ಕಾಬೂಲ್ : ಪಾಕಿಸ್ತಾನದ ವಾಯುಪಡೆ ಅಫ್ಘಾನಿಸ್ತಾನದಲ್ಲಿ ನಡೆಸಿದ ವೈಮಾನಿಕ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲು ತಾಲಿಬಾನ್ ಯೋಧರು ಭಾನುವಾರ ಅಫ್ಘಾನಿಸ್ತಾನ-ಪಾಕ್ ಗಡಿಯಲ್ಲಿ ದಾಳಿ ನಡೆಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ತಾಲಿಬಾನಿಗಳ ಫಿರಂಗಿಗಳು ಮತ್ತು ಮೆಷಿನ್ ಗನ್‌ಗಳ ಮೂಲಕ ಪಾಕಿಸ್ತಾನಿ ಸೇನೆ ಮೇಲೆ ದಾಳಿ ಮಾಡಿದೆ. ಅಫ್ಘಾನಿಸ್ತಾನದ ತಾಲಿಬಾನ್ ಯೋಧರ ಈ ದಾಳಿಯಿಂದಾಗಿ, ಪಾಕಿಸ್ತಾನಿ ಸೇನೆಯು ತನ್ನ ಎರಡು ಗಡಿ ಪೋಸ್ಟ್‌ಗಳನ್ನು ತೊರೆದು ಹಿಮ್ಮೆಟ್ಟಿದೆ ಎಂದು ವರದಿಯಾಗಿದೆ. ಅಷ್ಟೇ ಅಲ್ಲ, ಈ ದಾಳಿಯಲ್ಲಿ ಸುಮಾರು 19 ಪಾಕಿಸ್ತಾನಿ ಸೈನಿಕರು ಸಹ ಸಾವಿಗೀಡಾಗಿದ್ದಾರೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಡ್ಯುರಾಂಡ್ ಲೈನ್ ಬಳಿಯ ಪಕ್ತಿಯಾ ಮತ್ತು ಖೋಸ್ಟ್ ಪ್ರದೇಶಗಳಲ್ಲಿ ಈ ಸಂಘರ್ಷ ನಡೆದಿದೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ತಿಳಿಸಿದೆ. ಈ ಸಂಘರ್ಷದಲ್ಲಿ, ತಾಲಿಬಾನ್ ಹೋರಾಟಗಾರರು ಪಾಕಿಸ್ತಾನದ ಪೋಸ್ಟ್‌ಗಳ ಮೇಲೆ ದಾಳಿ ನಡೆಸಿದ್ದಾರೆ, ಅವರ ದಾಳಿ ಎಷ್ಟು ಭೀಕರವಾಗಿತ್ತು ಎಂದರೆ ಪಾಕಿಸ್ತಾನದ ಸೇನೆಗೆ ಹಿಮ್ಮೆಟ್ಟುವುದನ್ನು ಬಿಟ್ಟು ಬೇರೆ ದಾರಿ ಕಾಣಲಿಲ್ಲ. ಈ ಪ್ರದೇಶಗಳಲ್ಲಿ ಹೋರಾಟಗಾರರು ಕನಿಷ್ಠ 19 ಪಾಕಿಸ್ತಾನಿ ಸೈನಿಕರನ್ನು ಕೊಂದಿದ್ದಾರೆ ಎಂದು ತಾಲಿಬಾನ್ ರಕ್ಷಣಾ ಸಚಿವಾಲಯ ತಿಳಿಸಿದೆ.
ಪಾಕಿಸ್ತಾನವು ತನ್ನ ಕೋಪ ಮತ್ತು ಹೇಡಿತನವನ್ನು ತೋರಿಸುತ್ತಾ, ಗಡಿಯುದ್ದಕ್ಕೂ ನಾಗರಿಕ ಪ್ರದೇಶಗಳ ಮೇಲೆ ವಾಯುದಾಳಿ ಮಾಡಿದ್ದು ಇದರಲ್ಲಿ ಮೂವರು ನಾಗರಿಕರು ಸಾವಿಗೀಡಾಗಿದ್ದಾರೆ ಎಂದು ಆರೋಪಿಸಿತ್ತು.
ಶನಿವಾರ ಮುಂಜಾನೆ ತಾಲಿಬಾನ್ ಪಡೆಗಳು ಪಾಕಿಸ್ತಾನಿ ಪೋಸ್ಟ್‌ಗಳ ಮೇಲೆ ದಾಳಿ ಮಾಡಿ ಅವುಗಳನ್ನು ವಶಪಡಿಸಿಕೊಂಡಿವೆ ಎಂದು ಸ್ಥಳೀಯ ತಾಲಿಬಾನ್ ಮಾಧ್ಯಮಗಳು ವರದಿ ಮಾಡಿವೆ. ವರದಿಗಳ ಪ್ರಕಾರ, ಎರಡೂ ಕಡೆಯಿಂದ ಇನ್ನೂ ಗುಂಡಿನ ದಾಳಿ ನಡೆಯುತ್ತಿದೆ. ಆದರೆ, ಈ ಘಟನೆ ಕುರಿತು ಪಾಕಿಸ್ತಾನ ಸೇನೆಯಿಂದ ಯಾವುದೇ ಹೇಳಿಕೆ ಹೊರಬಿದ್ದಿಲ್ಲ.ಕೆಲದಿನಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ಪಾಕಿಸ್ತಾನಿ ವಾಯುಪಡೆ ನಡೆಸಿದ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 51 ಜನರು ಸಾವಿಗೀಡಾಗಿದ್ದರು. ಇದಕ್ಕೆ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗುತ್ತದೆ ಎಂದು ತಾಲಿಬಾನ್ ಎಚ್ಚರಿಕೆ ನೀಡಿತ್ತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಪಾಕಿಸ್ತಾನ, ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನದ ಭಯೋತ್ಪಾದಕರ ಅಡಗುತಾಣಗಳ ಮೇಲೆ ವಾಯುಪಡೆ ದಾಳಿ ಮಾಡಲಾಗಿದೆ ಎಂದು ಹೇಳಿತ್ತು. ಆದರೆ ತಾಲಿಬಾನ್ ಇದನ್ನು ತನ್ನ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಕರೆದಿದೆ ಮತ್ತು ಪ್ರತೀಕಾರದ ಕ್ರಮಕ್ಕೆ ಆದೇಶಿಸಿತ್ತು.