ಅಹಮದಾಬಾದ್ : ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 149ನೇ ಜನ್ಮದಿನದ ಅಂಗವಾಗಿ ಗುಜರಾತ್‌ನ ಏಕತಾ ಪ್ರತಿಮೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಪುಷ್ಪ ನಮನ ಸಲ್ಲಿಸಿದರು. ಈ ವೇಳೆ ಮಾತನಾಡಿದ ಅವರು, ಒಂದು ರಾಷ್ಟ್ರ, ಒಂದು ಚುನಾವಣೆ ನೀತಿಯನ್ನು ಶೀಘ್ರದಲ್ಲೇ ಜಾರಿಗೊಳಿಸುವುದಾಗಿ ಹೇಳಿದ್ದಾರೆ. ಪ್ರತಿ ವರ್ಷ ಅಕ್ಟೋಬರ್ 31ರಂದು ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ನೆನಪಿಗಾಗಿ ಆಚರಿಸಲಾಗುವ ರಾಷ್ಟ್ರೀಯ ಏಕತಾ ದಿವಸ್ ಆಚರಣೆಗಾಗಿ ಮೆಗಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಇದರಲ್ಲಿ ಪಾಲ್ಗೊಂಡು ಮೋದಿ, “ಈ ಬಾರಿಯ ರಾಷ್ಟ್ರೀಯ ಏಕತಾ ದಿನವು ಅದ್ಭುತವಾದ ಕಾಕತಾಳೀಯತೆಯನ್ನು ತಂದಿದೆ. ಒಂದು ಕಡೆ ಇಂದು ನಾವು ಏಕತೆಯ ಹಬ್ಬವನ್ನು ಆಚರಿಸುತ್ತಿದ್ದೇವೆ ಮತ್ತು ಇನ್ನೊಂದು ಕಡೆ ಇಂದು ದೀಪಾವಳಿ ಹಬ್ಬವಾಗಿದೆ” ಎಂದು ಹೇಳಿದರು. ದೀಪಗಳ ಹಬ್ಬ ದೀಪಾವಳಿ ದೇಶವನ್ನು ಬೆಳಗಿಸುವುದು ಮಾತ್ರವಲ್ಲದೆ ಭಾರತವನ್ನು ವಿಶ್ವದ ಇತರ ದೇಶಗಳೊಂದಿಗೆ ಸಂಪರ್ಕಿಸಲು ಪ್ರಾರಂಭಿಸಿದೆ ಎಂದು ಮೋದಿ ಹೇಳಿದ್ದಾರೆ. ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಅವರು ಬುಧವಾರ ಶ್ವೇತಭವನದಲ್ಲಿ 600ಕ್ಕೂ ಹೆಚ್ಚು ಭಾರತೀಯ ಅಮೆರಿಕನ್ನರೊಂದಿಗೆ ದೀಪಾವಳಿಯನ್ನು ಆಚರಿಸಿದ ಬೆನ್ನಲ್ಲೇ ಮೋದಿ ಈ ಹೇಳಿಕೆ ನೀಡಿದ್ದಾರೆ. ದೇಶದ ಎಲ್ಲಾ ಚುನಾವಣೆಗಳನ್ನು ಒಂದೇ ದಿನದಲ್ಲಿ ಅಥವಾ ನಿರ್ದಿಷ್ಟ ಸಮಯದ ಚೌಕಟ್ಟಿನೊಳಗೆ ಸಿಂಕ್ರೊನೈಸ್ ಮಾಡುವ ಗುರಿಯನ್ನು ಹೊಂದಿರುವ ಕೇಂದ್ರ ಸರ್ಕಾರದ ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪ್ರಸ್ತಾವನೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುವುದು ಎಂದು ಪ್ರಧಾನಿ ಮೋದಿ ಪುನರುಚ್ಚರಿಸಿದ್ದಾರೆ.