ಹೊನ್ನಾವರ: ಹೊನ್ನಾವರ – ತಾಳಗುಪ್ಪ ರೈಲ್ವೆ ಮಾರ್ಗ ನಿರ್ಮಿಸುವಂತೆ ಕೇಂದ್ರ ರೈಲ್ವೆ ಇಲಾಖೆ ಮೇಲೆ ಒತ್ತಡ ಹೇರುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮನವಿ ಪತ್ರ ನೀಡಲಾಯಿತು.
ಮನವಿಯಲ್ಲಿ ಏನಿದೆ : ಹೊನ್ನಾವರ ತಾಲೂಕಿನ ಸಾವಿರಾರು ಯುವಕರು ಉದ್ಯೋಗದ ನಿಮಿತ್ತ ಮತ್ತು ಶಿಕ್ಷಣದ ನಿಮಿತ್ತ ಬೆಂಗಳೂರಿನಲ್ಲಿ ವಾಸವಾಗಿದ್ದು ಅವರು ರಜೆಯಲ್ಲಿ ಊರಿಗೆ ಬಂದು ಹೋಗಬೇಕಾದರೆ ಬಸ್ಸನ್ನೇ ಅವಲಂಬಿಸಬೇಕಾಗಿದೆ. ಹಬ್ಬದ ಸಂದರ್ಭದಲ್ಲಿ ಬಸ್ಸಿನ ಟಿಕೆಟ್ ದರ ಸಾವಿರಾರು ರೂಪಾಯಿ ಆಗುತ್ತದೆ. ನಮ್ಮೂರ ಯುವಕರು ಮತ್ತು ವಿದ್ಯಾರ್ಥಿಗಳು ಸಾಮಾನ್ಯವಾಗಿ ಆರ್ಥಿಕವಾಗಿ ಹಿಂದುಳಿದವರೇ ಆಗಿದ್ದು, ದುಬಾರಿ ಹಣ ಕೊಟ್ಟು ಊರಿಗೆ ಬರುವುದು ಕಷ್ಟಕರ.
ಇದರಿಂದಾಗಿ ಕೆಲವೊಮ್ಮೆ ಅನಿವಾರ್ಯ ಸಂದರ್ಭ ಇದ್ದರೂ ಊರಿಗೆ ಬರುವುದು ಮುಂದೂಡಬೇಕಾಗುತ್ತದೆ. ನಮ್ಮೂರಿನ ಕೆಲ ವ್ಯಾಪಾರಿಗಳು ಬೆಂಗಳೂರಿನಿಂದ ಸಾಮಾನು ಸರಂಜಾಮುಗಳನ್ನು ತರಬೇಕಾಗುತ್ತದೆ. ಅದೂ ಈಗಿನ ಸಾರಿಗೆ ಸ್ಥಿತಿಯಲ್ಲಿ ತರುವುದು ದುಬಾರಿಯಾಗುತ್ತಿದೆ. ನಮ್ಮ ಜಿಲ್ಲೆಯ ಅನಾರೋಗ್ಯ ಪೀಡಿತ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಕರೆದೊಯ್ಯಬೇಕಾದರೂ ತುಂಬಾ ತೊಂದರೆ ಆಗುತ್ತಿದೆ.
ಇವೆಲ್ಲ ಸಮಸ್ಯೆ ಬಗೆಹರಿಯಬೇಕಾದರೆ ಹೊನ್ನಾವರ – ತಾಳಗುಪ್ಪ ರೈಲ್ವೆ ಮಾರ್ಗ ಮಂಜೂರಾತಿ ಆಗಿ ರೈಲ್ವೆ ಓಡಾಟ ಆರಂಭವಾಗಬೇಕು. ಈ ರೈಲ್ವೆಯ ಕುರಿತು ವಿಶೇಷ ಕಾಳಜಿ ವಹಿಸಿ ಈ ರೈಲ್ವೇ ಮಂಜೂರಾತಿ ಬಗ್ಗೆ ರೈಲ್ವೆ ಸಚಿವರ ಹತ್ತಿರ ಈ ಬಗ್ಗೆ ಮಾತಾಡಿದರೆ ಈ ಕಾರ್ಯ ಆಗಬಹುದು. ದಯವಿಟ್ಟು ಈ ಬಗ್ಗೆ ಕಾಳಜಿ ವಹಿಸಿ ನಮ್ಮ ಸಮಸ್ಯೆಯನ್ನು ಬಗೆಹರಿಸಿಕೊಡಬೇಕು ಎಂದು ಮನವಿ ಮಾಡಲಾಗಿದೆ.
ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಂಕಿಯ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಂದ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಂಕಿ ಬಿಜೆಪಿ ಓಬಿಸಿ ಕಾರ್ಯದರ್ಶಿ ಆನಂದ ನಾಯ್ಕ, ಜಿಲ್ಲಾ ಕಾರ್ಯದರ್ಶಿ ಸುಬ್ರಾಯ ನಾಯ್ಕ, ಓಬಿಸಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿ ನಾಯ್ಕ, ಸತೀಶ್ ನಾಯ್ಕ, ಸುಬ್ರಾಯ ನಾಯ್ಕ ಬೊಳೆಬಸ್ತಿ, ಸುರೇಶ್ ನಾಯ್ಕ (ಬುಡ್ಡಾ) ಮುಂತಾದವರು ಹಾಜರಿದ್ದರು. ಮನವಿ ಸ್ವೀಕರಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ತಾಳಗುಪ್ಪ-ಹೊನ್ನಾವರ ರೈಲ್ವೆ ಮಾರ್ಗದ ಬೇಡಿಕೆ ಈಡೇರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.