ಬೆಂಗಳೂರು:ಬಿಜೆಪಿ ಮತ್ತು ಜೆಡಿಎಸ್ ಹಮ್ಮಿಕೊಂಡಿರುವ ಪಾದಯಾತ್ರೆಗೆ ಪೊಲೀಸ್ ಇಲಾಖೆ ಅಧಿಕೃತ ಅನುಮತಿ ನೀಡುವುದಿಲ್ಲ. ಯಾರಿಗೂ ತೊಂದರೆ ಮಾಡದೇ ಪಾದಯಾತ್ರೆ ಮಾಡುವುದಾದರೆ ಮಾಡಲಿ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ, ಬಿಜೆಪಿ ಮತ್ತು ಜೆಡಿಎಸ್ ಬೆಂಗಳೂರಿನಿಂದ ಮೈಸೂರು ವರೆಗೆ ಆಗಸ್ಟ್ ಮೂರರಿಂದ ಪಾದಯಾತ್ರೆಗೆ ಮುಂದಾಗಿವೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪಾದಯಾತ್ರೆಗೆ ಅನುಮತಿ ಕೊಟ್ಟಿರಲಿಲ್ಲ. ಆದರೂ ನಾವು ಮಾಡಿದ್ದೇವೆ. ಅನುಮತಿ ನೀಡಿದರೆ ಕಾನೂನು ಸಮಸ್ಯೆ ಉಂಟಾಗಲಿದೆ. ಜನರಿಗೆ ತೊಂದರೆ ಕೊಡದೆ ಪಾದಯಾತ್ರೆ ನಡೆಸುವುದಾದರೆ ನಡೆಸಲಿ. ಅದಕ್ಕೆ ನಾವು ಸಹಕರಿಸುತ್ತೇವೆ. ವಿರೋಧ ಪಕ್ಷಗಳು ಹಮ್ಮಿಕೊಂಡಿರುವ ಪಾದಯಾತ್ರೆಗೆ ಪ್ರತಿಯಾಗಿ ಕಾಂಗ್ರೆಸ್ ಪಕ್ಷ ರಣತಂತ್ರ ರೂಪಿಸಲಿದೆ ಎಂದು ಅವರು ಹೇಳಿದರು.