ಬೆಂಗಳೂರು : ನಮ್ಮ ಸರ್ಕಾರ ಇಡೀ ದೇಶಕ್ಕೆ ಕರ್ನಾಟಕ ಮಾದರಿಯನ್ನು ಪರಿಚಯಿಸಿದೆ. ಬಸವಣ್ಮನವರ ನುಡಿದಂತೆ ನಡೆಯಬೇಕು ಎನ್ನುವ ತತ್ವದಂತೆ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದಿದೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣದ ನಂತರ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಡಿಸಿಎಂ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು.

“ನಾವು ಆರಂಭಿಸಿದ ಗ್ಯಾರಂಟಿಗಳನ್ನು ನೋಡಿ ಪ್ರಧಾನಿಗಳು ಈಗ ಅದನ್ನೇ ಪ್ರಚಾರಕ್ಕೆ ಬಳಸುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಯಾವುದೇ ಸರ್ಕಾರಗಳು ಮಾಡಲಾಗದನ್ನು ನಾವು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿ ಮಾಡಿದ್ದೇವೆ. ಇದನ್ನು ವಿರೋಧ ಪಕ್ಷದವರಿಗೆ ಸಹಿಸಲಾಗುತ್ತಿಲ್ಲ.”

*ಕೇಸರಿ ಯಾರ ಮನೆಯ ಆಸ್ತಿಯಲ್ಲ:*

ಬಿಜೆಪಿ ನಾಯಕರು ಕೇಸರಿ ಶಾಲು ಧರಿಸಿ ಸದನಕ್ಕೆ ಬಂದ ಬಗ್ಗೆ ಕೇಳಿದಾಗ, “ಅವರು ಏನಾದರೂ ಹಾಕಿಕೊಂಡು ಬರಲಿ. ಕೇಸರಿ ಅವರ ಮನೆ ಆಸ್ತಿಯೇ? ರಾಜಕಾರಣದಲ್ಲಿ ಧರ್ಮ ಇರಬೇಕು, ಧರ್ಮದಲ್ಲಿ ರಾಜಕಾರಣ ಇರಬಾರದು. ಅವರು ಧರ್ಮದಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಮಾಡಿಕೊಳ್ಳಲಿ. ಅವರು ಕೇಸರಿಯಾದರೂ ಧರಿಸಲಿ, ಕಪ್ಪಾದರೂ ಧರಿಸಲಿ. ನಮ್ಮ ರಾಜ್ಯದ ಹಿತಕ್ಕೆ ಬೇಕಾದ ಕೆಲಸ ನಾವು ಮಾಡುತ್ತೇವೆ” ಎಂದರು.

ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ಸಂಕಲ್ಪ ಮಾಡಿದ್ದೇವೆ: ಡಿಸಿಎಂ ಡಿ.ಕೆ. ಶಿವಕುಮಾರ್

ಬೆಂಗಳೂರು :
“ರಾಮನಗರವನ್ನು ಮಾದರಿ ಜಿಲ್ಲೆಯಾಗಿ ಮಾಡಲು ನಾವು ಸಂಕಲ್ಪ ಮಾಡಿದ್ದೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.

ರಾಮನಗರ ಜಿಲ್ಲೆಗೆ ನೂತನ ಅಶ್ವಮೇಧ ಬಸ್ ಗಳ ಸಂಚಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು:

“ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯಾಗಿ ಮಾಡಲು ಡಿ.ಕೆ. ಸುರೇಶ್ ಅವರು ಸಂಕಲ್ಪ ಮಾಡಿದ್ದಾರೆ. ಅವರ ಯೋಜನೆಗಳನ್ನು ಜಾರಿಗೊಳಿಸಲು ನಾನು, ಇಕ್ಬಾಲ್ ಹುಸೇನ್, ಬಾಲಕೃಷ್ಣ, ರವಿ ಅವರು ಸಂಪೂರ್ಣ ಸಹಕಾರ ನೀಡುತ್ತೇವೆ. ಬಿಡದಿ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರವಾಗಿ ಪರಿವರ್ತಿಸುತ್ತಿದ್ದೇವೆ. ಬಿಡದಿ ಹಾಗೂ ಆನೇಕಲ್ ವರೆಗೂ ಮೆಟ್ರೋ ವಿಸ್ತರಿಸಲು ಡಿಪಿಆರ್ ಸಿದ್ಧಪಡಿಸಲು ಸೂಚಿಸಿದ್ದೇನೆ. ರಾಮನಗರ ಜಿಲ್ಲೆಗೆ ಯಾವ ಯಾವ ಇಲಾಖೆಗಳಲ್ಲಿ ಏನೆಲ್ಲಾ ಯೋಜನೆಗಳನ್ನು ಸಿದ್ಧಪಡಿಸುತ್ತಿದ್ದೇವೆ ಎಂದು ಮುಂದಿನ ದಿನಗಳಲ್ಲಿ ಪ್ರತ್ಯೇಕವಾಗಿ ತಿಳಿಸುತ್ತೇನೆ.

ರಾಮನಗರ ಜಿಲ್ಲೆಯವರು ಬೆಂಗಳೂರಿನವರೇ ಆಗಿದ್ದಾರೆ. ಕೆಂಗಲ್ ಹನುಮಂತಯ್ಯ, ಶ್ರೀ ಬಾಲಗಂಗಾಧರನಾಥ ಸ್ವಾಮಿಜಿಗಳು, ಶ್ರೀ ಶಿವಕುಮಾರ ಸ್ವಾಮೀಜಿಗಳು ಇದೇ ಜಿಲ್ಲೆಯವರು. ನಾವೆಲ್ಲರೂ ಬೆಂಗಳೂರಿನ ಭಾಗ. ಈ ವಿಚಾರವಾಗಿ ಚುನಾವಣೆ ನಂತರ ಚರ್ಚೆ ಮಾಡಿ ರೂಪುರೇಷೆ ನೀಡುತ್ತೇನೆ.

ತಮಿಳುನಾಡಿನಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಮಾತ್ರ ಉಚಿತ ಬಸ್ ವ್ಯವಸ್ಥೆ ಕಲ್ಪಿಸಿದ್ದರು. ನಮ್ಮ ಸರ್ಕಾರ ಶಕ್ತಿ ಯೋಜನೆ ಮೂಲಕ ಇಡೀ ರಾಜ್ಯದಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಯೋಜನೆಯಿಂದ ಸಾರಿಗೆ ಸಂಸ್ಥೆಗಳು ಬರೀದಾಗುತ್ತವೆ ಎಂದು ಹೇಳುತ್ತಿದ್ದರು. ಈಗ ಪ್ರತಿ ತಿಂಗಳು ಮಹಿಳೆಯರ ಪ್ರಯಾಣದ ಹಣವನ್ನು ಸರ್ಕಾರ ಕಟ್ಟುತ್ತಿದೆ. ಬೆಳಗಾವಿ, ಹುಬ್ಬಳ್ಳಿ ಹಾಗೂ ಇತರೆ ಭಾಗದ ಜಿಲ್ಲೆಗಳಿಂದ ಬೆಂಗಳೂರಿಗೆ ಒಂದು ಬಾರಿ ಓಡಾಡಲು 1500-2000 ರೂಪಾಯಿ ಬೇಕಾಗುತ್ತದೆ. ಈ ಯೋಜನೆಯಿಂದ ಅವರಿಗೆ ಅಷ್ಟೂ ದುಡ್ಡು ಉಳಿಯುತ್ತದೆ. ಕೆಲಸಕ್ಕೆ ಓಡಾಡುವವರಿಗೂ ಈ ಯೋಜನೆ ಬಹಳ ಅನುಕೂಲವಾಗಿದೆ.

ರಾಜ್ಯದಲ್ಲಿ ಬಸ್ ಗಳ ಕೊರತೆ ನೀಗಿಸಲು 1 ಸಾವಿರ ನೂತನ ಬಸ್ ಗಳ ನಿಯೋಜನೆ ಮಾಡಲಾಗುತ್ತಿದೆ. ನಮ್ಮ ಶಕ್ತಿ ಯೋಜನೆಯಿಂದ ದೇವಾಲಯಗಳಲ್ಲಿ ಹುಂಡಿಗಳು ತುಂಬುತ್ತಿವೆ. ಪ್ರವಾಸಿ ತಾಣಗಳಲ್ಲಿ ಹೋಟೆಲ್, ವ್ಯಾಪಾರೋದ್ಯಮಗಳಲ್ಲಿ ವ್ಯಾಪಾರ ಹೆಚ್ಚಾಗುತ್ತಿವೆ. ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರೂ ಈ ಯೋಜನೆಯನ್ನು ಶ್ಲಾಘಿಸಿದ್ದರು. ಮಹಿಳೆಯರು ನನ್ನ ಹಾಗೂ ಸಿದ್ದರಾಮಯ್ಯ ಅವರ ಹೆಸರಿನಲ್ಲೂ ಪೂಜೆ ಮಾಡಿಸುತ್ತಿದ್ದಾರೆ ಎಂದು ಹೇಳಿದ್ದರು.

ನಾವು ರಾಜ್ಯದ ಜನರಿಗೆ ಕೊಟ್ಟ ಮಾತಿನಂತೆ ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ, ಶಕ್ತಿ, ಯುವನಿಧಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಅಧಿಕಾರಕ್ಕೆ ಬಂದ ಐದಾರು ತಿಂಗಳಲ್ಲಿ ಈ ರೀತಿ ಯೋಜನೆಗಳನ್ನು ಜಾರಿ ಮಾಡಿರುವ ಸರ್ಕಾರ ಯಾವುದಾದರೂ ಇದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ.

ರಾಮಲಿಂಗಾರೆಡ್ಡಿ ಅವರು ಈ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಕೂಡ ತಮ್ಮ ಸಾಕ್ಷಿ ಗುಡ್ಡೆ ಬಿಟ್ಟುಹೋಗಲು ರಾಮನಗರಕ್ಕೆ 100 ನೂತನ ಅಶ್ವಮೇಧ ಬಸ್ ಗಳನ್ನು ಮಂಜೂರಾತಿ ಮಾಡಿದ್ದಾರೆ. ಇಂದು 25 ಬಸ್ ಗಳನ್ನು ಉದ್ಘಾಟನೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ಉಳಿದ ಬಸ್ ಗಳನ್ನು ವ್ಯವಸ್ಥೆ ಮಾಡಲಾಗುವುದು. ಬೇರೆ ಬಸ್ ಗಳಿಗಿಂತ ಈ ಬಸ್ ಸ್ವಲ್ಪ ಎತ್ತರವಾಗಿದೆ. ಎಲ್ಲಾ ಪ್ರಯಾಣಿಕರಿಗೆ ಅನುಕೂಲವಾಗಲು ಅನೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ ನಮ್ಮ ರಾಜ್ಯದ ಸಾರಿಗೆ ವ್ಯವಸ್ಥೆ ಮಾದರಿಯಾಗಿದೆ.

ರಾಮಲಿಂಗಾ ರೆಡ್ಡಿ ಅವರು ಸಚಿವರಾಗಿ ಸಾರಿಗೆ ಇಲಾಖೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರುತ್ತಿದ್ದಾರೆ. ಸರ್ಕಾರದ ಪ್ರತಿನಿಧಿಯಾಗಿ, ಈ ಭಾಗದ ಶಾಸಕನಾಗಿ ಅವರಿಗೆ ತುಂಬು ಹೃದಯದ ಧನ್ಯವಾದ ಸಲ್ಲಿಸುತ್ತೇನೆ. ರಾಮಲಿಂಗಾ ರೆಡ್ಡಿ ಅವರ ಬಳಿ ಅತ್ಯುತ್ತಮ ಅಧಿಕಾರಿಗಳ ತಂಡವಿದೆ. ಅವರಿಗೂ ಅಭಿನಂದನೆ ಸಲ್ಲಿಸುತ್ತೇನೆ.

*ರಾಜ್ಯಪಾಲರ ಭಾಷಣದಲ್ಲಿ ಯಾವುದು ಸುಳ್ಳು?:*

ಕಾರ್ಯಕ್ರಮದ ನಂತರ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದರು. ರಾಜ್ಯಪಾಲರಿಂದ ಸರ್ಕಾರ ಸುಳ್ಳು ಹೇಳಿಸಿದೆ ಎಂಬ ಬಿಜೆಪಿ ನಾಯಕರ ಆರೋಪದ ಬಗ್ಗೆ ಕೇಳಿದಾಗ, “ರಾಜ್ಯದ ಮಹಿಳೆಯರಿಗೆ 2 ಸಾವಿರ ಕೊಟ್ಟಿರುವುದು ಸುಳ್ಳೇ, ಮಹಿಳೆಯರು ಬಸ್ ಗಳಲ್ಲಿ ಉಚಿತವಾಗಿ ಸಂಚಾರ ಮಾಡುತ್ತಿರುವುದು ಸುಳ್ಳೇ, ಯುವಕರಿಗೆ ನಿರುದ್ಯೋಗ ಭತ್ಯೆ ಸಿಗುತ್ತಿರುವುದು ಸುಳ್ಳಾ? ಬಡವರಿಗೆ 5 ಕೆ.ಜಿ ಅಕ್ಕಿ ಹಾಗೂ ಉಳಿದ 5 ಕೆ.ಜಿ ಅಕ್ಕಿಯ ಹಣ ನೀಡುತ್ತಿರುವುದು ಸುಳ್ಳಾ? 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡುತ್ತಿರುವುದು ಸುಳ್ಳಾ? ಬಿಜೆಪಿಯವರು ರಾಮನ ಹೆಸರಲ್ಲಿ ಮತ ಕೇಳಲು ಹೊರಟಿದ್ದಾರೆ. ರಾಮ ಅವರ ಮನೆ ಆಸ್ತಿಯೇ? ರಾಮ ನಮ್ಮ ಆಸ್ತಿಯಲ್ಲವೇ? ನಾವು ಹಿಂದೂಗಳಲ್ಲವೇ?” ಎಂದು ತಿರುಗೇಟು ನೀಡಿದರು.

*ಸುರೇಶ್ ಮಾಡಿರುವಷ್ಟು ಕೆಲಸ ಬೇರೆ ಸಂಸದರು ಮಾಡಿಲ್ಲ:*

ಡಿ.ಕೆ ಸಹೋದರರನ್ನು ರಾಮನಗರದಲ್ಲಿ ಕಟ್ಟಿಹಾಕಲು ಬದ್ಧವೈರಿಗಳು ಒಂದಾಗಿದ್ದಾರೆ ಎಂಬ ಪ್ರಶ್ನೆಗೆ, “ಅವರು ಏನಾದರೂ ಮಾಡಲಿ. ಅವರು ಅವರ ಕರ್ತವ್ಯ ಮಾಡುತ್ತಿದ್ದಾರೆ. ರಾಜಕಾರಣ ಮಾಡುವವರನ್ನು ನಾವು ಬೇಡ ಎನ್ನಲು ಸಾಧ್ಯವೇ? ಈ ಹಿಂದೆಯೂ ಸುರೇಶ್ ಅವರು ಚುನಾವಣೆಗೆ ನಿಂತಾಗ ದಳ ಮತ್ತು ಬಿಜೆಪಿಯವರು ಮಾತ್ರ ಮಾಡಿಕೊಂಡು ಅನಿತಾ ಕುಮಾರಸ್ವಾಮಿ ಅವರನ್ನು ಮಾತ್ರ ಕಣಕ್ಕಿಳಿಸಿದ್ದರು. ಅವರು ಏನಾದರೂ ರಾಜಕಾರಣ ಮಾಡಲಿ. ರಾಜ್ಯದ 28 ಸಂಸದರ ಪೈಕಿ ಸುರೇಶ್ ಅವರು ಮಾಡಿರುವ ಕೆಲಸ ಬೇರೆ ಯಾವುದೇ ಸಂಸದರು ಮಾಡಿಲ್ಲ. ಅದಕ್ಕೆ ದಾಖಲೆಗಳಿವೆ. ಕುಡಿಯುವ ನೀರಿನ ವಿಚಾರ, ಅರಣ್ಯ ಜಮೀನು ಕೊಡಿಸಿರುವುದು, ಕೆರೆ ತುಂಬಿಸಿರುವುದು, ನಿವೇಶನ ಹಂಚಿಕೆ ಸೇರಿದಂತೆ ಅನೇಕ ಕೆಲಸ ಮಾಡಿದ್ದಾರೆ. ಈಗ ಚುನಾವಣೆಯಲ್ಲಿ ಸ್ಪರ್ಧಿಸುವವರು ತಮ್ಮ ಬಳಿ ಅಧಿಕಾರ ಇದ್ದಾಗ ಏನು ಮಾಡಿದ್ದಾರೆ?” ಎಂದು ತಿಳಿಸಿದರು.

ಮೋದಿ ಅವರನ್ನು ಪ್ರಧಾನಿಯಾಗುವುದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಕುಮಾರಸ್ವಾಮಿ ಈ ಹಿಂದೆ ಹೇಳಿದ್ದೆಲ್ಲಾ ಮತ್ತೆ ನೆನಪಿಸಿಕೊಳ್ಳಿ. ಅವರು ಪ್ರಧಾನಿಯಾದರೆ ದೇಶ ಬಿಟ್ಟು ಹೋಗುವುದಿಗಾ ದೇವೇಗೌಡರೇ ಹೇಳಿದ್ದರು. ಅದಕ್ಕೆ ಪ್ರಧಾನಿಗಳು ನನ್ನ ಮನೆಯಲ್ಲೇ ಜಾಗ ನೀಡುತ್ತೇನೆ ಬನ್ನಿ ಎಂದಿದ್ದರು. ಕುಮಾರಸ್ವಾಮಿ ಅವರ ಮಾತುಗಳ ದಾಖಲೆ ನಿಮ್ಮ ಬಳಿ ಇಲ್ಲವೇ” ಎಂದರು.

*ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ:*
ನಿಮ್ಮನ್ನು ಜೈಲಿಗೆ ಕಳುಹಿಸುತ್ತೇವೆ ಎಂದು ಈಶ್ವರಪ್ಪ ಅವರು ಪದೇ ಪದೆ ಹೇಳುತ್ತಿರುವ ಬಗ್ಗೆ ಕೇಳಿದಾಗ, “ನನ್ನನ್ನು ಜೈಲಿಗೆ ಕಳುಹಿಸುವುದಾಗಿ ಅನೇಕರು ಮಾತನಾಡಿದ್ದಾರೆ. ಅವರೂ ಮಾತನಾಡಿದ್ದಾರೆ, ನಮ್ಮ ಜಿಲ್ಲೆಯವರೂ ಮಾತನಾಡಿದ್ದಾರೆ. ನಾನು ಎಲ್ಲದಕ್ಕೂ ಸಿದ್ಧನಿದ್ದೇನೆ. ದೊಡ್ಡ ಷಡ್ಯಂತ್ರ ನಡೆಯುತ್ತಿದೆ. ಸಿಬಿಐ ಮೂಲಕ ಏನೇನು ಮಾಡಿಸುತ್ತಿದ್ದಾರೆ, ಬೇರೆಯವರ ಮೂಲಕ ಏನು ಮಾಡಿಸುತ್ತಿದ್ದಾರೆ ಎಂದು ನನಗೂ ಗೊತ್ತಿದೆ. ಸಮಯ ಬಂದಾಗ ಮಾತನಾಡುತ್ತೇನೆ” ಎಂದು ತಿಳಿಸಿದರು.
[

ರಾಮನಗರದಲ್ಲಿ ಸಾರಿಗೆ ಸಂಸ್ಥೆ ನೂತನ ಬಸ್‌ಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಂಸದ ಡಿ.ಕೆ.ಸುರೇಶ್ ಅವರ ಮಾತುಗಳು :

ಶಕ್ತಿ ಯೋಜನೆ ಜಾರಿಗೆ ಬಂದನಂತರ ಕೆಎಸ್ಆರ್ ಟಿಸಿ ಸಂಸ್ಥೆಯ ಅಧಿಕಾರಿ ಮತ್ತು ಇತರೇ ಸಿಬ್ಬಂದಿ ವರ್ಗದಲ್ಲಿಯೇ ಆತಂಕ ಮೂಡಿತ್ತು. ನಮಗೆ ಸಂಬಳ ಕೊಡುತ್ತಾರೆಯೇ ಎನ್ನುವ ಮಾತುಗಳು ಓಡಾಡುತ್ತಿದ್ದವು. ಈ ಮಾತುಗಳನ್ನು ಕಾಂಗ್ರೆಸ್ ಸರ್ಕಾರ ಸುಳ್ಳಾಗಿಸಿದೆ.

ಕಳೆದ 5 ವರ್ಷಗಳಲ್ಲಿ ಕೆಎಸ್ಆರ್‌ಟಿಸಿ ಮತ್ತು ಬಿಎಂಟಿಸಿ ಮುಳುಗಿ ಹೋಗುತ್ತದೆ. ಸಂಬಳ ಕೊಡಲು ಆಗದಂತಹ ಸ್ಥಿತಿ ಬರಲಿದೆ ಎಂದು ಹೇಳಲಾಗುತ್ತಿತ್ತು. ಸಂಬಳ ಪಾವತಿಸಿ ಎಂದು ಚಾಲಕರು ಮತ್ತು ಸಿಬ್ಬಂದಿ ವರ್ಗ ಧರಣಿ ಕುಳಿತುಕೊಂಡಂತಹ ದಿನಗಳನ್ನೂ ಈ ಹಿಂದೆ ನೋಡಬೇಕಾಯಿತು. ಕೆಎಸ್ಆರ್‌ಟಿಸಿ, ಬಿಎಂಟಿಸಿ ಸಂಸ್ಥೆಗಳನ್ನು ಕಾಂಗ್ರೆಸ್ ಸರ್ಕಾರ ಉಳಿಸುವ ಕೆಲಸ ಮಾಡಿದೆ. ಮಹಿಳೆಯರಿಗೆ ಉಚಿತ ಪ್ರಯಾಣ ʼಶಕ್ತಿ ಯೋಜನೆʼಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದೆ.

ನಿಮ್ಮನ್ನು ಉಚಿತವಾಗಿ ಕರೆದುಕೊಂಡು ಹೋಗಬೇಕೆ ಎಂದು ಬಸ್ಸಿನ ನಿರ್ವಾಹಕರೆ ಮಹಿಳೆಯರನ್ನು ನಿಂದಿಸುವ ಒಂದಷ್ಟು ವಿಡಿಯೋಗಳು ವೈರಲ್ ಆಗಿದ್ದವು. ಯಾವುದೇ ಮಹಿಳೆಯರನ್ನು ನೀವು ಉಚಿತವಾಗಿ ಕರೆದುಕೊಂಡು ಹೋಗುತ್ತಿಲ್ಲ, ಸರ್ಕಾರ ಪ್ರತಿ ಮಹಿಳೆಯರಿಗೆ ಹಣ ಪಾವತಿ ಮಾಡುತ್ತಿದೆ. ಉಚಿತವಾಗಿ ಪ್ರಯಾಣ ಮಾಡುತ್ತಿಲ್ಲ ಎನ್ನುವ ಭಾವನೆ ನಮ್ಮ ತಾಯಂದಿರು, ಸಹೋದರಿಯರಲ್ಲಿ ಮೂಡಬೇಕು.

ಸರ್ಕಾರ 3,250 ಕೋಟಿ ಹಣವನ್ನು ಶಕ್ತಿ ಯೋಜನೆಗೆ ಮೀಸಲಿಟ್ಟಿದೆ. ಯೋಜನೆ ಪ್ರಾರಂಭವಾಗಿ ಸುಮಾರು 9 ತಿಂಗಳಾಗಿದ್ದು ರಾಜ್ಯದ ಮಹಿಳೆಯರು 150 ಕೋಟಿ ಟ್ರಿಪ್ ಪ್ರಯಾಣ ಮಾಡಿದ್ದಾರೆ. ಇಡೀ ದೇಶದಲ್ಲಿಯೇ ಇದೊಂದು ಮಾದರಿ ಯೋಜನೆಯಾಗಿದೆ.

ತಮಿಳುನಾಡಿನಲ್ಲಿ ಕೇವಲ 50 ಕಿ.ಮೀ ನಷ್ಟು ಮಾತ್ರ ಉಚಿತವಾಗಿ ಬಸ್ಸಿನಲ್ಲಿ ಓಡಾಡಲು ಅವಕಾಶ ಮಾಡಿಕೊಟ್ಟರು. ನಮ್ಮ ಕಾಂಗ್ರೆಸ್ ಸರ್ಕಾರ ರಾಜ್ಯದ ಪ್ರತಿ ಮೂಲೆಗೂ ಉಚಿತವಾಗಿ ಪ್ರಯಾಣ ಮಾಡುವ ವ್ಯವಸ್ಥೆ ಮಾಡಿಕೊಟ್ಟಿದೆ.

ಬಸ್ ಗಳ ಬೇಡಿಕೆ ಹೆಚ್ಚಾಗುತ್ತಿದ್ದು ಸುಮಾರು 5,600 ಕ್ಕೂ ಹೆಚ್ಚು ಬಸ್ ಗಳನ್ನು ಖರೀದಿ ಮಾಡುವ ಆಲೋಚನೆ ಮಾಡಲಾಗಿದೆ. ಕೆಎಸ್ಆರ್ ಟಿಸಿಗೆ ಸುಮಾರು 1 ಸಾವಿರ ಬಸ್ ಗಳನ್ನು ಖರೀದಿಸಲಾಗಿದೆ. ಮೊದಲನೇ ಕಂತಿನಲ್ಲಿ 25 ಬಸ್ ಗಳನ್ನು ರಾಮನಗರ ಜಿಲ್ಲೆಗೆ ಸಚಿವ ರಾಮಲಿಂಗಾರೆಡ್ಡಿ, ಕೆಎಸ್ಆರ್ಟಿಸಿ ಅಧ್ಯಕ್ಷ ಶ್ರೀನಿವಾಸ್ ಅವರು ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ರಾಮನಗರ ಗ್ರಾಮಾಂತರ ಭಾಗಕ್ಕೆ ಬೇಕಾದ ಬಸ್ ಗಳನ್ನು ನೀಡಬೇಕಾಗಿ ಮನವಿ ಸಲ್ಲಿಸಿದ್ದೇನೆ. ಕುದೂರು ಭಾಗಕ್ಕೆ ಕೆಎಸ್ಆರ್ ಟಿಸಿ ಡಿಪೋ ನೀಡಬೇಕಾಗಿ ನಾನು ಮತ್ತು ಶಾಸಕ ಬಾಲಕೃಷ್ಣ ಅವರು ಮನವಿ ನೀಡಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ರಾಮಲಿಂಗಾರೆಡ್ಡಿ ಅವರ ನೇತೃತ್ವದಲ್ಲಿ ರಾಮನಗರ ಜಿಲ್ಲೆಯನ್ನು ಮಾದರಿ ಜಿಲ್ಲೆಯನ್ನಾಗಿ ರೂಪಿಸುವ ಸಂಕಲ್ಪವನ್ನು ಜಿಲ್ಲೆಯ ಪಕ್ಷದ ಜನಪ್ರತಿನಿಧಿಗಳು ಮಾಡಿದ್ದೇವೆ. ಪ್ರಗತಿಯನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡೋಣ.