ಬೆಳಗಾವಿ : ರವಿವಾರ ಬೆಳಗಾವಿ ಜಿಲ್ಲೆಯ ಮಹದಾಯಿ ಜಲಾನಯನ ಪ್ರದೇಶಕ್ಕೆ ಕೇಂದ್ರ ಪ್ರವಾಹ ತಂಡದ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಆದರೆ, ಜಿಗಣಿ ಕಾಟಕ್ಕೆ ಅಧಿಕಾರಿಗಳು ತತ್ತರಿಸಿದ್ದಾರೆ. ತಂಡದ ಸದಸ್ಯರಿಗೆ ಕೊಡೆ ಹಾಗೂ ಗಮ್ ಶೂ ನೀಡಲಾಗಿದೆ. ಆದರೂ ಜಿಗಣಿಗಳು ಕಾಟ ನೀಡಿವೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಲ್ಲಿ ಕೊಡೆ ಹಿಡಿದು ರೈನ್ ಕೋಟ್ ಹಾಕಿಕೊಂಡು ಓಡಾಡಿದ ಪ್ರವಾಹ ತಂಡದ ಸದಸ್ಯರನ್ನು ಜಿಗಣಿಗಳು ಕಾಡಿದವು. ಕರ್ನಾಟಕ ಮತ್ತು ಗೋವಾ ಗಡಿಯ ಚೋರ್ಲಾ ಬಳಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಪೊಲೀಸರು ಪ್ರವಾಹ ತಂಡದ ಸದಸ್ಯರನ್ನು ಸ್ವಾಗತಿಸಿದರು. ಅಲ್ಲಿಂದ ಕಣಕುಂಬಿ ಅರಣ್ಯದ ಹಳತಾರ ನಾಲೆ, ಸುರ್ಲಾ ನಾಲೆ, ಕಳಸಾ ನಾಲೆಗೆ ತಂಡ ಭೇಟಿ ನೀಡಿತು. ನಂತರ ಕಣಕುಂಬಿ ಪ್ರವಾಸಿ ಮಂದಿರಕ್ಕೆ ತೆರಳಿ ಸಭೆ ನಡೆಸಿದೆ. ಬಂಡೂರಿ ನಾಲಾ ಪ್ರದೇಶದ ನೇರಸೆ ಗ್ರಾಮಕ್ಕೆ ತಂಡದವರು ಭೇಟಿ ನೀಡಿ ಅನಂತರ ಬೆಳಗಾವಿಗೆ ಆಗಮಿಸಿದರು.