ಮಂಗಳೂರು: ಬೆಳಗಾವಿಯಲ್ಲಿ ವಿಧಾನ ಮಂಡಲದ ಚಳಿಗಾಲದ ಅಧಿವೇಶನವನ್ನು ಮಂಡ್ಯದಲ್ಲಿ ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕಾರಣಕ್ಕಾಗಿ ಒಂದು ದಿನ ಮೊಟಕುಗೊಳಿಸಲಾಗಿದೆ. ಡಿಸೆಂಬರ್ 9 ರಿಂದ 19 ರವರೆಗೆ ಮಾತ್ರ ಅಧಿವೇಶನ ನಡೆಯಲಿದೆ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊದಲು ಒಂಬತ್ತರಿಂದ ಇಪ್ಪತ್ತರವರೆಗೆ ಅದಿವೇಶನ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಾಹಿತ್ಯ ಸಮ್ಮೇಳನ ಡಿಸೆಂಬರ್ 20ರಿಂದ ಆರಂಭವಾಗಲಿದೆ. ಮುಖ್ಯಮಂತ್ರಿ ಮತ್ತು ಸಚಿವರು ಭಾಗವಹಿಸುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ರಾಜ್ಯ ಮತ್ತು ಅದರಲ್ಲೂ ವಿಶೇಷವಾಗಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆಯಾಗಬೇಕು. ಈ ವಿಷಯದಲ್ಲಿ ಅಧಿವೇಶನ ಸಫಲವಾದರೆ ನಾವು ಆ ಭಾಗದಲ್ಲಿ ಅಧಿವೇಶನ ನಡೆಸುತ್ತಿರುವುದು ಅರ್ಥಪೂರ್ಣವಾಗಲಿದೆ. ಆ ಭಾಗದ ಜನರಿಗೆ ಗೌರವ ನೀಡಿದಂತಾಗುತ್ತದೆ. ಈ ಕಾರಣಕ್ಕಾಗಿ ಅಧಿವೇಶನದಲ್ಲಿ ರಾಜಕೀಯ ತಿಕ್ಕಾಟ ಬೇಡ. ಆಡಳಿತ ಹಾಗೂ ವಿರೋಧ ಪಕ್ಷಗಳು ತಮ್ಮ ವಿವಿಧ ರಾಜಕೀಯ ಕಿತ್ತಾಟ ಏನಿದ್ದರೂ ಸದನ ಸದನದ ಹೊರಗೆ ನಡೆಸಿ ಎಂದು ಅವರು ತಿಳಿಸಿದರು. ಉಪಚುನಾವಣೆಯಲ್ಲಿ ಜಯಗಳಿಸಿರುವ ಮೂವರು ಶಾಸಕರಿಗೆ ಅಧಿವೇಶನದ ಸಂದರ್ಭದಲ್ಲಿ ಪ್ರಮಾಣವಚನ ಬೋಧಿಸಲಾಗುವುದು ಎಂದು ಅವರು ತಿಳಿಸಿದರು.
ಮುಡಾ ಹಗರಣದ ಬಗ್ಗೆ ಚರ್ಚೆಗೆ ಅವಕಾಶ ನೀಡುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಿದ ಅವರು, ನಿಯಮದಂತೆ ಸದನ ನಡೆಸುತ್ತೇನೆ. ಸದನ ಸಲಹಾ ಸಮಿತಿಯಲ್ಲಿ ಎಲ್ಲವೂ ನಿರ್ಧಾರವಾಗುತ್ತದೆ ಎಂದು ತಿಳಿಸಿದರು.