ದಾವಣಗೆರೆ :ದಾವಣಗೆರೆ ನಗರದ ಹರ್ಷ ಟೂರಿಸ್ಟ್ ಸಂಸ್ಥೆಯವರು ಮಾಡಿದ ಸೇವಾ ನ್ಯೂನ್ಯತೆಗೆ ದಾವಣಗೆರೆ ಜಿಲ್ಲಾ ಗ್ರಾಹಕರ ಅಯೋಗ ಒಟ್ಟು ರೂ.24,500/- ಗಳ ಪರಿಹಾರವನ್ನು ದೂರುದಾರರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷ ಮಹಾಂತೇಶ ಈರಪ್ಪ ಶಿಗ್ಲಿ ಹಾಗೂ ಸದಸ್ಯರಾದ ತ್ಯಾಗರಾಜನ್ ಮತ್ತು ಮಹಿಳಾ ಸದಸ್ಯರಾದ ಬಿ.ಯು. ಗೀತಾ ಇವರು ಆದೇಶಿಸಿದ್ದಾರೆ.
ದಾವಣಗೆರೆ ನಿವಾಸಿ ಸತೀಶ್ ಕುಮಾರ್ ಇವರು ಹರ್ಷ ಟೂರಿಸ್ಟ್ ಸಂಸ್ಥೆಯ ಮೂಲಕ ಸೆಪ್ಟೆಂಬರ್-2023 ರಲ್ಲಿ ಪ್ರವಾಸ ಕೈಗೊಂಡಿದ್ದು ಮಹಾರಾಷ್ಟ್ರದ ಶಿರಡಿ ಸಾಯಿಬಾಬಾ ದರ್ಶನದ ಜೊತೆಗೆ ತ್ರಯಂಬಕೇಶ್ವರ ಮತ್ತು ಶನಿ ಶಿಂಗಾಪುರಕ್ಕೆ, ಸೆ.6 ರಿಂದ 10 ರವರೆಗೆ ಈ ಅವಧಿಯಲ್ಲಿ ಪ್ರವಾಸ ಕೈಗೊಂಡಿದ್ದು, ಹರ್ಷ ಟೂರಿಸ್ಟ್ ಸಂಸ್ಥೆಯವರು, ಈ ಪ್ರವಾಸವನ್ನು ಏರ್ಪಡಿಸಿದ್ದರು. ತಲಾ ರೂ.10,000 ಮತ್ತು ಜಿ.ಎಸ್.ಟಿ.ಯೊಂದಿಗೆ ಸಖಾಸಿನ ಮತ್ತು ಆರಾಮದಾಯಕ ಪ್ರವಾಸ ನೀಡುವುದಾಗಿ ವಿವರಿಸಿದ್ದರ ಹಿನ್ನಲೆಯಲ್ಲಿ ಎಸ್.ಎನ್.ಸತೀಶ ಕುಮಾರ್ ಇವರು ಈ ಸಂಸ್ಥೆಯೊಂದಿಗೆ ಪ್ರವಾಸವನ್ನು ಕೈಗೊಂಡಿದ್ದರು.
ಆದರೆ, ಪ್ರವಾಸದಲ್ಲಿ ಟೂರಿಸ್ಟ್ ಸಂಸ್ಥೆಯವರು ನೀಡಿದ ಭರವಸೆಯಂತೆ ಯಾವುದೇ ಆರಾಮದಾಯಕ ಪ್ರವಾಸದ ಸೇವೆಯನ್ನು ನೀಡದೇ ಸೇವಾನ್ಯೂನ್ಯತೆಯನ್ನು ಎಸಗಿದ್ದಾರೆಂದು ಸತೀಶ್ ಕುಮಾರ್ ಇವರು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿದರು. ಹರ್ಷ ಟೂರಿಸ್ಟ್ ಸಂಸ್ಥೆಯವರು ಯಾವುದೇ ನಿಗಧಿತ ವೇಳೆಗೆ ಪ್ರವಾಸವನ್ನು ನೀಡದೇ ಅತ್ಯಂತ ಕಳಪೆ ಮಟ್ಟದ ಸೇವೆಯನ್ನು ನೀಡಿದ್ದು, ಪ್ರವಾಸದ ಅವಧಿಯಲ್ಲಿ ದೂರುದಾರರಿಗೆ ಅತ್ಯಂತ ಹೀನಾಯವಾದ ಸೇವೆಯನ್ನು ನೀಡಿದ್ದಲ್ಲದೇ ಮಾನಸಿಕವಾಗಿ ಮತ್ತು ದೈಹಿಕವಾಗಿ ತೊಂದರೆ ಉಂಟು ಮಾಡಿದ್ದರಿಂದ, ದೂರುದಾರರು ಸದರಿ ಸಂಸ್ಥೆಗೆ ಕೊಡಮಾಡಿದ ಪ್ರಯಾಣದ ಮೊತ್ತವನ್ನು ಮರಳಿ ನೀಡುವಂತೆ ಆದೇಶಿಸಬೇಕೆಂದು ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದರು.
ಈ ದೂರನ್ನು ಪರಿಗಣಿಸಿ, ಎದುರುದಾರರ ಸಂಸ್ಥೆಗೆ ನೋಟಿಸ್ ನೀಡಲಾಗಿ ಸಂಸ್ಥೆಯವರು ಗ್ರಾಹಕರ ಆಯೋಗದ ಮುಂದೆ ತಮ್ಮ ಯಾವುದೇ ಪ್ರತಿರೋಧವನ್ನು ನಿವೇದಿಸಿಕೊಳ್ಳದೇ ಇರುವುದರಿಂದ ವಸ್ತುಸ್ಥಿತಿಗಳ ಮತ್ತು ದೂರುದಾರರ ಅಹವಾಲನ್ನು ಮತ್ತು ಪ್ರಕರಣದ ವಿಷಯಗಳನ್ನು ಪರಿಶೀಲಿಸಿ ಜಿಲ್ಲಾ ಗ್ರಾಹಕರ ಆಯೋಗ ಎದುರುದಾರ ಸಂಸ್ಥೆಯವರು ದೂರುದಾರರಿಂದ ಪಡೆದುಕೊಂಡ ರೂ.18900 ಗಳಲ್ಲಿ ಅರ್ಧ ಮೊತ್ತವನ್ನು ಅಂದರೆ ರೂ.9500 ಮರು ಸಂದಾಯ ಮಾಡಬೇಕೆಂದು ಆದೇಶಿಸಿದೆ. ಮತ್ತು ದೂರುದಾರರಿಗೆ ನೀಡಿದ ಸೇವಾನ್ಯೂನ್ಯತೆಗೆ ಪರಿಹಾರವಾಗಿ ರೂ.10000 ನಷ್ಟ ಪರಿಹಾರ ಮತ್ತು ಪ್ರಕರಣದ ಖರ್ಚಿನ ಮರು ಸಂದಾಯಕ್ಕೆ ರೂ.5,000 ಗಳನ್ನು ಆದೇಶವಾದ 30 ದಿನಗಳ ಒಳಗಾಗಿ ನೀಡಬೇಕು. ಇದನ್ನು ತಪ್ಪಿದಲ್ಲಿ ಶೇ.6ರ ಬಡ್ಡಿ ಸೇರಿಸಿ ಮರು ಸಂದಾಯ ಮಾಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.