ತುರುವೇಕೆರೆ: ಪಟ್ಟಣದ ಸರಸ್ವತಿಪುರಂನ ಮಹಿಳೆಯೊಬ್ಬರ ಇ-ಕಾಮರ್ಸ್ ವೇದಿಕೆಯಾದ ಅಮೆಜಾನ್‌ನಲ್ಲಿ ₹32 ಸಾವಿರ ಮೌಲ್ಯದ ‘ವಿವೊ ವಿ– 50’ ಮೊಬೈಲ್ ಬುಕ್ ಮಾಡಿದ್ದರು. ಆದರೆ ಅವರ ಮನೆಗ ತಲುಪಿದ್ದು ಸೋಪುಗಳನ್ನು ತುಂಬಿದ್ದ ಬಾಕ್ಸ್!

ಮಾರ್ಚ್ 19ರಂದು ಮಹಿಳೆ ಮೊಬೈಲ್ ಬುಕ್ ಮಾಡಿದ್ದರು. 25ರಂದು ಡೆಲಿವರಿ ಬಾಯ್ ಪಾರ್ಸೆಲ್ ತಂದು ಕೊಟ್ಟಿದ್ದಾರೆ. ಆಗ ಮಹಿಳೆ ಡೆಲಿವರಿ ಬಾಯ್ ಅವರಿಂದಲೇ ಪಾರ್ಸೆಲ್ ಓಪನ್ ಮಾಡಿಸಿದ್ದಾರೆ. ಆ ವೇಳೆ ವಿಡಿಯೊವನ್ನೂ ಚಿತ್ರೀಕರಿಸಿಕೊಂಡಿದ್ದಾರೆ. ವಿವೊ ವಿ- 50 ಎಂಬ ಬಾಕ್ಸ್ ತೆಳುವಾದ ಪ್ಲಾಸ್ಟಿಕ್ ಹಾಳೆಯೊಂದಿಗೆ ಸೀಲ್ ಆಗಿತ್ತು. ಬಿಚ್ಚುತ್ತಾ ಹೋದಂತೆ ಗ್ರಾಹಕರು ಮತ್ತು ಡೆಲಿವರಿ ಬಾಯ್‌ಗೆ ಶಾಕ್ ಕಾದಿತ್ತು. ಆ ಮೊಬೈಲ್ ಬಾಕ್ಸ್‌ನಲ್ಲಿ ಆರು ಸೋಪಿನ ಪ್ಯಾಕೆಟ್‌ಗಳನ್ನು ಕಳುಹಿಸಲಾಗಿತ್ತು.

ವಿಡಿಯೊ ಮತ್ತು ಫೋಟೊ ಸಹಿತ ಗ್ರಾಹಕರು ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಲು ತೆರಳಿದ್ದಾರೆ. ಆಗ ಅಮೆಜಾನ್ ವ್ಯವಸ್ಥಾಪಕರು, ಈ ಪ್ರಮಾದವನ್ನು ದೊಡ್ಡದು ಮಾಡುವುದು ಬೇಡ. ಕೂಡಲೇ ಹೊಸ ಮೊಬೈಲ್ ಕಳಿಸುವ ಭರವಸೆಯನ್ನು ಗ್ರಾಹಕರಿಗೆ ನೀಡಿದ್ದಾರೆ ಎಂದು ತಿಳಿದುಬಂದಿದೆ.