ಬೆಳಗಾವಿ ಸುವರ್ಣವಿಧಾನಸೌಧ : ರಾಜಧಾನಿಯಲ್ಲಿ ಏಕೈಕವಾಗಿರುವ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯ ಏಳ್ಗೆಗೆ ಬಗ್ಗೆ ಚಿಂತಕರ ಚಾವಡಿ ಎಂದೇ ಹೆಸರಾದ ವಿಧಾನ ಪರಿಷತ್ತಿನಲ್ಲಿ ಡಿಸೆಂಬರ್ 5ರಂದು ಸುದೀರ್ಘ ಚರ್ಚೆ ನಡೆಯಿತು.
ನಿಯಮ 72ರಡಿ ಗಮನ ಸೆಳೆಯುವ ಸೂಚನೆಯಡಿ ಮಂಡಿಸಿದ ವಿಷಯದ ಬಗ್ಗೆ ಪಕ್ಷಬೇಧ ಮರೆತು ಚರ್ಚೆ ನಡೆಸಿದ ಸದಸ್ಯರು, ‘ನೀವು ಹೃದಯ ವೈಶಾಲ್ಯತೆ ವಿಷಯವನ್ನು ಪರಿಷತ್ತಿನಲ್ಲಿ ಮಂಡಿಸಿ ಸಮಸ್ಯೆಯ ಮೇಲೆ ಬೆಳಕು ಚೆಲ್ಲಿದ್ಧೀರಿ ಎಂದು ಪರಿಷತ್ ಶಾಸಕ ಕೆ.ಎಂ.ತಿಪ್ಪೇಸ್ವಾಮಿ ಅವರಿಗೆ ಅಭಿನಂದಿಸಿದರು.
ಬೆಂಗಳೂರು ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಸರ್ಕಾರಿ ವಸತಿಯುತ ಶಾಲೆ ಇಲ್ಲದ ಪ್ರಯುಕ್ತ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳ ಶಾಲೆಯನ್ನು ಬೆಂಗಳೂರಿನ ಇಂದಿರಾನಗರದಲ್ಲಿ ವಸತಿಯುತ ಶಾಲೆಯನ್ನಾಗಿ ಪ್ರಾರಂಭಿಸಲು 2016ರಲ್ಲಿ ಸರ್ಕಾರ ಆದೇಶ ಹೊರಡಿಸಿದೆ. ಕಳೆದ 9 ಅಧಿವೇಶನಗಳಲ್ಲಿ ಈ ವಿಷಯ ಚರ್ಚೆ ಆಗುತ್ತಿದೆ. ಬೆಂಗಳೂರಿನ ಹೃದಯ ಭಾಗದಲ್ಲಿ ಈ ಶಾಲೆಗೆ ವಿಶೇಷ ಜಾಗ ಸಿಕ್ಕಿದೆ. ದೊಡ್ಡ ಕಟ್ಟಡವಿದೆ. ಆಟದ ಮೈದಾನವಿದೆ. ಮೂಲಭೂತ ಸೌಕರ್ಯವಿದೆ. ವಸತಿ ಶಾಲೆಯನ್ನಾಗಿ ಪ್ರಾರಂಭಿಸಲು ನಿರ್ದಿಷ್ಟ ಸಮಯವನ್ನು ಕೋರಿ ಮುಖ್ಯಮಂತ್ರಿಗಳ ಗಮನ ಸೆಳೆಯುತ್ತೇನೆ ಎಂದು ಸದಸ್ಯ ಕೆ.ಎಂ.ತಿಪ್ಪೇಸ್ವಾಮಿ ಅವರು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಅವರು ಮಾತನಾಡಿ, ಹಂಸಧ್ವನಿ ಕಿವುಡ ಮತ್ತು ಮೂಕ ಮಕ್ಕಳಶಾಲೆಯನು ಸರ್ಕಾರದ ವಶಕ್ಕೆ ಪಡೆದು ಹಾಲಿ ಇರುವ ಸಿಬ್ಬಂದಿಗಳ ಸಮೇತ ಚರ ಸ್ಥಿರ ಆಸ್ತಿಗಳನ್ನೊಳಗೊಂಡ ಸರ್ಕಾರಿ ವಸತಿಯುತ ಶಾಲೆಯನ್ನಾಗಿ ನಿಯಮಾನುಸಾರ ಮಾರ್ಪಡಿಸಲು 136.35 ರೂ ಲಕ್ಷ ಮಂಜೂರಾತಿ ನೀಡಿ 2016ರಲ್ಲಿ ಆದೇಶಿಸಲಾಗಿದೆ. 2019ರಲ್ಲಿ ಸಂಸ್ಥೆಯನ್ನು ಸರ್ಕಾರದ ವಶಕ್ಕೆ ಪಡೆದಿದ್ದೇವೆ. ವಸತಿಯುತ ಶಾಲೆಯನ್ನಾಗಿ ಪರಿವರ್ತಿಸಲು ಅಗತ್ಯವಿರುವ ಹೆಚ್ಚುವರಿ ಹುದ್ದೆಗಳ ಸೃಜನೆ ಹುದ್ದೆಗಳ ಮಂಜೂರಾತಿಗೆ ಆರ್ಥಿಕ ಇಲಾಖೆಯಿಂದ ಅನುಮತಿ ಪಡೆದುಕೊಳ್ಳಲು ಪ್ರಾಮಾಣಿಕ ಪ್ರಯತ್ನ ಮಾಡಿ ವಸತಿಯುತ ಶಾಲೆಯನ್ನಾಗಿ ಪುನಾರಂಭಿಸಲಾಗುವುದು ಎಂದು ತಿಳಿಸಿದರು.
ಸದಸ್ಯ ಬೋಜೆಗೌಡ ಅವರು ಮಾತನಾಡಿ, ಇಡೀ ರಾಜ್ಯದಲ್ಲಿ ಇಂತಹ ಶಾಲೆಗಳಿಲ್ಲ. ಸಮಾಜಮುಖಿ ಮತ್ತುಹೃದಯ ವೈಶಾಲ್ಯತೆಯಿಂದಾಗಿ ಆರಂಭಗೊಂಡ ಇಂತಹ ಶಾಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕಿದೆ. ಆ ಶಾಲೆಯ ಮಕ್ಕಳ ಪಾಲನೆ ಮತ್ತು ಪೋಷಣೆಗೆ ಸಿಬ್ಬಂದಿಯ ಅವಶ್ಯಕತೆಯಿದೆ. ಆರ್ಥಿಕ ಇಲಾಖೆ ಇದಕ್ಕೆ ಸಹಕಾರ ನೀಡಬೇಕು. ಇಂತಹ ಶಾಲೆಗಳು ಜಿಲ್ಲೆಗೊಂದು ಆಗಬೇಕು. ಈ ಹಿಂದೆ ಈ ಶಾಲೆಗೆ ನೀಡಿದ ಆಸ್ತಿಯನ್ನು ರಕ್ಷಿಸಿದಂತೆ ಸೂಕ್ತ ಸೌಲಭ್ಯ ಕಲ್ಪಿಸಿದಲ್ಲಿ ಶ್ರಮವಹಿಸಿ ಕಟ್ಟಿದವರ ಪ್ರಯತ್ನ ಫಲಪ್ರದವಾಗಲಿದೆ ಎಂದು ತಿಳಿಸಿದರು.
ಸದಸ್ಯ ಸತೀಶ ಅವರು ಮಾತನಾಡಿ, ಬಳ್ಳಾರಿ ಜಿಲ್ಲೆಯಲ್ಲಿ ಸಹ ಇಂತಹ ಶಾಲೆಗಳ ಕೊರತೆಯಿದೆ. ವಿಕಲಚೇತನ ಮಕ್ಕಳಿಗೆ ಈಗ ಕೊಡುವ ಸಹಾಯಧಾನ ಯಾತಕ್ಕೂ ಸಾಲದು. ಪ್ರತಿ ಮಾಹೆ 10,000 ನೀಡಬೇಕು ಎಂದ ಅವರು, ವಿಕಲಚೇತನರ ಮಕ್ಕಳ ಶಾಲೆಗೆ ಬಳ್ಳಾರಿ ಜಿಲ್ಲೆಯಲ್ಲಿ ಜಾಗ ನೀಡಿದರೆ ತಾವೇ ಹಣ ನೀಡಿ ಕಟ್ಟಡವನ್ನು ನಿರ್ಮಿಸಿಕೊಡುವುದಾಗಿ ತಿಳಿಸಿದರು.
ಸದಸ್ಯೆ ತೇಜಸ್ವಿನಿ ಅವರು ಮಾತನಾಡಿ, ವಿಕಲಚೇತನ ಮಕ್ಕಳು ತಮ್ಮ ತಂದೆ ತಾಯಿ ಮತ್ತು ಪರಿಚಿತ ಸಮುದಾಯದೊಂದಿಗೆ ಬಾಳಿ ಬದುಕಲು ಅನುಕೂಲವಾಗುವಂತೆ ಇಂತಹ ಶಾಲೆಗಳು ತಾಲೂಕಿಗೊಂದು ಆಗಬೇಕು. ಬೆಂಗಳೂರಿನ ಹಂಸಧ್ವನಿ ಶಾಲೆಯು ವಸತಿಯುತ ಶಾಲೆಯಾಗಿ ಮಾರ್ಪಾಡಾಗಬೇಕು. ಹೃದಯ ವೈಶಾಲ್ಯತೆ ಇರುವವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಇಂತಹ ಶಾಲೆಗಳು ಉಳಿಯಲು ಕಾಲಕಾಲಕ್ಕೆ ಮೇಲ್ವಿಚಾರಣೆ ನಡೆಸಲು ಅನುಕೂಲವಾಗುವಂತೆ ಸರ್ಕಾರವು ಒಂದು ಬೋರ್ಡ್ ಮತ್ತು ಡೈರೇಕ್ಟರೇಟನ್ನು ರಚಿಸಬೇಕು ಎಂದು ಸದಸ್ಯ ರವಿಕುಮಾರ ಅವರು ಸಲಹೆ ಮಾಡಿದರು.
ವಿಕಲಚೇತನ ಮಕ್ಕಳು ವಿಕಲಚೇತನ ಪ್ರಮಾಣ ಪತ್ರ ಪಡೆಯಲು ಈಗಲೂ ಹರಸಾಹಸ ಪಡುವ ಸ್ಥಿತಿಯಿದೆ. ಹೀಗಾಗಿ ಸರ್ಕಾರವೇ ಅಂತಹ ಮಕ್ಕಳನ್ನು ಗುರುತಿಸಿ ಅವರ ಮನೆಗಳಿಗೆ ಹೋಗಿ ಪ್ರಮಾಣ ಪತ್ರ ನೀಡುವ ಕಾರ್ಯವಾಗಬೇಕು ಎಂದು ಸಲಹೆ ಮಾಡಿದರು.
ವಿಧಾನ ಪರಿಷತ್ತಿನ ಎಲ್ಲ ಸದಸ್ಯರು ತಮ್ಮ ವೇತನದಲ್ಲಿ ಶೇ.15ರಷ್ಟು ಹಣವನ್ನು ಇಂತಹ ಮಕ್ಕಳಿಗೆ ಇಂತಹ ಶಾಲೆಗೆ ನೀಡಬೇಕು ಎಂದು ಸಲಹೆ ಮಾಡಿದರು.
ಸದುದ್ದೇಶದಿಂದ ನಿರ್ಮಾಣಗೊಂಡ ಈ ಶಾಲೆಯ ಜಾಗ ಉಳಿಯಬೇಕು ಎನ್ನುವ ಉದ್ದೇಶದಿಂದ 2016ರಲ್ಲಿ ಈ ಶಾಲೆಯನ್ನು ವಸತಿ ಶಾಲೆಯಾಗಿ ಮಾರ್ಪಡಿಸಿದೆವು. ಆಸ್ತಿ ಉಳಿಸಿಕೊಂಡ ಉದ್ದೇಶ ಸಾಕಾರವಾಗಬೇಕು. ಆರ್ಥಿಕ ಇಲಾಖೆಯು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪ್ರಸ್ತಾವನೆಗೆ ಒಪ್ಪಿಗೆ ನೀಡಬೇಕು ಎಂದು ಉಮಾಶ್ರೀ ಅವರು ಮನವಿ ಮಾಡಿದರು.
ಸದನದಲ್ಲಿ ನೀಡಿದ ಸಲಹೆಗಳ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಬಗ್ಗೆ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಲಾಗುವುದು. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಹ ನಡೆಸಿ ಪ್ರಸ್ತಾವನೆಗೆ ಒಪ್ಪಿಗೆ ಪಡೆಯಲಾಗುವುದು ಎಂದು ಸಚಿವೆ ಹೆಬ್ಬಾಳಕರ ಅವರು ಪ್ರತಿಕ್ರಿಯಿಸಿದರು.