ಹೈದರಾಬಾದ್: ರಾಷ್ಟ್ರ ರಾಜಧಾನಿ ನವದೆಹಲಿಯ ಪ್ರವಾಸದಿಂದ ಮರಳಿರುವ ತೆಲುಗುದೇಶಂ ಪಕ್ಷದ ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಈಗ ರಾಜ್ಯ ಸಚಿವ ಸಂಪುಟ ರಚನೆಯತ್ತ ಚಿತ್ತ ಹರಿಸಿದ್ದಾರೆ.
ತೆಲುಗುದೇಶಂ ಪಕ್ಷ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಮರಳಿದೆ. ಮುಖ್ಯಮಂತ್ರಿಯಾಗಿ ನಾಯ್ಡು ಅವರು ಇದೇ 12ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಪ್ರಮಾಣವಚನಕ್ಕೂ ಮೊದಲೇ ಸಂಪುಟ ರಚನೆಯ ಕಸರತ್ತು ಪೂರ್ಣಗೊಳಿಸಲು ಅವರು ತೀರ್ಮಾನಿಸಿದ್ದಾರೆ. ನಿಯಮಾನುಸಾರ ಸಂಪುಟಕ್ಕೆ 25 ಶಾಸಕರ ಸೇರ್ಪಡೆಗೆ ಅವಕಾಶವಿದೆ. ಆದರೆ, ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ.
ಆಕಾಂಕ್ಷಿಗಳ ನಡುವೆ ಅನುಭವ, ಜಾತಿ, ಪ್ರಾದೇಶಿಕ ನಿರೀಕ್ಷೆಗೆ ಮನ್ನಣೆ ನೀಡುವ ಸವಾಲಿನ ಜೊತೆಗೆ ಮೈತ್ರಿ ಪಕ್ಷ ಜನಸೇನಾ ಪಕ್ಷದ ಅಭ್ಯರ್ಥಿಗಳಿಗೂ ಸ್ಥಾನ ಕಲ್ಪಿಸಬೇಕಾಗಿದೆ.
ಟಿಡಿಪಿ ಪಕ್ಷದ ಮೂಲಗಳ ಪ್ರಕಾರ, 21 ಸ್ಥಾನ ಗೆದ್ದಿರುವ ಮೈತ್ರಿಪಕ್ಷ ಜನಸೇನಾವು ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯುವ ಸಾಧ್ಯತೆಗಳಿವೆ. ಜೊತೆಗೆ, ಮತ್ತೊಂದು ಮೈತ್ರಿಪಕ್ಷ 8 ಸ್ಥಾನ ಗೆದ್ದಿರುವ ಬಿಜೆಪಿ ಕೂಡಾ ಆದ್ಯತೆ ಪಡೆಯಲಿದೆ.
ಮೈತ್ರಿಪಕ್ಷ ಜನಸೇನಾವು ಸಂಪುಟದಲ್ಲಿ ಸೂಕ್ತ ಪ್ರಾತಿನಿಧ್ಯ ಪಡೆಯುವ ಸಾಧ್ಯತೆಗಳಿವೆ. ಜೊತೆಗೆ, ಮತ್ತೊಂದು ಮೈತ್ರಿಪಕ್ಷ 8 ಸ್ಥಾನ ಗೆದ್ದಿರುವ ಬಿಜೆಪಿ ಕೂಡಾ ಆದ್ಯತೆ ಪಡೆಯಲಿದೆ.
ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಸಂಪುಟ ಸೇರುವುದು ಖಚಿತ. ಉಪ ಮುಖ್ಯಮಂತ್ರಿ ಜೊತೆಗೆ ಗೃಹ ಖಾತೆ ಹೊಂದಬಹುದು. ನಾಯ್ಡು ಸಂಪುಟದಲ್ಲಿ ಪವನ್ ಕಲ್ಯಾಣ್ ಅಷ್ಟೇ ಡಿಸಿಎಂ ಆಗಿರುವರು ಎಂದು ಮೂಲಗಳು ತಿಳಿಸಿವೆ. ಹಿಂದಿನ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ಸರ್ಕಾರದಲ್ಲಿ ಐವರು ಡಿಸಿಎಂಗಳಿದ್ದರು.
ರಾಜ್ಯ ಸಚಿವ ಸಂಪುಟದಲ್ಲಿ ಪಕ್ಷದ ಪ್ರಾತಿನಿಧ್ಯ ಹೆಚ್ಚಿಸುವ ಕ್ರಮವಾಗಿ ಪವನ್ ಕಲ್ಯಾಣ್ ಕೇಂದ್ರ ಸಂಪುಟ ಸೇರುವ ಆಹ್ವಾನವನ್ನು ನಿರಾಕರಿಸಿದ್ದರು ಎಂದು ಹೇಳಲಾಗಿದೆ. ಬಿಜೆಪಿಯು ಮೂರು ಸಚಿವ ಸ್ಥಾನ ಪಡೆಯುವ ಸಾಧ್ಯತೆಯಿದೆ.
ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಅವರೂ ಸಂಪುಟ ಸೇರಲಿದ್ದಾರೆಯೇ, ಇಲ್ಲವೇ ಎಂಬುದು ಖಚಿತವಾಗಿಲ್ಲ. ನಾಯ್ಡು ನೇತೃತ್ವದ ಹಿಂದಿನ ಸರ್ಕಾರದಲ್ಲಿ ಲೋಕೇಶ್ ಅವರು ಐ.ಟಿ. ಖಾತೆ ಸಚಿವರಾಗಿದ್ದರು.
ಮೈತ್ರಿಕೂಟ ರಾಜ್ಯದಲ್ಲಿ ಬಹುಮತ ಗಳಿಸುತ್ತಿದ್ದಂತೆ ನಾರಾ ಲೋಕೇಶ್ ಅವರ ಆಸುಪಾಸಿನಲ್ಲಿ ಮಂತ್ರಿ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಅವರು ಪಕ್ಷದಲ್ಲಿ ಅಧಿಕಾರದ ಕೇಂದ್ರ ಸ್ಥಾನವಾಗುವ ಸಾಧ್ಯತೆಗಳು ಕಂಡುಬರುತ್ತಿವೆ.