ಉಡುಪಿ: ಮಲ್ಪೆ ಸೇಂಟ್ ಮೇರಿಸ್ ದ್ವೀಪದ ಬಳಿ
ಸಂಶಯಾಸ್ಪದ ರೀತಿಯಲ್ಲಿ ಸಂಚರಿಸುತ್ತಿದ್ದ ಒಮಾನ್ ದೇಶದ ಮೀನುಗಾರಿಕಾ ಬೋಟೊಂದನ್ನು ಕರಾವಳಿ ಕಾವಲು ಪೊಲೀಸ್‌ (ಸಿಎಸ್‌ಪಿ) ಹಾಗೂ ಮಂಗಳೂರಿನ ಕೋಸ್ಟ್ ಗಾರ್ಡ್ ವಶಕ್ಕೆ ಪಡೆದಿದ್ದು, ಅದರಲ್ಲಿದ್ದ ಮೂವರನ್ನು ಬಂಧಿಸಲಾಗಿದೆ.

ತಮಿಳುನಾಡಿನ ಜೇಮ್ಸ್ ಫ್ರಾಂಕ್ಲಿನ್ ಮೋಸೆಸ್‌ (50), ರಾಬಿನ್ ಸ್ಟನ್ (50) ಹಾಗೂ ಡೆರೋಸ್ ಅಲ್ಲೋನ್ಸ್ (38) ಬಂಧಿತರು.

ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ಫೆ. 17ರಂದು ಒಮಾನ್ ದೇಶದ ದುಕಂ ಮೀನುಗಾರಿಕಾ ಬಂದರಿನಿಂದ ಹೊರಟಿದ್ದ ಈ ಬೋಟ್ ಕಾರವಾರದ ಮೂಲಕ ಮಲ್ಪೆಯ ಸೇಂಟ್ ಮೇರಿಸ್ ದ್ವೀಪದ ಕಡೆಗೆ ಸಂಚರಿಸುತ್ತಿತ್ತು. ಈ ಕುರಿತು ಮಾಹಿತಿ ಪಡೆದ ಸಿಎಸ್‌ಪಿ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಫೆ.23ರಂದು ಸೇಂಟ್ ಮೇರಿಸ್ ದ್ವೀಪದ ಬಳಿ ಬೋಟ್ ಅನ್ನು ತಪಾಸಣೆ ನಡೆಸಿ, ಮಂಗಳೂರಿನ ಕೋಸ್ಟ್ ಗಾರ್ಡ್ ಸಹಕಾರದೊಂದಿಗೆ ವಶಕ್ಕೆ ಪಡೆದಿದ್ದಾರೆ.

ಒಮಾನ್ ದೇಶಕ್ಕೆ ಸೇರಿದ ಈ ಬೋಟ್ ಅನ್ನು ಕೋಸ್ಟ್ ಗಾರ್ಡ್, ಸಿಎಸ್‌ಪಿ, ಕೇಂದ್ರ ಗುಪ್ತಚರ ದಳ, ಕಸ್ಟಮ್ಸ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಜಂಟಿಯಾಗಿ ಪರಿಶೀಲನೆ ನಡೆಸಿದ್ದು ಯಾವುದೇ ಸಂಶಯಾಸ್ಪದ ವಸ್ತುಗಳು ದೊರೆತಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೋಸ್ಟ್ ಗಾರ್ಡ್ ಅಧಿಕಾರಿ ಸುಖಿಂದರ್ ಸಿಂಗ್ ಅವರ ದೂರನ್ನು ಆಧರಿಸಿ ಮಲ್ಪೆಯ ಸಿಎಸ್‌ಪಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.