ಮಂಗಳೂರು : ನಿಟ್ಟೆ ವಿಶ್ವವಿದ್ಯಾಲಯ ತಜ್ಞರು ಈಗ ಅಡಿಕೆ ಬಗ್ಗೆ ಮಹತ್ವದ ಸಂಶೋಧನೆ ನಡೆಸಿದ್ದಾರೆ. ಅಡಿಕೆ ಕ್ಯಾನ್ಸರ್ ಕಾರಕ ಅಲ್ಲ. ಬದಲಿಗೆ ಅಡಿಕೆಯಿಂದ ಕ್ಯಾನ್ಸರ್ ಕಣಗಳು ತಟಸ್ಥಗೊಳ್ಳುತ್ತವೆ ಎಂದು ಕಂಡುಕೊಂಡಿದ್ದಾರೆ. ಮೂರು ವರ್ಷಗಳ ಹಿಂದೆ ಈ ಕುರಿತು ಅಧ್ಯಯನ, ಸಂಶೋಧನೆ ನಡೆಸುವುದಕ್ಕೆ ಕ್ಯಾಂಪ್ಕೋ ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ ಹಾಗೂ ನಿಟ್ಟೆ ವಿಶ್ವವಿದ್ಯಾಲಯಗಳು ತಿಳಿವಳಿಕೆ ಒಪ್ಪಂದ ಮಾಡಿಕೊಂಡಿದ್ದವು. ಒಟ್ಟು ನಾಲ್ಕು ವಿಭಾಗಗಳಲ್ಲಿ ಸಂಶೋಧನೆ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಅಡಿಕೆಯ ರಸ ಕ್ಯಾನ್ಸರ್ ಕಣಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಪ್ರತ್ಯೇಕ ಅಧ್ಯಯನ ಮಾಡಲಾಗಿದೆ. ಕ್ಯಾನ್ಸರ್ ಕಣಗಳನ್ನು ಬೆಳೆಸಿ ಅವುಗಳ ಮೇಲೆ ಅಡಿಕೆಯ ಸಾರವನ್ನು ಪ್ರಯೋಗಿಸಿದಾಗ ಕ್ಯಾನ್ಸರ್ ಕಣಗಳ ಬೆಳವಣಿಗೆಯನ್ನು ಪ್ರತಿಬಂಧಿಸುತ್ತದೆ ಎಂದು ಎನ್ನುವುದನ್ನು ತಜ್ಞರು ಕಂಡುಕೊಂಡಿದ್ದಾರೆ. ಆದರೆ ಸಾಮಾನ್ಯ ಕಣಗಳ ಮೇಲೆ ಇದು ಯಾವುದೇ ಪರಿಣಾಮ ಬೀರುವುದಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕ್ಯಾಂಪ್ಕೋ ಅಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ ಅವರು, ಅಡಿಕೆ ಪರಿಣಾಮಗಳ ಬಗ್ಗೆ ನಿಟ್ಟೆ ವಿಶ್ವವಿದ್ಯಾಲಯ ತಜ್ಞರ ಅಧ್ಯಯನ ಪೂರ್ಣಗೊಂಡಿದೆ. ಅಡಿಕೆ ಬೆಳೆಗಾರರ ಪರವಾಗಿ ಬಂದಿದೆ. ಅಡಿಕೆ ಕ್ಯಾನ್ಸರ್ ಕಾರಕವಲ್ಲ ಎನ್ನುವುದು ಸಾಬೀತುಗೊಂಡಿದೆ. ಕೇಂದ್ರದ ನೇತೃತ್ವದಲ್ಲಿ ಸಮಗ್ರ ಅಧ್ಯಯನದ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದ್ದಾರೆ.