ನವದೆಹಲಿ: ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಾಯಕತ್ವ ಅಥವಾ ಕಾರ್ಯಸೂಚಿಯ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ ಮತ್ತು ಕಳೆದ ವರ್ಷ ಸಂಸತ್ತಿನ ಚುನಾವಣೆಗಾಗಿ ಇಂಡಿಯಾ ಮೈತ್ರಿಕೂಟ ರಚಿಸಿದ್ದರೆ ಅದನ್ನು ವಿಸರ್ಜಿಸಬೇಕು ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಗುರುವಾರ ಹೇಳಿದ್ದಾರೆ.
ಎಎಪಿ, ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತ್ರಿಕೋನ ಹೋರಾಟಕ್ಕೆ ಸಾಕ್ಷಿಯಾಗಿರುವ ದೆಹಲಿ ವಿಧಾನಸಭಾ ಚುನಾವಣೆಯ ಕುರಿತ ಪ್ರಶ್ನೆಗೆ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಪ್ರತಿಕ್ರಿಯಿಸಿದ್ದಾರೆ. ವಿಶೇಷವೆಂದರೆ, ಕೆಲವು ತಿಂಗಳ ಹಿಂದೆ ಲೋಕಸಭೆ ಚುನಾವಣೆಗೆ ಆಮ್ ಆದ್ಮಿ ಪಕ್ಷ ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದವು. ಈಗ ದೆಹಲಿ ವಿಧಾನಸಭೆ ಚುನಾವಣೆಗೆ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿವೆ.
“ಈ ಬಗ್ಗೆ ನಾನು ಏನನ್ನೂ ಹೇಳಲಾರೆ, ಏಕೆಂದರೆ ನಮಗೂ ದೆಹಲಿ ಚುನಾವಣೆಗೆ ಯಾವುದೇ ಸಂಬಂಧವಿಲ್ಲ. ಎಎಪಿ, ಕಾಂಗ್ರೆಸ್ ಮತ್ತು ಇತರ ಪಕ್ಷಗಳು ಬಿಜೆಪಿಯನ್ನು ಹೇಗೆ ಎದುರಿಸಬೇಕೆಂದು ನಿರ್ಧರಿಸಬೇಕು. ನನಗೆ ನೆನಪಿರುವಂತೆ, ಸಮಯ ಮಿತಿ ಇರಲಿಲ್ಲ. ದುರದೃಷ್ಟವಶಾತ್, ಇಂಡಿಯಾ ಮೈತ್ರಿಕೂಟದ ಸಭೆಯನ್ನು ಆಯೋಜನೆ ಮಾಡಿಲ್ಲ, ಆದ್ದರಿಂದ ನಾಯಕತ್ವ, ಅಜೆಂಡಾ ಅಥವಾ ನಮ್ಮ (ಇಂಡಿಯಾ ಬ್ಲಾಕ್) ಅಸ್ತಿತ್ವದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ… ಅದು ಸಂಸತ್ತಿಗೆ ಮಾತ್ರ ರಚನೆಯಾಗಿದ್ದರೆ ಅವರು ಮೈತ್ರಿಕೂಟವನ್ನು ಕೊನೆಗೊಳಿಸಬೇಕು ಎಂದು ಒಮರ್ ಅಬ್ದುಲ್ಲಾ ದೆಹಲಿ ಚುನಾವಣೆ ಮತ್ತು ಇಂಡಿಯಾ ಮೈತ್ರಿಕೂಟದ ಕುರಿತ ಪ್ರಶ್ನೆಗೆ ಸುದ್ದಿ ಸಂಸ್ಥೆ ಎಎನ್‌ಐ (ANI)ಗೆ ಉತ್ತರಿಸಿದ್ದಾರೆ.
ಕಳೆದ ಕೆಲವು ವಾರಗಳಿಂದ, ಎಎಪಿ ಮತ್ತು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರಚಾರದಲ್ಲಿ ಪರಸ್ಪರ ದಾಳಿ ಮಾಡುತ್ತಿದ್ದಾರೆ. ಅರವಿಂದ ಕೇಜ್ರಿವಾಲ್ ನೇತೃತ್ವದ ಾಮ್ ಆದ್ಮಿ ಪಕ್ಷವು ಭ್ರಷ್ಟಾಚಾರ ಮತ್ತು ಕಳಪೆ ಆಡಳಿತದ ಬಗ್ಗೆ ಕಾಂಗ್ರೆಸ್ ನಾಯಕರು ಆರೋಪಿಸಿದರೆ, ಕಾಂಗ್ರೆಸ್ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಎಎಪಿ ಆರೋಪಿಸಿದೆ.
ಲೋಕಸಭೆ ಚುನಾವಣೆಯ ನಂತರದ ತಿಂಗಳುಗಳಲ್ಲಿ ಇಂಡಿಯಾ ಮೈತ್ರಿಕೂಟ ಮತ್ತು ಅದರ ನಾಯಕತ್ವದ ಭವಿಷ್ಯದ ಬಗ್ಗೆ ಪ್ರಶ್ನೆಗಳು ಎದ್ದಿವೆ.ವಿವಿಧ ಚುನಾವಣೆಗಳಲ್ಲಿ ಹಿನ್ನಡೆ ಅನುಭವಿಸಿದ ಲೋಕಸಭೆಯಲ್ಲಿ ಪ್ರಮುಖ ವಿಪಕ್ಷವಾದ ಕಾಂಗ್ರೆಸ್ ಇಂಡಿಯಾ ಮೈತ್ರಿಕೂಟವನ್ನು ಮುನ್ನಡೆಸಬೇಕೆ ಎಂಬ ಪ್ರಶ್ನೆಗಳು ಸಹ ಎದ್ದಿವೆ. ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ ಅವರು ಅವಕಾಶ ನೀಡಿದರೆ ಮೈತ್ರಿಕೂಟವನ್ನುಮುನ್ನಡೆಸಲು ಮುಂದಾಗಿದ್ದಾರೆ ಮತ್ತು ಹಲವಾರು ಅಂಗಪಕ್ಷಗಳು ಅವರನ್ನು ಬೆಂಬಲಿಸಿವೆ. ಈ ಹಿಂದೆ, ಕಾಂಗ್ರೆಸ್ ಪಕ್ಷವು ನಾಯಕತ್ವವನ್ನು ಲಘುವಾಗಿ ತೆಗೆದುಕೊಳ್ಳಬಾರದು ಎಂದು ಅಬ್ದುಲ್ಲಾ ಹೇಳಿದ್ದರು.
ಫಾರೂಕ್ ಅಬ್ದುಲ್ಲಾ ವ್ಯತಿರಿಕ್ತ ಹೇಳಿಕೆ :
ಇಂಡಿಯಾ’ ಮೈತ್ರಿಕೂಟವನ್ನು ವಿಸರ್ಜಿಸಬೇಕು ಎಂಬ ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿಕೆ ಕುರಿತು ನ್ಯಾಷನಲ್ ಕಾನ್ಸರೆನ್ಸ್ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮೈತ್ರಿಯ ಪ್ರಾಮುಖ್ಯತೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಫಾರೂಕ್ ಅಬ್ದುಲ್ಲಾ, ಮೈತ್ರಿಗಳು ಕೇವಲ ಚುನಾವಣಾ ಸ್ಪರ್ಧೆಗಳಿಗೆ ಸೀಮಿತವಾಗಿರುವುದಿಲ್ಲ. ಬದಲಾಗಿ ದೇಶವನ್ನು ಬಲಪಡಿಸಲು ಮತ್ತು ದ್ವೇಷ ಹರಡುವವರನ್ನು ಮಟ್ಟಹಾಕಲು ಉದ್ದೇಶಿಸಲಾಗಿದೆ.
‘ಇಂಡಿಯಾ’ ಮೈತ್ರಿಕೂಟವನ್ನು ಕೇವಲ ಲೋಕಸಭಾ ಚುನಾವಣೆಗಾಗಿ ಮಾತ್ರ ರಚಿಸಲಾಗಿದೆ ಎಂದು ಭಾವಿಸುವವರು ಈ ತಪ್ಪು ಕಲ್ಪನೆಯಿಂದ ಹೊರಬರಬೇಕು ಎಂದು ಒಮರ್ ಅಬ್ದುಲ್ಲಾ ಹೆಸರನ್ನು ನೇರವಾಗಿ ಉಲ್ಲೇಖಿಸದೆ ತಿರುಗೇಟು ನೀಡಿದ್ದಾರೆ.
‘ಇಂಡಿಯಾ’ ಮೈತ್ರಿಕೂಟದ ಉದ್ದೇಶವು ಚುನಾವಣೆಗಳನ್ನು ಮೀರಿ ವಿಸ್ತರಿಸಿದೆ. ರಾಷ್ಟ್ರೀಯ ಏಕತೆಯ ಮೇಲೆ ಕೇಂದ್ರೀಕರಿಸಿದೆ ಎಂದು ಫಾರೂಕ್ ಪ್ರತಿಪಾದಿಸಿದ್ದಾರೆ.