ಪಂ. ರವಿಶಂಕರ್ ಜಗತ್ಪ್ರಸಿದ್ಧ ಸಿತಾರ ವಾದಕರು. ಆದರೆ ಅವರು ತಮ್ಮ ಪ್ರಸಿದ್ಧಿಗಾಗಿ ತಮ್ಮ ಪತ್ನಿಯ ಬದುಕನ್ನೇ ಹಾಳು ಮಾಡಿದರು. ದೊಡ್ಡವರು ಕೆಲವೊಮ್ಮೆ ಎಷ್ಟೊಂದು ಸಣ್ಣತನ ತೋರಿಸುತ್ರಾರೆನ್ನುವುದಕ್ಕೆ ರವಿಶಂಕರ ಅವರು ಮೊದಲ ಪತ್ನಿ ಅನ್ನಪೂರ್ಣಾದೇವಿ ಅವರಿಗೆ ಮಾಡಿದ ಅನ್ಯಾಯವೇ ಉದಾಹರಣೆ.

ನಾವಿಲ್ಲಿ ಹೃಷಿಕೇಶ್ ಮುಖರ್ಜಿಯವರ ಕಭೀ ಕಭೀ ಹಿಂದಿ ಸಿನಿಮಾದ ಅಮಿತಾಭ್- ಜಯಾ ಬಚನ್ ಪಾತ್ರಗಳನ್ನು ನೆನಪಿಸಿಕೊಳ್ಳಬಹುದು. ಹೆಂಡತಿ ತನ್ನೆದುರೇ ತನಗಿಂತ ಹೆಚ್ಚು ಕೀರ್ತಿ ಪಡೆಯುವುದನ್ನು ಕೆಲವು ಪುರುಷರು ಸಹಿಸುವುದಿಲ್ಲ. ಹಾಗೆ ಪಂ. ರವಿಶಂಕರ್ ಅವರು ಸಹ ತನ್ನ ಪತ್ನಿಯ ಕುರಿತಾಗಿ ಅಸೂಯಾ ಮನೋಭಾವ ತಾಳಿದ್ದರಿಂದ ಬಹಳ ಪ್ರಸಿದ್ಧ ಕಲಾವಿದೆಯಾಗಬೇಕಿದ್ದ ಅನ್ನಪೂರ್ಣಾ ತೆರೆಮರೆಗೆ ಸರಿದುಹೋದಳು.
ಅನ್ನಪೂರ್ಣಾ ಉಸ್ತಾದ ಅಲ್ಲಾಉದ್ದೀನಖಾನ್ ಮಗಳು. ಉಸ್ತಾದ ಅಲಿ ಅಕಬರಖಾನ್ ಅವಳ ಸಹೋದರ. ರೋಶನಾರಾಖಾನ್ ಎಂದೂ ಅವಳನ್ನು ಕರೆಯುತ್ತಿದ್ದರಾದರೂ ಬಾಲ್ಯದಿಂದಲೂ ಹಿಂದೂ ಆವರಣದಲ್ಲಿಯೇ ಬೆಳೆದವಳು ಅನ್ನಪೂರ್ಣ. ರವಿಶಂಕರ ಅವರು ೧೯೪೧ ರಲ್ಲಿ ಅವಳನ್ನು ಮದುವೆಯಾದರು. ಅನ್ನಪೂರ್ಣಾ ಸುರಬಹಾರ್ ವಾದಕಿಯಾಗಿದ್ದರು. ರವಿಶಂಕರ ಮತ್ತು ಅನ್ನಪೂರ್ಣಾ ಇಬ್ಬರೂ ಸುಮಾರು ೧೦-೧೫ ವರ್ಷ ಜೊತೆಯಾಗಿಯೇ ಕಾರ್ಯಕ್ರಮ ಕೊಡುತ್ತಿದ್ದರು. ಆದರೆ ಸಂಗೀತ ರಸಿಕರು ಅನ್ನಪೂರ್ಣಾದೇವಿಯ ವಾದನಕ್ಕೇ ಹೆಚ್ಚಿನ ಪ್ರಶಂಸೆ ವ್ಯಕ್ತಪಡಿಸುತ್ತಿದ್ದರು. ಇದು ರವಿಶಂಕರ ಅವರಲ್ಲಿ ಅಸೂಯೆ ಗೆ ಕಾರಣವಾಯಿತು. ಕ್ರಮೇಣ ಅವರು ತಮ್ಮ ಪತ್ನಿಯನ್ನು ಉದ್ದೇಶಪೂರ್ವಕವಾಗಿ ಬದಿಗೆ ಸರಿಸತೊಡಗಿದರು. ಜೋಡಿ ಕಾರ್ಯಕ್ರಮಗಳು ನಿಂತುಹೋದವು. ಕೆಲವೊಮ್ಮೆ ಬಹಿರಂಗವಾಗಿಯೂ ಅವರ ಅಸಹನೆ ವ್ಯಕ್ತವಾಗುತ್ತಿತ್ತು. ಇದರಿಂದ ಮನನೊಂದ ಅನ್ನಪೂರ್ಣಾದೇವಿ ತಾವಾಗಿ ಮನೆಗಷ್ಟೇ ಸೀಮಿತವಾಗಿ ಉಳಿದುಕೊಂಡರು. ೧೯೫೬ ರ ನಂತರ ಅವರು ಸಾರ್ವಜನಿಕವಾಗಿ ಕಾರ್ಯಕ್ರಮ ನೀಡಲಿಲ್ಲ. ಆದರೂ ಕೆಲವರು ಶಿಷ್ಯರಿಗೆ ಶಿಕ್ಷಣವನ್ನುನೀಡಿದರು. ಚೌರಾಸಿಯಾ, ನಿಖಿಲ್ ಬ್ಯಾನರ್ಜಿ, ನಿತ್ಯಾನಂದ ಹಳದೀಪುರ ಮೊದಲಾದವರ ಬೆಳವಣಿಗೆಗೆ ಕಾರಣರಾದರು.
ರವಿಶಂಕರ್ ಮತ್ತು ಅನ್ನಪೂರ್ಣಾ ೧೯೮೨ರಲ್ಲಿ ಬೇರ್ಪಟ್ಟರು. ನಂತರ ರವಿಶಂಕರ್ ಕಮಲಾ ಶಾಸ್ತ್ರಿ, ಸ್ಯೂ ಜೋನ್ಸ್, ಸುಕನ್ಯಾ ರಾಜನ್ ಮೊದಲಾದವರೊಡನೆ ಸಂಪರ್ಕ ಬೆಳೆಸಿದರು. ಮಕ್ಕಳೂ ಹುಟ್ಟಿದವು.ಅನುಷ್ಕಾ ರವಿಶಂಕರ್ ಗೆ ಸುಕನ್ಯಾಳಿಂದ ಹುಟ್ಟಿದ ಮಗಳು. ಏನೇ ಇದ್ದರೂ ಒಂದು ಪ್ರತಿಭೆಗೆ ಅನ್ಯಾಯವಾದದ್ದಂತೂ ಸುಳ್ಳಲ್ಲ.
– ಎಲ್. ಎಸ್. ಶಾಸ್ತ್ರಿ