ಗೋಕಾಕ : ದೀಪಾವಳಿ ಬಲಿ ಪಾಡ್ಯಮಿ ನಿಮಿತ್ತ ಅರಭಾವಿ ಶಾಸಕ ಮತ್ತು ಜಿಲ್ಲಾ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಉತ್ತರ ಕರ್ನಾಟಕದ ಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಸವದತ್ತಿ ಯಲ್ಲಮ್ಮಗುಡ್ಡಕ್ಕೆ ತೆರಳಿ ಶ್ರೀ ಕ್ಷೇತ್ರದ ವಿಶೇಷ ದರ್ಶನ ಪಡೆದರು.
ಶನಿವಾರದಂದು ಸಂಜೆ ಶ್ರೀ ಕ್ಷೇತ್ರ ಜೋಗುಳ ಭಾವಿ ಮತ್ತು ಯಲ್ಲಮ್ಮದೇವಿ ದೇವಸ್ಥಾನಕ್ಕೆ ತೆರಳಿ ನಾಡಿನ ಸಕಲ ಜನತೆಯ ಸುಖ, ಶಾಂತಿ, ಆರೋಗ್ಯ, ಸಮೃದ್ಧಿಗಾಗಿ ಅವರು ವಿಶೇಷವಾದ ಪ್ರಾರ್ಥನೆ ಮಾಡಿದರು.
ಮೊದಲು ಜೋಗುಳ ಭಾವಿಗೆ ತೆರಳಿದ ಶಾಸಕರು ಅಲ್ಲಿ ಎಣ್ಣೆ ಹೊಂಡದಲ್ಲಿ ನಮಸ್ಕರಿಸಿ ದೇವರ ದರ್ಶನ ಪಡೆದುಕೊಂಡರು.
ನಂತರ ಸುಪ್ರಸಿದ್ಧ ಸವದತ್ತಿ ಯಲ್ಲಮ್ಮ (ರೇಣುಕಾ) ದೇವಿ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆಯನ್ನು ನೆರವೇರಿಸಿದರು.
ರೇಣುಕಾ ಯಲ್ಲಮ್ಮ ದೇವಿಗೆ ಉಡಿ ತುಂಬುವ ಕಾರ್ಯಕ್ರಮದ ನಂತರ ಸಂಪ್ರದಾಯದಂತೆ ದೇವಸ್ಥಾನದ ಶಿಖರ ಮೇಲೆ ಕುಂಕುಮ- ಭಂಡಾರದ ಸಿಂಚನ ಅರ್ಪಣೆ ಮಾಡಿದರು. ವಿಶೇಷವಾದ ಧಾರ್ಮಿಕ ಕಾರ್ಯಕ್ರಮಗಳನ್ನು ನೆರವೇರಿಸಿದರು.
ತಮ್ಮ ಮನೆತನದವರು ಪ್ರತಿ ವರ್ಷವೂ ದೀಪಾವಳಿ ಬಲಿ ಪಾಡ್ಯಮಿ ದಿನದಂದು ಶ್ರೀ ಕ್ಷೇತ್ರ ಯಲ್ಲಮ್ಮ ದೇವಸ್ಥಾನಕ್ಕೆ ತೆರಳಿ ದೇವಿಯ ದರ್ಶನ ಪಡೆಯುತ್ತಿದ್ದಾರೆ. ಈ ಸಂಪ್ರದಾಯವೂ ತಮ್ಮ ತಾಯಿ- ತಂದೆಯವರ ಕಾಲದಿಂದಲೂ ಬಂದಿದ್ದು, ಇದನ್ನು ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ. ಈ ದೀಪಾವಳಿ ಹಬ್ಬ ನಾಡಿನ ಎಲ್ಲ ಜನರು ಮತ್ತು ರೈತರಿಗೆ ಸುಖವನ್ನು ನೀಡಲಿ. ಅವರ ಬಾಳಿನಲ್ಲಿ ಸಂಭ್ರಮದ ವಾತಾವರಣ ಸದಾ ನಿರ್ಮಾಣವಾಗಲಿ. ಇಡೀ ಭಕ್ತರ ಮೇಲೆ ತಾಯಿ ಯಲ್ಲಮ್ಮದೇವಿ ಆಶೀರ್ವಾದ ಮಾಡಿ ಹರಿಸಲಿ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಆಶಿಸಿದರು.
ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಸ್.ಪಿ.ಎಂ. ಮಹೇಶ ಮತ್ತು ಅರ್ಚಕ ಏಕನಗೌಡ ಅವರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ನಿವೃತ್ತ ಅಧಿಕಾರಿ ರವಿ ಕೋಟಾರಗಸ್ತಿ, ಅಭಿವೃದ್ಧಿ ಪ್ರಾಧಿಕಾರದ ಉಪ- ಕಾರ್ಯದರ್ಶಿ ನಾಗರತ್ನ ಚೋಳಿನ, ಮೇಲ್ವಿಚಾರಕ ಅಲ್ಲಂ ಪ್ರಭು, ಪ್ರಾಧಿಕಾರದ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.