ಬೆಳಗಾವಿ: ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಬಡವರ ಏಳಿಗೆ ಸಾಧ್ಯ. ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಭರಪೂರ ನೆರವು ನೀಡುತ್ತಿದೆ. ಬಡವರ ಕಷ್ಟ ಕಾಂಗ್ರೆಸ್ ಗೆ ಮಾತ್ರ ಅರ್ಥವಾಗುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಉತ್ತರ ವಿಧಾನಸಭಾ ಕ್ಷೇತ್ರದ ವಂಟಮೂರಿ ಕಾಲೋನಿಯ ಜನತಾ ಬ್ಲಾಕ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಪರ ಪ್ರಚಾರ ನಡೆಸಿದ ಸಚಿವರು, ಕಾಂಗ್ರೆಸ್ ಪಕ್ಷ ಬಡವರ ಪಕ್ಷ, ಬದ್ದತೆಗೆ ಹೆಸರಾಗಿರುವ ಪಕ್ಷ ಎಂದು ಹೇಳಿದರು.
ಕಳೆದ ವರ್ಷ ವಿಧಾನ ಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಘೋಷಿಸಿದ್ದ ಪಂಚ ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಕೇವಲ 100 ದಿನಗಳಲ್ಲಿ ಜಾರಿಗೆ ತಂದಿತು. ಹಿಂದಿನ ಶಾಸಕ ಫಿರೋಜ್ ಸೇಠ್ ಶ್ರಮದ ಫಲವಾಗಿ ಇಂದು ವಂಟಮೂರಿ ಸಕಲ ರೀತಿಯಲ್ಲೂ ಅಭಿವೃದ್ಧಿ ಹೊಂದಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ನೆರವು ನೀಡಲಾಗುವುದು. ಮೃಣಾಲ್ ಹೆಬ್ಬಾಳ್ಕರ್ ಎಂಪಿ ಆಗಿ ಆಯ್ಕೆಯಾದರೆ, ಶಾಸಕ ರಾಜು ಸೇಠ್ ಜೊತೆಗೂಡಿ ಈ ಏರಿಯಾ ಗಳನ್ನು ಮತ್ತಷ್ಟು ಅಭಿವೃದ್ಧಿಪಡಿಸುವರು ಎಂದು ಸಚಿವರು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ರಾಜು ಸೇಠ್, ಬೆಳಗಾವಿ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಬೇಕು. ಕಳೆದ ಐದು ಬಾರಿ ನಮಗೆ ಸೋಲುಂಟಾಗಿದ್ದು,ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಗೆಲುವು ಶತಸಿದ್ಧ ಎಂದರು. ಬಳಿಕ ಮಾತನಾಡಿದ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್, ಈ ಬಾರಿ ಕಾಂಗ್ರೆಸ್ ಗೆಲುವಿಗೆ ಉತ್ತಮ ಅವಕಾಶವಿದ್ದು, ನಿಮ್ಮಗಳ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಈ ವೇಳೆ ಮುಖಂಡರಾದ ಆರ್.ವಿ.ಪಾಟೀಲ್, ಜ್ಯೋತಿ ಬಾವಿಕಟ್ಟಿ, ಪುಷ್ಪ ಪರ್ವತರಾವ್, ಬೈಲ್ ಪತ್ತರ್ ಅಧ್ಯಕ್ಷರಾದ ಅಪ್ಪುಶಾ, ನಾಗೇಶ್, ಕಲ್ಲಪ್ಪ, ಶಾಂತಾ ಬಾಯಿ ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.