ಬೆಳಗಾವಿ: ‘ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಏಪ್ರಿಲ್‌ 11ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(ಆರ್‌ಸಿಯು) 13ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ. 46,013 ವಿದ್ಯಾರ್ಥಿಗಳು ಪದವಿ, 2,866 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ’ ಎಂದು ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್‌ ಹೇಳಿದರು.

ಇಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅಂದು ಬೆಳಿಗ್ಗೆ 11.30ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್‌ ಗೆಹ್ಲೋತ್‌ ಅಧ್ಯಕ್ಷತೆ ವಹಿಸುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಉಪಸ್ಥಿತರಿರುವರು. ಮುಂಬೈನ ಸೋಮಯ್ಯ ವಿದ್ಯಾವಿಹಾರ ವಿಶ್ವವಿದ್ಯಾಲಯದ ಭಾಷೆ ಮತ್ತು ಸಾಹಿತ್ಯ ವಿಭಾಗದ ಡೀನ್‌ ಪ್ರೊ.ಜಿ.ಎನ್‌.ದೇವಿ ಘಟಿಕೋತ್ಸವ ಭಾಷಣ ಮಾಡುವರು’ ಎಂದು ವಿವರಿಸಿದರು.

ಮೂವರಿಗೆ ಗೌರವ ಡಾಕ್ಟರೇಟ್‌:

‘ಕೃಷಿ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಹುಕ್ಕೇರಿ ತಾಲ್ಲೂಕಿನ ನಿಡಸೋಸಿಯ ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಅವರಿಗೆ ‘ಡಾಕ್ಟರ್‌ ಆಫ್‌ ಲೆಟರ್ಸ್‌’, ಕಾನೂನು ಕ್ಷೇತ್ರ ಮತ್ತು ಸಂವಿಧಾನ ಜಾಗೃತಿಯಲ್ಲಿ ಕಾರ್ಯತತ್ಪರರಾದ ಹೈಕೋರ್ಟ್‌ ನ್ಯಾಯಮೂರ್ತಿ ಎಚ್‌.ಎನ್‌.ನಾಗಮೋಹನ ದಾಸ್‌ ಅವರಿಗೆ ‘ಡಾಕ್ಟರ್‌ ಆಫ್‌ ಲಾ’ ಮತ್ತು ಶಿಕ್ಷಣ, ಸಾಮಾಜಿಕ ಸೇವೆ ರಂಗದಲ್ಲಿ ವಿಜಯಪುರದ ಸೀಕ್ಯಾಬ್‌ ಸಂಸ್ಥಾಪಕ ಮತ್ತು ಅಧ್ಯಕ್ಷ ಶಮಸುದ್ದೀನ್‌ ಅಬ್ದುಲ್ಲಾಹ್‌ ಪುಣೇಕರ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಗುತ್ತಿದೆ’ ಎಂದು ಹೇಳಿದರು.

ಕುಲಸಚಿವ ಸಂತೋಷ ಕಾಮಗೌಡ, ಮೌಲ್ಯಮಾಪನ ಕುಲಸಚಿವ ಪ್ರೊ.ರವೀಂದ್ರನಾಥ ಕದಂ, ಹಣಕಾಸು ಎಂ.ಎ.ಸಪ್ನಾ ಇತರರಿದ್ದರು.
***********

11 ಚಿನ್ನದ ಪದಕ:

‘ಈ ಸಲದ ಘಟಿಕೋತ್ಸವದಲ್ಲಿ 10 ವಿದ್ಯಾರ್ಥಿಗಳಿಗೆ 11 ಚಿನ್ನದ ಪದಕ ನೀಡಲಾಗುತ್ತಿದೆ. ಎಂ.ಎ ಕನ್ನಡದಲ್ಲಿ ಆರ್‌ಸಿಯು ಮುಖ್ಯ ಕ್ಯಾಂಪಸ್‌ನ ಶಿವಶಂಕರ ಕಾಂಬಳೆ ಎರಡು ಚಿನ್ನದ ಪದಕ ಮತ್ತು ನಗದು ಬಹುಮಾನ ಗಳಿಸಿದ್ದಾರೆ. ಎಂ.ಎ ಸಮಾಜಶಾಸ್ತ್ರದಲ್ಲಿ ಆರ್‌ಸಿಯು ಮುಖ್ಯ ಕ್ಯಾಂಪಸ್‌ನ ಶ್ರೇಯಾ ಅಂಗಡಿ, ಎಂಬಿಎಯಲ್ಲಿ ಆರ್‌ಸಿಯು ಮುಖ್ಯ ಕ್ಯಾಂಪಸ್‌ನ ಹೀನಾಕೌಸರ್‌ ತುಬಾಕಿ, ಎಂ.ಎಸ್ಸಿ ಗಣಿತದಲ್ಲಿ ಆರ್‌ಸಿಯು ಮುಖ್ಯ ಕ್ಯಾಂಪಸ್‌ನ ಶ್ರೀದೇವಿ ಅರಕೇರಿ, ಎಂ.ಕಾಂ ಕಾಸ್ಟಿಂಗ್‌ ಆ್ಯಂಡ್‌ ಟ್ಯಾಕ್ಸೇಷನ್‌ ಗ್ರೂಪ್‌ನಲ್ಲಿ ಆರ್‌ಸಿಯು ಮುಖ್ಯ ಕ್ಯಾಂಪಸ್‌ನ ಸಂತೋಷ ತಳವಾರ, ಬಿ.ಕಾಂನಲ್ಲಿ ಗೋಕಾಕದ ಕೆಎಲ್‌ಇ ಸಂಸ್ಥೆಯ ಪದವಿ ಕಾಲೇಜಿನ ಬಶೀರಾ ಮಿಲಾದಿ, ಬಿ.ಎಸ್ಸಿಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ತುಂಗಳ ಸ್ಕೂಲ್‌ ಆಫ್‌ ಬೇಸಿಕ್‌ ಆ್ಯಂಡ್‌ ಅಪ್ಲೈಡ್‌ ಸೈನ್ಸ್‌ನ ಅಶ್ವಿನಿ ಶಿವಯೋಗಿ, ಬಿ.ಎ ಇಂಗ್ಲಿಷ್‌ನಲ್ಲಿ ಬಾಗಲಕೋಟೆಯ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಯಂಕಪ್ಪ ಪೂಜಾರಿ, ಬಿ.ಎ ಕನ್ನಡದಲ್ಲಿ ರಾಣಿ ಪಾರ್ವತಿದೇವಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಮುಸ್ಕಾನ್‌ ಹೊಸಳ್ಳಿ, ಬಿ.ಎ ಸಮಾಜಶಾಸ್ತ್ರದಲ್ಲಿ ಗೋಕಾಕದ ಜೆಎಸ್‌ಎಸ್‌ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದ ತಿಲಕಸಿಂಗ್‌ ರಜಪೂತ ಮತ್ತು ತಲಾ ಒಂದು ಚಿನ್ನದ ಪದಕ ಗಳಿಸಿದ್ದಾರೆ’ ಎಂದು ವಿವರಿಸಿದರು.
********

ಪದವೀಧರರ ಮಾಹಿತಿ

20

ಪಿಎಚ್‌.ಡಿ ಪಡೆದವರು

19,678

ಕಲಾ ವಿಭಾಗದ ಪದವೀಧರರು

13,965

ವಾಣಿಜ್ಯ ವಿಭಾಗದವರು

10,305

ಶಿಕ್ಷಣದಲ್ಲಿ ಪದವಿ ಪಡೆದವರು

4,931

ವಿಜ್ಞಾನ ಪದವೀಧರರು