ಮುಂಬಯಿ : ಮಹಾರಾಷ್ಟ್ರ ವಿಧಾನಸಭೆಯಲ್ಲಿ ಇಂದು ಮರಾಠ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 10% ಮೀಸಲಾತಿ ಒದಗಿಸುವ ಮರಾಠ ಮೀಸಲಾತಿ ವಿಧೇಯಕವನ್ನು ಅಂಗೀಕರಿಸಲಾಗಿದೆ.

ಈ ವೇಳೆ ವಿಧೇಯಕ ಜಾರಿಯಾಗಿ 10 ವರ್ಷ ಕಳೆದ ಬಳಿಕ ಮಹಾರಾಷ್ಟ್ರ ರಾಜ್ಯ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಕಾಯಿದೆ-2024 ಅನ್ನು ತಿದ್ದುಪಡಿ ಮಾಡಲು ಅನುಮತಿ ಪಡೆಯಲಾಗಿದೆ. 2021ರ ಮೇ 5 ರಂದು ಒಟ್ಟು ಮೀಸಲಾತಿ 50% ಮೀರಿದೆ ಎಂದು ಸುಪ್ರೀಂ ಕೋರ್ಟ್ ಮರಾಠ ಮೀಸಲಾತಿಯನ್ನು ರದ್ದು ಮಾಡಿತ್ತು.

ಮರಾಠ ಸಮುದಾಯದವರಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವ ಉದ್ದೇಶವುಳ್ಳ ಮರಾಠಾ ಮೀಸಲಾತಿ ಮಸೂದೆಯನ್ನು ಇಂದು (ಮಂಗಳವಾರ) ಮಹಾರಾಷ್ಟ್ರ ವಿಧಾನಸಭೆಯಲ್ಲಿ ಅಂಗೀಕರಿಸಲಾಗಿದೆ.

ಮರಾಠ ಮೀಸಲಾತಿಗೆ ಸಂಬಂಧಿಸಿ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೇ 10ರಷ್ಟು ಮೀಸಲಾತಿ ನೀಡುವ ಪ್ರಸ್ತಾವನೆಗೆ ಸರ್ಕಾರ ಅನುಮೋದನೆ ನೀಡಿದೆ. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗ ನೀಡಿದ ವರದಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಈ ಮಸೂದೆಗೆ ವಿಧಾನ ಪರಿಷತ್ತಿನಲ್ಲಿ ಒಪ್ಪಿಗೆ ಪಡೆದ ನಂತರ ಕಾನೂನಾಗಿ ಜಾರಿಗೆ ಬರಲಿದೆ.

ಈ ವಿಧೇಯಕವನ್ನು ಮಂಡಿಸಲು ಇಂದು ಮಹಾರಾಷ್ಟ್ರ ಸರ್ಕಾರವು ಒಂದು ದಿನದ ವಿಶೇಷ ಅಧಿವೇಶನವನ್ನು ಕರೆದಿತ್ತು.

ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದು, ಎಲ್ಲರ ಆಶೀರ್ವಾದದಿಂದ ಕೆಲಸ ಮಾಡುತ್ತಿದ್ದೇನೆ. ನಾವು ಜಾತಿ, ಧರ್ಮದ ಆಧಾರದಲ್ಲಿ ಯೋಚನೆ ಮಾಡುವುದಿಲ್ಲ. ಬದಲಾಗಿ ಮರಾಠ ಸಮುದಾಯದಂತೆ ಬೇರೆ ಯಾವುದೇ ಸಮುದಾಯಕ್ಕೆ ಮೀಸಲಾತಿಯ ಅಗತ್ಯತೆ ಎದುರಾದರೆ ಮುಖ್ಯಮಂತ್ರಿಯಾಗಿ ನನ್ನ ನಿಲುವು ಇದೇ ರೀತಿ ಇರುತ್ತದೆ. ಪ್ರಧಾನಿ ಮೋದಿ ಅವರು ಯಾವಾಗಲೂ ‘ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌’ ಎಂದು ಹೇಳುತ್ತಾರೆ. ನಾವು ಅದನ್ನೇ ಪಾಲಿಸುತ್ತಿದ್ದೇವೆ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಹೇಳಿದ್ದಾರೆ.

ಮರಾಠಾ ಮೀಸಲಾತಿಯ ಬಗ್ಗೆ ನಾವೆಲ್ಲರೂ ಒಂದೇ ರೀತಿಯ ಅಭಿಪ್ರಾಯಗಳನ್ನು ಹೊಂದಿದ್ದೇವೆ. ಆದ್ದರಿಂದ ನಾನು ಇಲ್ಲಿ ರಾಜಕೀಯ ಹೇಳಿಕೆಯನ್ನು ನೀಡುವುದಿಲ್ಲ. ನಿಮ್ಮೆಲ್ಲರ ಸಹಕಾರದಿಂದ ಮಸೂದೆಯನ್ನು ಕಾನೂನಾಗಿ ಜಾರಿಗೆ ತರಬಹುದು. ನಾವು ಮರಾಠ ಸಮುದಾಯಕ್ಕೆ ನೀಡಿದ ಭರವಸೆಯನ್ನು ಈಡೇರಿಸಿದ್ದೇವೆ. ರಾಜ್ಯದ ಇಬ್ಬರು ಉಪಮುಖ್ಯಮಂತ್ರಿಗಳು ಹಾಗೂ ಇತರ ಸಚಿವರು ಸೇರಿದಂತೆ ನನ್ನ ಎಲ್ಲಾ ಸಹೋದ್ಯೋಗಿಗಳಿಗೆ ಧನ್ಯವಾದ ಸಲ್ಲಿಸುತ್ತೇನೆ ಎಂದು ತಿಳಿಸಿದ್ದಾರೆ.