ಬೆಂಗಳೂರು: ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮಾಸಿಕ 15ರಿಂದ 19 ಗಂಟೆಗಳ ಕಾರ್ಯಭಾರ ನಿರ್ವಹಿಸುವ ಅತಿಥಿ ಉಪನ್ಯಾಸಕರಿಗೆ ಇನ್ನು ಮುಂದೆ ತಿಂಗಳಿಗೊಂದು ಸಾಂದರ್ಭಿಕ ರಜೆ ಮಂಜೂರು ಮಾಡಿ ಸರ್ಕಾರ ಆದೇಶಿಸಿದೆ. ಬಹಳ ಕಾಲದಿಂದ ಸಾಂದರ್ಭಿಕ ರಜೆ ನೀಡಬೇಕೆಂಬ ಬೇಡಿಕೆ ಈಗ ಈಡೇರಿದಂತಾಗಿದೆ. ಆದರೆ, ಈ ಸಾಂದರ್ಭಿಕ ರಜೆ ದಿನದ ಕಾರ್ಯಭಾರವನ್ನು ಇತರೆ ದಿನಗಳಲ್ಲಿ ಸರಿದೂಗಿಸ ಬೇಕೆಂದು ಉನ್ನತ ಶಿಕ್ಷಣ ಇಲಾಖೆ ಸೂಚಿಸಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಅತಿಥಿ ಉಪನ್ಯಾಸಕರು, ಇದುತೋರಿಕೆ ಅಷ್ಟೆ. ರಜೆ ದಿನದ ಕಾರ್ಯಭಾರವನ್ನು ಬೇರೆ ದಿನ ಸರಿದೂಗಿಸಬೇಕು ಎಂದಾದ ಮೇಲೆ ಅದು ರಜೆ ಹೇಗಾಗುತ್ತದೆ? ಇದು ಅಧಿಕಾರಿಗಳ ತಂತ್ರ. ಸರ್ಕಾರ ನಮ್ಮ ಬೇಡಿಕೆಗಳನ್ನು ಷರತ್ತು ರಹಿತವಾಗಿ ಈಡೇರಿಸಲು ಸಿದ್ಧವಿದ್ದರೂ ಅಧಿಕಾರಿಗಳು ಬಿಡುವುದಿಲ್ಲ. ಅನಗತ್ಯ ಸಲಹೆ ನೀಡಿ ನಮಗೆ ಅನುಕೂಲಗಳು ಆಗದಂತೆ ನೋಡಿ ಕೊಳ್ಳುತ್ತಿದ್ದಾರೆ ಎಂದು ಅತಿಥಿ ಉಪನ್ಯಾಸಕರ ವಲಯದಲ್ಲಿ ಬೇಸರ ವ್ಯಕ್ತವಾಗಿದೆ.