೇಇರುತ್ತವೆ. ಆದರೆ ಜನರ ಸಮರ್ಥನೆಗಳನ್ನು ರಾಜಕೀಯ ಪಕ್ಷಗಳು ಎಲ್ಲ ಸಲವೂ ಒಪ್ಪಿಕೊಳ್ಳುತ್ತವೆಂದು ಹೇಳಲು ಬರುವುದಿಲ್ಲ. ಏಕೆಂದರೆ ಪಕ್ಷದ ಲೆಕ್ಕಾಚಾರಗಳು ಬೇರೆಯೇ ಆಗಿರುತ್ತವೆ. ಹಲವು ಬಗೆಯ ಒತ್ತಡಗಳು, ಪ್ರಭಾವಗಳು, ವಶೀಲಿ- ಶಿಫಾರಸುಗಳು ಅಲ್ಲಿ ಕೆಲಸ ಮಾಡುತ್ತವೆ. ಪ್ರಭಾವಿ ನಾಯಕರು ತಮಗೆ ಬೇಕಾದವರಿಗೆ ಟಿಕೆಟ್ ಕೊಡಿಸಲು ಪ್ರಯತ್ನಿಸುತ್ತಾರೆ, ಕೊಡಿಸುತ್ತಾರೆ. ಆಗ ಜನಾಭಿಪ್ರಾಯಕ್ಕೆ ಮನ್ನಣೆ ಸಿಗದಿರುವುದೂ ಉಂಟು.
ರಾಜ್ಯದ ಹಲವು ಲೋಕಸಭಾ ಕ್ಷೇತ್ರಗಳಲ್ಲಿ ಅಂತಹ ಗೊಂದಲ ಇದ್ದೇ ಇದೆ. ಟಿಕೆಟ್ ಸಿಗದವರ ಅಸಮಾಧಾನ, ಬಂಡಾಯ, ಪಕ್ಷಾಂತರ ಎಲ್ಲ ಕಾಲಕ್ಕೂ ಇದ್ದದ್ದೇ. ಎಲ್ಲರನ್ನೂ ಎಲ್ಲ ಕಾಲದಲ್ಲೂ ಸಮಾಧಾನ ಪಡಿಸುವುದು ಅಸಾಧ್ಯವೆಂಬ ಮಾತನ್ನು ಒಪ್ಪಿಕೊಳ್ಳಲೇಬೇಕಾಗುತ್ತದೆ. ಕೊನೆಗೆ ಮತದಾರನಿಗೆ ಉಳಿದಿರುವುದು ಯಾರಿಗಾದರೂ ಒಬ್ಬರಿಗೆ ಮತ ಹಾಕುವ ಅನಿವಾರ್ಯತೆ. ಅದು ವೈಯಕ್ತಿಕ ಅಭಿಲಾಷೆಯಿಂದಲೂ ಇರಬಹುದು, ಪಕ್ಷಕ್ಕಾಗಿಯಾದರೂ ಇರಬಹುದು, ದೇಶಕ್ಕಾಗಿಯಾದರೂ ಇರಬಹುದು. ಯಾರೂ ನಮ್ಮ ಮತ ಪಡೆಯಲು ಅರ್ಹರಲ್ಲ ಎಂದು ಭಾವಿಸುವವರಿಗಾಗಿ ನೋಟಾ ಇದ್ದೇಇದೆ. ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆ ತನ್ನ ಮತದಾನದ ಹಕ್ಕನ್ನು ಚಲಾಯಿಸಬೇಕಾದ್ದು ಆದ್ಯ ಧರ್ಮ. ನೋಟಾ ಎನ್ನುವುದು ಪಲಾಯನವಾದ. ನಮ್ಮ ಅಭಿಪ್ರಾಯಗಳು ಮತದ ಮೂಲಕವೇ ವ್ಯಕ್ತವಾಗಬೇಕು. ಇದು ಪ್ರಜಾಪ್ರಭುತ್ವ.
ಉತ್ತರ ಕನ್ನಡ ಜಿಲ್ಲೆಗೆ ಬೇಕಾದ ಸಮರ್ಥ ರಾಜಕೀಯ ಪ್ರಾತಿನಿಧ್ಯ ಈತನಕ ಸಿಕ್ಕಿಲ್ಲವೆಂಬ ನಿರಾಶೆಯ ನಡುವೆಯೇ ನಾವಿಂದು ಮತ್ತೆ ಮತದಾನಕ್ಕೆ ಸಿದ್ಧರಾಗಬೇಕಾಗಿದೆ. ಸಂಸದರಾದವರು ಜಿಲ್ಲೆಗಾಗಿ ಅಂದರೆ ತಮ್ಮ ಮತಕ್ಷೇತ್ರಕ್ಕಾಗಿ ಮಾಡಬಹುದಾದ ಸಾಕಷ್ಟು ಕೆಲಸಗಳಿವೆ. ಹಿಂದಿನವರು ಮಾಡಿದ್ದಾರೋ ಇಲ್ಲವೋ ಎಂಬ ಚರ್ಚೆಗೆ ನಾವೀಗ ಹೋಗಬೇಕಿಲ್ಲ. ಯಾವುದೇ ಒಂದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾದ ಹಲವು ಸಂಗತಿಗಳಿರುತ್ತವೆ. ಸಂಸದರಾದವರಿಗೆ ಜಿಲ್ಲೆಯ ಬೆಳವಣಿಗೆಯ ದೃಷ್ಟಿಯಿಂದ ತಾವು ಏನು ಮಾಡಬಹುದು ಎಂಬ ಒಂದು ಮುನ್ನೋಟ ಬೇಕಾಗುತ್ತದೆ. ಅದು ರೈಲು ಸಂಪರ್ಕವಿರಬಹುದು, ಸುಪರ್ ಸ್ಪೆಶಾಲಿಟಿ ಆಸ್ಪತ್ರೆಯಾಗಿರಬಹುದು, ವಿಮಾನ ನಿಲ್ದಾಣವಿರಬಹುದು, ಒಟ್ಟಾರೆ ಕೇಂದ್ರ ಸರಕಾರದಿಂದ ಲೋಕಸಭಾ ಕ್ಷೇತ್ರಕ್ಕೆ ಏನೇನು ಪಡೆದುಕೊಳ್ಳಲು ಸಾಧ್ಯವೋ ಅದನ್ನೆಲ್ಲ ತರಲೆಂದೇ ಜನರು ಅವರನ್ನು ಆಯ್ಕೆ ಮಾಡಿರುತ್ತಾರೆ. ( ಕೆಲವರ ವಿಚಾರ ಬೇರೆ ಇರಲು ಸಾಧ್ಯ, ಆ ಪ್ರಶ್ನೆ ಬೇರೆ. ಅವರಿಗೆ ಜಿಲ್ಲೆಯ ಅಭಿವೃದ್ಧಿ ಅಷ್ಟು ಮುಖ್ಯವೆನಿಸಲಿಕ್ಕಿಲ್ಲ. ಆ ಚರ್ಚೆ ಇಲ್ಲಿ ಅನಗತ್ಯ).
ಈಗ ಬಿಜೆಪಿಯಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕಾಂಗ್ರೆಸ್ಸಿನಿಂದ ಶ್ರೀಮತಿ ಅಂಜಲಿ ನಿಂಬಾಳಕರ ಅವರ ಹೆಸರುಗಳು ಸಾರಲ್ಪಟ್ಟಿವೆ. ಕೆಲ ಪಕ್ಷೇತರರು ಸಹ ಸ್ಪರ್ಧಿಸಬಹುದಾದರೂ ಮತದಾರರು ಮುಖ್ಯವಾಗಿ ಪರಿಗಣಿಸುವುದು ಈ ಎರಡು ಪ್ರಮುಖ ರಾಜಕೀಯ ಪಕ್ಷಗಳ ಅಭ್ಯರ್ಥಿಗಳನ್ನು ಮಾತ್ರ. ಅಂಜಲಿ ನಿಂಬಾಳಕರ ಅವರು ಈ ಮೊದಲು ಖಾನಾಪುರದಿಂದ ಕಾಂಗ್ರೆಸ್ ಎಂ. ಎಲ್. ಎ. ಯಾಗಿದ್ದರು ಮತ್ತು ಕಳೆದ ಸಲ ಸೋಲು ಕಂಡಿದ್ದರು. ಅಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದುಬಂದಿದ್ದಾರೆ. ಮೂಲತಃ ಮರಾಠಿ ಭಾಷಿಕರಾಗಿರುವ ನಿಂಬಾಳಕರ ಕಷ್ಟಪಟ್ಟು ಕನ್ನಡವನ್ನು ಮಾತನಾಡಬಲ್ಲರು. ಆದರೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅವರ ಹೆಸರು ಪೂರ್ಣ ಅಪರಿಚಿತ ಮತ್ತು ಖಾನಾಪುರ, ಕಿತ್ತೂರು, ಬೈಲಹೊಂಗಲದ ಸಂಪಗಾಂವ್ ಭಾಗದಲ್ಲಿ ಮಾತ್ರ ಮರಾಠಿ ಮತದಾರರನ್ನು ಅವರು ಆಕರ್ಷಿಸಬಲ್ಲರು. ಒಂದು ವೇಳೆ ಅವರು ಆರಿಸಿಬಂದರೂ ಜಿಲ್ಲೆಗೆ ಅವರು ಹತ್ತಿರವಾಗಲಾರರು ಮತ್ತು ಜಿಲ್ಲೆಯ ಅಭಿವೃದ್ಧಿಯ ದೃಷ್ಟಿಯಿಂದ ಯಾವುದೇ ಪ್ರಯೋಜನವಾಗುವ ಸಾಧ್ಯತೆಗಳು ಕಡಿಮೆ. ಇದು ಟೀಕೆಗಾಗಿ ಹೇಳುವ ಮಾತಲ್ಲ. ವಾಸ್ತವದ ಅರಿವು ಇಟ್ಟುಕೊಂಡು ಹೇಳುವುದು. ಮೊದಲೇ ನಮ್ಮ ಜಿಲ್ಲೆಯ ಬೇಕು ಬೇಡಿಕೆಗಳು, ಆಗಬೇಕಾದ ಕೆಲಸಗಳು ಸಾಕಷ್ಟಿರುವಾಗ ನಾವು ನಮ್ಮ ಜನರ ಸಂಪರ್ಕವನ್ನು ಪಡೆಯುವಂತಹ ಅಭ್ಯರ್ಥಿಯನ್ನೇ ಆರಿಸಿತರಬೇಕಾದ್ದು ಅನಿವಾರ್ಯ.
ವಾದ ವಿವಾದ, ಆಕ್ಷೇಪಣೆಗಳು ಏನೇ ಇರಲಿ, ವಿಶ್ವೇಶ್ವರ ಹೆಗಡೆ ಕಾಗೇರಿಯವರು ಜಿಲ್ಲೆಗಷ್ಟೇ ಅಲ್ಲ, ರಾಜ್ಯಮಟ್ಟದಲ್ಲೇ ಪರಿಚಿತರು. ದೀರ್ಘಕಾಲ ಶಾಸಕರಾಗಿ, ಸಚಿವರಾಗಿ, ಸಭಾಪತಿಯಾಗಿ ಕಾರ್ಯ ನಿರ್ವಹಿಸಿರುವ ಅವರು ರಾಜಕೀಯ ಕ್ಷೇತ್ರದಲ್ಲಿ ತಮ್ಮ ಪ್ರಾಮಾಣಿಕತೆ ಮತ್ತು ಸರಳ ಸಜ್ಜನಿಕೆಯ ನಡೆನುಡಿಗೂ ಹೆಸರಾದವರು. ಅವರ ಮತಕ್ಷೇತ್ರದ ಕಾರ್ಯ ನಿರ್ವಹಣೆ ಮತ್ತು ಜನಸಂಪರ್ಕದ ಕುರಿತು ಕೆಲವು ವಲಯಗಳಲ್ಲಿ ಅಸಮಾಧಾನದ ದನಿ ಕೇಳಿಬರುತ್ತಿರಬಹುದಾದರೂ ಇಂದು ಕಣದಲ್ಲಿರುವ ಅಭ್ಯರ್ಥಿಗಳಲ್ಲಿ ಅವರಿಗಿಂತ ಉತ್ತಮ ಆಯ್ಕೆ ಬೇರೆ ಕಾಣಸಿಗುತ್ತಿಲ್ಲ. ಅಲ್ಲದೇ ದೇಶದಾದ್ಯಂತ ಕಂಡುಬರುತ್ತಿರುವ ಮೋದಿಅಲೆ ಅವರ ಗೆಲುವಿಗೆ ಅನುಕೂಲಕರ ವಾತಾವರಣ ನಿರ್ಮಿಸಿದರೆ ಅಚ್ಚರಿಯೇನಿಲ್ಲ. ಕೆನರಾ ಲೋಕಸಭಾ ಕ್ಷೇತ್ರದ ಬಹುದೊಡ್ಡ ಬ್ರಾಹ್ಮಣ ಸಮಾಜ ಮತ್ತು ಇತರ ಸಮಾಜದವರ ಬೆಂಬಲವನ್ನು ಕಾಗೇರಿಯವರು ಪಡೆಯುವ ನಿರೀಕ್ಷೆ ಇದೆ.
ಈ ಸಂದರ್ಭದಲ್ಲಿ ಹೇಳಲೇಬೇಕಾದ ಬೇರೆ ಕೆಲ ಸಂಗತಿಗಳೂ ಇವೆ. ಅಭಿವೃದ್ಧಿಯ ವಿಷಯ ಬಂದಾಗ ನಾನು ಜಾತಿ ಧರ್ಮ, ನೆಂಟಸ್ತಿಕೆ ಯಾವುದನ್ನೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅನಂತ ಹೆಗಡೆಯವರಿರಲಿ, ಕಾಗೇರಿಯವರಿರಲಿ, ನನಗೆ ವೈಯಕ್ತಿಕವಾಗಿ ಪರಿಚಿತರಲ್ಲ. ನೆಂಟರಿಷ್ಟರೂ ಅಲ್ಲ. ಅವರ ಜಾತಿ ನನಗೆ ಮುಖ್ಯವಲ್ಲವೂ ಅಲ್ಲ. ಆದರೆ ಒಬ್ಬ ಪತ್ರಿಕಾಕರ್ತನಾಗಿ ನಾನು ಅವರ ಬಗ್ಗೆ ತಿಳಿದುಕೊಳ್ಳಬೇಕಾದಷ್ಟನ್ನು ತಿಳಿದುಕೊಂಡಿದ್ದೇನೆ. ನಮ್ಮ ಜಿಲ್ಲೆಯ ಹಿತದ ಅಂದರೆ ಸರ್ವತೋಮುಖ ಏಳ್ಗೆಯ ದೃಷ್ಟಿಯಿಂದ ನನಗೆ ಅವರನ್ನು ಹೊಗಳುವ ಹಕ್ಕೂ ಇದೆ, ಟೀಕಿಸುವ ಹಕ್ಕೂ ಇದೆ. ಯಾರೋ ಒಬ್ಬರು ಇಂಥವರನ್ನು ಟೀಕಿಸಿದರೆ ಹುಷಾರ್ ಎಂಬ ಎಚ್ಚರಿಕೆ ಕೊಟ್ಟ ಬರೆಹವನ್ನೂ ನಾನು ನೋಡಿದೆ. ಅದು ತೀರಾ ಅಪ್ರಬುದ್ಧತೆಯ ಲಕ್ಷಣ. ಮತದಾರರಿಗೆ ಇರುವ ಪ್ರತಿನಿಧಿಯನ್ನು ಟೀಕಿಸುವ ಹಕ್ಕನ್ನು ಯಾರೂ ಕಸಿದುಕೊಳ್ಳಲು ಬರುವುದಿಲ್ಲ.
ಚುನಾವಣೆಯಲ್ಲಿ ಇಂಥವರೇ ಆರಿಸಿ ಬರುತ್ತಾರೆಂದು ಈಗ ನಾವು ಖಚಿತವಾಗಿ ಹೇಳಲು ಬರುವುದಿಲ್ಲ. ಅದು ಊಹೆಯಷ್ಟೇ. ಯಾರೇ ಆರಿಸಿ ಬರಲಿ ಅವರು ಮರೆಯದೇ ಮಾಡಬೇಕಾದ್ದಿಷ್ಟು…
೧. ಸಂಸದರಾದ ನಂತರ ಮತಕ್ಷೇತ್ರವನ್ನು ಮರೆಯಬೇಡಿ.
೨. ಸತತವಾಗಿ ಜನಸಂಪರ್ಕವನ್ನು ಇರಿಸಿಕೊಳ್ಳಿ. ೩. ಕ್ಷೇತ್ರದಾದ್ಯಂತ ಸಂಚರಿಸಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ.
೪. ಜಿಲ್ಲೆಯ ಬೆಳವಣಿಗೆಗೆ ಬೇಕಾದ ಅಗತ್ಯ ಯೋಜನೆಗಳನ್ನು ಗುರುತಿಸಿಕೊಳ್ಳಿ.
. ೫. ಆ ಯೋಜನೆಗಳನ್ನು ಜಿಲ್ಲೆಗೆ ಪಡೆದುಕೊಳ್ಳಲು ನಿಮ್ಮ ಸಂವಿಧಾನದತ್ತ ಅಧಿಕಾರವನ್ನು ಬಳಸಿಕೊಳ್ಳಿ ಮತ್ತು ಜಾರಿಗೆ ಬರುವಂತೆ ಮಾಡಿ.
೬. ಮತ ಕೊಟ್ಟವರೊಡನೆ ಅಧಿಕಾರ ದರ್ಪ ತೋರಿಸದೇ ಸೌಜನ್ಯದಿಂದ ನಡೆದುಕೊಳ್ಳಿ.
೭. ಮತದಾರರ ಸಮಸ್ಯೆ ,ತೊಂದರೆ, ಅವರ ಬೇಕು ಬೇಡಿಕೆಗಳನ್ನು ತಿಳಿದುಕೊಳ್ಳಲು ಎಲ್ಲ ತಾಲೂಕುಗಳಲ್ಲೂ ಒಂದು ಕಚೇರಿ ತೆರೆದು ಸಾಧ್ಯವಾದಷ್ಟರ ಮಟ್ಟಿಗೆ ಅವುಗಳ ಪರಿಹಾರಕ್ಕೆ ಪ್ರಯತ್ನಿಸಿ. ಇದರಿಂದಾಗಿ ನಾಳೆ ನೀವು ಅಧಿಕಾರದಲ್ಲಿರಲಿ ಬಿಡಲಿ, ಜನಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತೀರಿ.
ನಮ್ಮ ಜಿಲ್ಲೆಯ ದೃಷ್ಟಿಯಿಂದ ಯಾರನ್ನು ಆರಿಸಿತರಬೇಕು ಎಂದು ನಿರ್ಧರಿಸುವುದಷ್ಟೇ ಈಗ ಮತದಾರರಿಗೆ ಉಳಿದಿದೆ. ವೈಯಕ್ತಿಕ ಮನಸ್ತಾಪಗಳನ್ನು , ಭಿನ್ನಾಭಿಪ್ರಾಯಗಳನ್ನು , ಸ್ವಹಿತದ ವಿಚಾರಗಳನ್ನು ದೂರವಿಟ್ಟು , ಹಿಂದಿನದನ್ನೆಲ್ಲ ಮರೆತು ಜಿಲ್ಲೆಯಷ್ಟೇ ಅಲ್ಲ, ರಾಷ್ಟ್ರದ ಹಿತವನ್ನೂ ಗಮನದಲ್ಲಿಟ್ಟುಕೊಂಡು ಯಾರನ್ನು ಆರಿಸಿದರೆ ಒಳ್ಳೆಯದು ಎಂದು ಒಂದು ಒಳ್ಳೆಯ ನಿರ್ಧಾರಕ್ಕೆ ಬರೋಣ. ನಮ್ಮ ಹಕ್ಕನ್ನು ನಾವು ಮರೆಯದೇ ಚಲಾಯಿಸೋಣ.
– ಎಲ್. ಎಸ್. ಶಾಸ್ತ್ರಿ