Join The Telegram | Join The WhatsApp |
ಬೆಳಗಾವಿ :
ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಸಮಾಜ ಬಾಂಧವರು ಡಿಸೆಂಬರ್ 22 ರಂದು (ಗುರುವಾರ) ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ.
ಕೂಡಲ ಸಂಗಮ ಲಿಂಗಾಯತ ಪಂಚಮಸಾಲಿ ಸಮಾಜದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಸಮಾಜದ ಸಚಿವರು, ಶಾಸಕರು ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಸ್ವಾಮೀಜಿಗಳು ಈಗಾಗಲೇ ಸವದತ್ತಿಯಿಂದ ಸುವರ್ಣ ವಿಧಾನಸೌಧದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದು ಗುರುವಾರ ಬೆಳಗ್ಗೆ 9.30 ಕ್ಕೆ ಹಿರೇ ಬಾಗೇವಾಡಿ ತಲುಪಲಿದೆ. ನಂತರ ಸುವರ್ಣ ವಿಧಾನಸೌಧದತ್ತ ಸಮಾಜ ಬಾಂಧವರು ತೆರಳಲಿದ್ದಾರೆ. ಕರ್ನಾಟಕದ ಎಲ್ಲಾ ಜಿಲ್ಲೆಗಳ ಸುಮಾರು 25 ಲಕ್ಷ ಪಂಚಮಸಾಲಿ ಸಮಾಜ ಬಾಂಧವರು ಈ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈಗಾಗಲೇ ಕೊಟ್ಟ ಮಾತಿನಂತೆ ಗುರುವಾರ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಘೋಷಣೆ ಮಾಡಬೇಕು. ಮುಖ್ಯಮಂತ್ರಿಗಳು ಮೀಸಲಾತಿ ಘೋಷಣೆ ಮಾಡಿದರೆ ವಿಜಯೋತ್ಸವ ಆಚರಿಸಲಾಗುವುದು. ಒಂದು ವೇಳೆ ಮೀಸಲಾತಿ ಘೋಷಣೆ ಮಾಡದೇ ಇದ್ದಲ್ಲಿ ಬೃಹತ್ ಪ್ರಮಾಣದಲ್ಲಿ ಸುವರ್ಣ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು. ಪ್ರತಿಭಟನೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಂತೆ ಸಮಾಜ ಬಾಂಧವರು ಶಾಂತತೆ ಕಾಪಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಜಿಲ್ಲಾ ಉಪಾಧ್ಯಕ್ಷ ರುದ್ರಣ್ಣ ಚಂದರಗಿ ಮನವಿ ಮಾಡಿದ್ದಾರೆ.
Join The Telegram | Join The WhatsApp |