ಮೂಡುಬಿದಿರೆ: ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಅವಳಿ ಜವಳಿಗಳಾದ ಹರ್ಷಿತಾ ಹೆಬ್ಬಾರ್ ಮತ್ತು ಹಿತಾ ಹೆಬ್ಬಾರ್ ಈ ಬಾರಿ ಪಿಯುಸಿಯಲ್ಲಿ ತಲಾ 576 ಅಂಕ ಪಡೆಯುವ ಮೂಲಕ ಶೇ.96 ಫಲಿತಾಂಶದೊಂದಿಗೆ ರಿಸಲ್ಟ್ ನಲ್ಲೂ ಹೋಲಿಕೆ ಮೆರೆದು ಗಮನ ಸೆಳೆದಿದ್ದಾರೆ.
ಹಿತಾ ಮೂಲತಃ ಕಳಸ ಮುನ್ನೂರು ಪಾಲು ನಿವಾಸಿ. ಕೃಷಿಕ ಅರುಣ್ ಕುರ್ಮಾ-ಸಂಧ್ಯಾ ದಂಪತಿಯ ಅವಳಿ ಮಕ್ಕಳ ಪೈಕಿ ಹಿತಾ ಹೆಬ್ಬಾರ್ ವಿಜ್ಞಾನ ವಿಭಾಗ ಮತ್ತು ಹರ್ಷಿತಾ ಹೆಬ್ಬಾರ್ ವಾಣಿಜ್ಯ ವಿಭಾಗದ ವಿದ್ಯಾರ್ಥಿಯಾಗಿದ್ದವರು.
ಹರ್ಷಿತಾ ಎಕಾನಮಿಕ್ಸ್ನಲ್ಲಿ ನೂರಕ್ಕೆ ನೂರು ಅಂಕ ಪಡೆದಿದ್ದು, ಹಿತಾ ಸಂಸ್ಕೃತ ಜತೆಗೆ ಗಣಿತದಲ್ಲೂ ನೂರಕ್ಕೆ ನೂರು ಅಂಕ ಗಳಿಸಿದ್ದಾರೆ. ಬೇರೆ ಬೇರೆ ಕೋರ್ಸ್ ಆಯ್ದುಕೊಂಡ ಈ ಅವಳಿಗಳ ಪೈಕಿ ಹರ್ಷಿತಾ ಬಿಕಾಂ ಪದವಿ ಪಡೆದು ಜತೆಗೆ ಎಸಿಸಿಎ ತರಬೇತಿಗೆ ಆಸಕ್ತರಾಗಿದ್ದಾರೆ. ಹಿತಾ ಸಿಇಟಿ ಮೂಲಕ ಎಂಜಿನಿಯರಿಂಗ್ ಕಲಿಕೆಯ ಉತ್ಸಾಹವನ್ನು ಹಂಚಿಕೊಂಡಿದ್ದಾರೆ.