ಬೆಂಗಳೂರು: ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಲು ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ಸೂಚಿಸಿದ್ದಾರೆ.

ಈ ಬಗ್ಗೆ ಆದೇಶ ಹೊರಡಿಸಿರುವ ಶಾಲಾ ಶಿಕ್ಷಣ ಇಲಾಖೆಯ ಆಯುಕ್ತೆ ಬಿ.ಬಿ.ಕಾವೇರಿ ಅವರು, ಸರ್ಕಾರದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಹಳೆ ವಿದ್ಯಾರ್ಥಿಗಳ ಸಂಘ ಸ್ಥಾಪಿಸಲು ಹಾಗೂ ಅದಕ್ಕೆ ಸಂಬಂಧಿಸಿದಂತೆ ವಾಟ್ಸ್‌ಆ್ಯಪ್‌ ಗ್ರೂಪ್ ಮಾಡಿ ಹಳೆಯ ವಿದ್ಯಾರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರನ್ನಾಗಿ ಮಾಡಿಕೊಳ್ಳಲು ತಿಳಿಸಲಾಗಿತ್ತು. ಈಗಾಗಲೇ 25,007 ಶಾಲೆಗಳು ವಿದ್ಯಾರ್ಥಿಗಳ ಸಂಘ ಸ್ಥಾಪಿಸಿಕೊಂಡಿದ್ದು, ಅವುಗಳಲ್ಲಿ 15,170 ಶಾಲೆಗಳು ವಾಟ್ಸ್‌ಆ್ಯಪ್‌ ಗ್ರೂಪನ್ನು ರಚಿಸಿಕೊಂಡಿವೆ ಎಂದು ಹೇಳಿದ್ದಾರೆ.

ಈಗಾಗಲೇ ಹಳೇ ವಿದ್ಯಾರ್ಥಿಗಳ ಸಂಘ ಸ್ಥಾಪಿಸಿರುವ ಎಲ್ಲಾ ಶಾಲೆಗಳು ಕೂಡಲೇ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಂಡು ಸದಸ್ಯರ ಸಂಖ್ಯೆ ಹೆಚ್ಚಿಸುವುದು ಹಾಗೂ ಇಲ್ಲಿಯವರೆಗೆ ಸಂಘ ರಚಿಸಿಕೊಳ್ಳದೇ ಇರುವ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಒಂದು ವಾರದೊಳಗೆ ಕಡ್ಡಾಯವಾಗಿ ಹಳೆ ವಿದ್ಯಾರ್ಥಿ ಸಂಘ ಸ್ಥಾಪಿಸಿ, ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಂಡು, ಕಚೇರಿಯಿಂದ ನೀಡಿರುವ ಗೂಗಲ್ ಫಾರ್ಮ್‌ನಲ್ಲಿ ಮಾಹಿತಿ ಭರ್ತಿ ಮಾಡಬೇಕು ಎಂದು ಸೂಚಿಸಿದ್ದಾರೆ.

ಎಲ್ಲಾ ಶಾಲೆಗಳು ಸಂಘ ಸ್ಥಾಪಿಸುವಂತೆ ಹಾಗೂ ವಾಟ್ಸ್‌ಆ್ಯಪ್‌ ಗ್ರೂಪ್ ರಚಿಸಿಕೊಳ್ಳುವಂತೆ ಶೈಕ್ಷಣಿಕ ಜಿಲ್ಲೆಗಳ ಉಪನಿರ್ದೇಶಕರು (ಆಡಳಿತ) ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.