ಢಾಕಾ : ಬಾಂಗ್ಲಾದೇಶವು ಭಯೋತ್ಪಾದನಾ ವಿರೋಧಿ ಕಾನೂನಿನಡಿ ಜಮಾತ್-ಎ-ಇಸ್ಲಾಮಿ ಮತ್ತು ಅದರ ವಿದ್ಯಾರ್ಥಿ ಘಟಕವಾದ ಇಸ್ಲಾಮಿ ಛತ್ರ ಶಿಬಿರವನ್ನು ಗುರುವಾರ ನಿಷೇಧಿಸಿತು.
ಮೂಲಭೂತವಾದಿ ಪಕ್ಷವು ಸಾರ್ವಜನಿಕ ಭದ್ರತೆಗೆ ಒಡ್ಡಿರುವ ಬೆದರಿಕೆಯನ್ನು ಉಲ್ಲೇಖಿಸಿ, ಗೃಹ ಸಚಿವಾಲಯದ ಸಾರ್ವಜನಿಕ ಭದ್ರತಾ ವಿಭಾಗವು ಗುರುವಾರ ಇಸ್ಲಾಮಿಸ್ಟ್ ಪಕ್ಷದ ಮೇಲಿನ ನಿಷೇಧವನ್ನು ತನ್ನ ಅಧಿಸೂಚನೆಯಲ್ಲಿ ದೃಢಪಡಿಸಿತು.
ಪ್ರಧಾನಿ ಶೇಖ್ ಹಸೀನಾ ಸರ್ಕಾರವನ್ನು ಉರುಳಿಸಿ, ವಿರೋಧಪಕ್ಷವಾದ ಬಿಎನ್‌ಪಿ ಅಧಿಕಾರಕ್ಕೆ ತರುವಲ್ಲಿ ಪಾಕಿಸ್ತಾನದ ಐಎಸ್‌ಐ ಹಾಗೂ ಸೇನೆ ನಿರಂತರ ಪ್ರಯತ್ನ ನಡೆಸಿದ್ದವು ಎಂಬುದೂ ವರದಿಯಾಗಿವೆ. ಇದಕ್ಕಾಗಿ ಪ್ರತಿಭಟನೆ ಹಾಗೂ ಹಿಂಸಾಚಾರವನ್ನು ಪ್ರಚೋದಿಸಿದ್ದವು ಎಂದೂ ಹೇಳಲಾಗಿದೆ.
ಪ್ರಧಾನಿಯಾಗಿದ್ದ ಶೇಖ್ ಹಸೀನಾ ಅವರು ಸುರಕ್ಷತೆ ಕಾರಣಕ್ಕೆ ಬಾಂಗ್ಲಾದೇಶ ತೊರೆದು ಇದೀಗ ನೆರೆಯ ಭಾರತಕ್ಕೆ ಆಗಮಿಸಿದ್ದಾರೆ. ಅವರು ಅಗರ್ತಲಾಕ್ಕೆ ಬಂದಿರುವ ಸಾಧ್ಯತೆ ಇದೆ ಎನ್ನಲಾಗಿತ್ತು.
ಆದರೆ, ಇದೀಗ ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ವಿಮಾನ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಯಲ್ಲಿ ಲ್ಯಾಂಡ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಾಂಗ್ಲಾದೇಶದ ಆಡಳಿತ ಚುಕ್ಕಾಣಿಯನ್ನು ಸದ್ಯ ಸೇನೆ ವಹಿಸಿಕೊಂಡಿದ್ದು ಇಷ್ಟರಲ್ಲೇ ಮಧ್ಯಂತರ ಸರ್ಕಾರ ರಚಿಸುವುದಾಗಿ ಘೋಷಣೆ ಮಾಡಿದೆ.ಬಾಂಗ್ಲಾದೇಶದಲ್ಲಿ ನಡೆದಿರುವ ಅಹಿತಕರ ಘಟನೆಗಳಿಗೆ ಸಂಬಂಧಿಸಿದ ಪಾಕಿಸ್ತಾನದ ಐಎಸ್ಐ ಪರೋಕ್ಷವಾಗಿ ನೆರವಾಗಿರುವ ಅನುಮಾನ ಎಲ್ಲೆಡೆ ದಟ್ಟವಾಗಿ ಹರಡಿದೆ.
ಶೇಖ್ ಹಸೀನಾ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ನೆರೆಹೊರೆಯಲ್ಲಿ ಅತ್ಯುತ್ತಮ ಸ್ನೇಹ ಸಂಬಂಧ ಹೊಂದಿದ್ದಾರೆ. ಬಾಂಗ್ಲಾದೇಶದ ವಿಮೋಚನೆ ಸಂದರ್ಭದಲ್ಲಿ ಭಾರತ ನಿರ್ಣಾಯಕ ಪಾತ್ರ ವಹಿಸಿತ್ತು. ಅವರ ಪಕ್ಷದ ಪರವಾಗಿ ಭಾರತ ಸದಾ ಇದೆ. ಹೀಗಾಗಿ ಮೊದಲಿನಿಂದಲೂ ಶೇಖ್ ಹಸೀನಾ ಅವರಿಗೆ ಭಾರತದ ಮೇಲೆ ಅತ್ಯಂತ ನಂಬಿಕೆ. ಹೀಗಾಗಿ, ಅವರು ಈ ಕಷ್ಟಕಾಲದಲ್ಲಿ ಭಾರತಕ್ಕೆ ಆಶ್ರಯ ಬಯಸಿ ಬಂದಿದ್ದಾರೆ.