ಬೆಂಗಳೂರು: ಇದುವರೆಗೂ ಅತ್ಯಂತ ತಾಳ್ಮೆಯಿಂದ ವರ್ತಿಸಿದ್ದ ಭಾರತ ಕೊನೆಗೂ ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಬಹುದೊಡ್ಡ ಪ್ರಮಾಣದ ಆಕ್ರಮಣ ನಡೆಸಿದೆ. ಮಂಗಳವಾರ ಮಧ್ಯರಾತ್ರಿ ಪಾಕಿಸ್ತಾನದ ಉಗ್ರಗಾಮಿಗಳ ಅಡಗುತಾಣದ ಮೇಲೆ ಇನ್ನಿಲ್ಲದಂತೆ ದಾಳಿ ನಡೆಸಿರುವ ಭಾರತ ಕೊನೆಗೂ ತಕ್ಕ ತಿರುಗೇಟು ನೀಡಿದೆ. ಭಾರತದ ಈ ಅನಿರೀಕ್ಷಿತ ದಾಳಿಗೆ ಪಾಕಿಸ್ತಾನ ಬೆಚ್ಚಿಬಿದ್ದಿದ್ದು ಇದೀಗ ಎರಡು ದೇಶಗಳ ನಡುವೆ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದೆ.

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನದ ಮೇಲೆ ತೀವ್ರ ಪ್ರತಿಕಾರದ ಕ್ರಮ ಕೈಗೊಂಡಿತ್ತು. ಇದೀಗ ಭಾರತೀಯ ಸೇನೆ ‘ಆಪರೇಷನ್ ಸಿಂಧೂರ’ ಎಂಬ ಸೇನಾ ಕಾರ್ಯಾಚರಣೆಯನ್ನು ಪಾಕಿಸ್ತಾನದ ವಿರುದ್ಧ ಅಧಿಕೃತವಾಗಿ ಆರಂಭಿಸಿದೆ.

ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ನಡೆದ ಭಯೋತ್ಪಾದನಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆಯು ಮಂಗಳವಾರ ತಡರಾತ್ರಿ ಪಾಕ್‌ ಆಕ್ರಮಿತ ಕಾಶ್ಮೀರ ಮತ್ತು ಪಾಕಿಸ್ತಾನದಲ್ಲಿರುವ ಉಗ್ರರ ನೆಲೆಗಳನ್ನು ಗುರಿಯಾಗಿಸಿಕೊಂಡು ನಿರ್ದಿಷ್ಟ ದಾಳಿ ನಡೆಸಿದೆ. ಒಂಬತ್ತು ಸ್ಥಳಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಭಾರತೀಯ ಸೇನೆ ಹೇಳಿದೆ. ಈ ಕಾರ್ಯಾಚರಣೆಗೆ ʼಆಪರೇಷನ್‌ ಸಿಂಧೂರ” ಎಂದು ಹೆಸರಿಡಲಾಗಿದೆ.

ಭಾರತೀಯ ಸೇನೆಯ ಎಡಿಜಿಪಿ ಪಿಐ ಅವರ ಎಕ್ಸ್‌ ಅಕೌಂಟ್‌ನಲ್ಲಿ ಪಹಲ್ಗಾಮ್ ದಾಳಿಗೆ ನ್ಯಾಯ ಕೊಡಲಾಗುತ್ತದೆ ಎಂದು ‘ಆಪರೇಷನ್ ಸಿಂಧೂರ’ ಜೈ ಹಿಂದ್ ಎಂಬ ಪೋಸ್ಟರ್ ಹಂಚಿಕೊಳ್ಳಲಾಗಿದೆ.

ವರದಿಗಳ ಪ್ರಕಾರ ಭಾರತೀಯ ಸೇನೆಯ ವಿವಿಧ ಘಟಕಗಳು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಮಾಡುತ್ತಿವೆ. ವಾಯು ದಾಳಿಗಳು ಆರಂಭವಾಗಿವೆ. ಭಾರತದ ವಿವಿಧ ಸ್ಥಳಗಳ ಮೇಲೆ ಆಂತರಿಕ ಭದ್ರತಾ ಪಡೆಗಳಿಗೆ ಹೈ ಅಲರ್ಟ್ ಘೋಷಿಸಲಾಗಿದೆ.

ಕೊಟ್ಪಿ, ಮುಜಾಫರ್‌ಬಾದ್, ಬಹವಲ್ಪುರ್‌ ಬಳಿ ಏರ್‌ಸ್ಟ್ರೈಕ್ ನಡೆದಿದೆ. ಭಾರತ ಪಾಕ್ ಮೇಲೆ ದಾಳಿ ಆರಂಭಿಸಿದೆ ಎಂದು ಪಾಕಿಸ್ತಾನದ ಟಿವಿ ವಾಹಿನಿಗಳು ವರದಿ ಮಾಡಿವೆ. ಭಾರತಕ್ಕೆ ನಾವು ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕ್ ಪ್ರಧಾನಿ ಹೇಳಿರುವುದಾಗಿ ವರದಿಯಾಗಿದೆ. ಲಾಹೋರ್, ಸಿಯಾಲ್‌ಕೋಟ್ ವಿಮಾನ ನಿಲ್ದಾಣಗಳು ಬಂದ್ ಆಗಿವೆ.

ಲಷ್ಕರ್ ಎ ತಯಬಾ ಮತ್ತು ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಭಾರತದಿಂದ ದಾಳಿ ನಡೆಸಲಾಗಿದೆ. ದಾಳಿಗಳಲ್ಲಿ ಮೂವತ್ತಕ್ಕೂ ಹೆಚ್ಚು ಉಗ್ರರು ಸತ್ತಿದ್ದಾರೆ ಎಂಬುದಾಗಿ ಕೆಲ ವರದಿಗಳು ಹೇಳಿವೆ.

ಏತನ್ಮಧ್ಯೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಟ್ವೀಟ್ ಮಾಡಿ, ಪಹಲ್ಗಾಮ್‌ ದಾಳಿಗೆ ನ್ಯಾಯ ಸಿಗುತ್ತದೆ, ಜೈ ಹಿಂದ್ ಭಾರತ್ ಎಂದಿದ್ದಾರೆ.

ಸದ್ಯ ಪಾಕಿಸ್ತಾನದಲ್ಲಿನ 9ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಉಗ್ರರ ಶಿಬಿರಗಳನ್ನು ಧ್ವಂಸ ಮಾಡಲಾಗಿರುವ ವಿಡಿಯೊಗಳ ಹರಿದಾಡುತ್ತಿವೆ. ಈ ವಿಷಯದಲ್ಲಿ ಸೇನೆಗಳಿಗೆ ಭಾರತ್ ಸರ್ಕಾರ ಪರಮಾಧಿಕಾರ ನೀಡಿದೆ.

mock drill ಗೆ ಸೂಚನೆ ಬಂದ ಬೆನ್ನಲ್ಲೇ ಪಾಕಿಸ್ತಾನದ ವಿರುದ್ಧ ಭಾರತ ಸೇನೆಗಳು ಅಧಿಕೃತವಾಗಿ ಕಾರ್ಯಾಚರಣೆಗೆ ಇಳಿದಿವೆ. ಅತ್ತ ಪಾಕಿಸ್ತಾನದ ಗಡಿಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದ್ದು, ಸೇನಾ ಚಟುವಟಿಕೆಗಳು ಬಿರುಸು ಪಡೆದುಕೊಂಡಿವೆ.

ಭಾರತ ಪಾಕಿಸ್ತಾನಗಳ ನಡುವೆ ಸೇನಾ ಸಮರದ ನಡೆಯಲಿದೆ ಎಂದು ಚರ್ಚೆಯಾಗಿತ್ತು. ಅದಕ್ಕೆ ಪೂರಕ ಎಂಬಂತೆ ಎರಡು ರಾಷ್ಟ್ರಗಳು ಸಮರಾಭ್ಯಾಸ ಸೇರಿದಂತೆ ಸೇನೆಗೆ ಸಂಬಂಧಿಸಿದ ಚಟುವಟಿಕೆಗಳನ್ನು ಆರಂಭಿಸಿದ್ದವು. ಶತ್ರು ರಾಷ್ಟ್ರದಿಂದ ದಾಳಿ ನಡೆದ ಪಕ್ಷದಲ್ಲಿ ನಾಗರಿಕರಿಗೆ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬೇಕಾದ ಸಿದ್ಧತೆಯನ್ನು ಕೈಗೊಳ್ಳುವುದಕ್ಕಾಗಿ ಬುಧವಾರ ನಾಗರಿಕ ಸ್ವರಕ್ಷಣೆ ತಾಲೀಮು ನಡೆಸಲು ಕೇಂದ್ರ ಗೃಹಸಚಿವಾಲಯ ಎಲ್ಲ ರಾಜ್ಯಗಳಿಗೆ ಸೂಚಿಸಿತ್ತು. ರಾಜ್ಯಗಳು ಸಿದ್ಧತೆಯನ್ನೂ ನಡೆಸಿದ್ದವು. ಇದರ ನಡುವೆಯೇ ಭಾರತೀಯ ಸೇನೆಯು ಮಂಗಳವಾರ ರಾತ್ರಿ ಉಗ್ರರ ಶಿಬಿರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದೆ.

ಭಾರತದ ವಿರುದ್ಧ ಭಯೋತ್ಪಾದನಾ ದಾಳಿಯನ್ನು ಯೋಜಿಸಿ, ಕಾರ್ಯರೂಪಕ್ಕೆ ತಂದ ಭಯೋತ್ಪಾದಕರ ಶಿಬಿರಗಳನ್ನು ನಾಶ ಮಾಡುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸಲಾಗಿದೆ. ದಾಳಿಯು ನಿರ್ದಿಷ್ಟ ಗುರಿ ಕೇಂದ್ರಿತವಾಗಿತ್ತು. ಪಾಕಿಸ್ತಾನದ ಸೇನೆಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿಲ್ಲ. ಗುರಿಗಳನ್ನು ಆಯ್ಕೆ ಮಾಡುವಾಗ ಮತ್ತು ಕಾರ್ಯಾಚರಣೆಯನ್ನು ಕಾರ್ಯರೂಪಕ್ಕೆ ತಂದ ವಿಧಾನದಲ್ಲಿ ಭಾರತ ಸಂಯಮವನ್ನು ಪ್ರದರ್ಶಿಸಿದೆ ಎಂದು ಪಿಐಬಿ ಬಿಡುಗಡೆ ಮಾಡಿರುವ ಹೇಳಿಕೆ ತಿಳಿಸಿದೆ.

ಈ ಮಧ್ಯೆ, ನಿರ್ದಿಷ್ಟ ದಾಳಿಯು ಸಂಘರ್ಷ ಉಲ್ಬಣಗೊಳ್ಳದ ರೀತಿಯದ್ದು ಎಂದು ಸೇನೆ ಹೇಳಿಕೊಂಡರೂ, ಈ ದಾಳಿಗೆ ಪ್ರತಿಯಾಗಿ ಪಾಕಿಸ್ತಾನ ದಾಳಿ ನಡೆಸುವ ಸಾಧ್ಯತೆ ಇರುವುದರಿಂದ ಗಡಿ ಭಾಗದಲ್ಲಿ ಭಾರತೀಯ ಸೇನೆ ಯಾವುದೇ ಪರಿಸ್ಥಿತಿ ಎದುರಿಸಲು ಸಜ್ಜಾಗಿದೆ ಎಂದು ಹೇಳಲಾಗಿದೆ. ಭಾರತವು ತನ್ನ ವಾಯು ರಕ್ಷಣಾ ವ್ಯವಸ್ಥೆಯನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ ಎಂದು ವರದಿಯಾಗಿದೆ.