ನವದೆಹಲಿ: ಸುಮಾರು ಐದು ದಶಕದ ಬಳಿಕ ಕಾಂಗ್ರೆಸ್‌ ಪಕ್ಷದ ದೆಹಲಿಯ ಪ್ರಧಾನ ಕಚೇರಿಯ ವಿಳಾಸ ಬದಲಾಗುತ್ತಿದೆ. ಇಂದಿರಾ ಗಾಂಧಿ ಅಧಿಕಾರ ಸ್ವೀಕಾರ, ಹತ್ಯೆ ಸೇರಿ ಹಲವು ರಾಜಕೀಯ ಪಲ್ಲಟ, ವಿಪ್ಲವಗಳಿಗೆ ಸಾಕ್ಷಿಯಾಗಿದ್ದ 24, ಅಕ್ಬರ್‌ ರೋಡ್‌ನಿಂದ 9ಎ, ಕೋಟ್ಲಾ ರಸ್ತೆಗೆ ತನ್ನ ಪ್ರಧಾನ ಕಚೇರಿಯನ್ನು ಬದಲಾಯಿಸುತ್ತಿದೆ. ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ ಅವರ ಕಾಲಾವಧಿಯಲ್ಲಿ 2009ರಲ್ಲಿ ಈ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಇದಾಗಿ 15 ವರ್ಷಗಳ ಬಳಿಕ ಈ ಕಟ್ಟಡ ಪೂರ್ಣಗೊಂಡಿದ್ದು, ಜ.15 ರಂದು ಕಾಂಗ್ರೆಸ್‌ ವರಿಷ್ಠೆ ಸೋನಿಯಾ ಗಾಂಧಿ ಅವರು ಈ ಆರಂತಸ್ತಿನ “ಇಂದಿರಾ ಗಾಂಧಿ ಭವನ” ಉದ್ಘಾಟನೆ ಮಾಡಲಿದ್ದಾರೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯಲ್ಲಿ ಪ್ರತಿಪಕ್ಷ ನಾಯಕ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಕಾರ್ಯಕಾರಿ ಮಂಡಳಿ ಸದಸ್ಯರು, ಪ್ರದೇಶ ಕಾಂಗ್ರೆಸ್‌ ಕಮಿಟಿ ಅಧ್ಯಕ್ಷರು ಸೇರಿ ದೇಶದೆಲ್ಲೆಡೆಯಿಂದ 400 ಪ್ರಮುಖ ನಾಯಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ.

1978ರಲ್ಲಿ ಇಂದಿರಾ ಬಣದ ಕಾಂಗ್ರೆಸ್‌ಗೆ ಸಂಸದ ಗದ್ದಂ ವೆಂಕಟಸ್ವಾಮಿ ಅವರು ತಮ್ಮ 24, ಅಕ್ಬರ್ ರಸ್ತೆಯ ಅಧಿಕೃತ ನಿವಾಸವನ್ನು ಪಕ್ಷದ ಕಚೇರಿಯಾಗಿ ಮಾರ್ಪಡಿಸಲು ಬಿಟ್ಟುಕೊಟ್ಟಿದ್ದರು. ಅಂದಿನಿಂದ ಈ ನಿವಾಸವೇ ಪಕ್ಷದ ಶಕ್ತಿ ಕೇಂದ್ರವಾಗಿ ಬದಲಾಗಿತ್ತು.