ವಂದೇ ಭಾರತ್ ರೈಲು ಆಗಮಿಸುತ್ತಿದ್ದಂತೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಜನತೆ ಪುಷ್ಪವೃಷ್ಟಿ ಮೂಲಕ ಸ್ವಾಗತ ಕೋರಿದ್ದು ವಿಶೇಷವಾಗಿತ್ತು. ಪುಣೆ, ಮೀರಜ್, ರಾಯಬಾಗ, ಸುಳೇಬಾವಿ ಸೇರಿದಂತೆ ರೈಲು ಬರುತ್ತಿದ್ದ ಮಾರ್ಗ ಮಧ್ಯೆ ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದು ಗಮನ ಸೆಳೆಯಿತು. ಪುಣೆ, ಬೆಳಗಾವಿ ಮುಂತಾದ ರೈಲ್ವೆ ನಿಲ್ದಾಣಗಳಲ್ಲಿ ಜನ ವಂದೇ ಭಾರತ್ ರೈಲನ್ನು ಬರ ಮಾಡಿಕೊಂಡು ಸಂತಸದ ಕ್ಷಣ ಅನುಭವಿಸಿದರು.
ಬೆಳಗಾವಿ : ದೇಶದ ಅತಿ ವೇಗದ ರೈಲುಗಳಲ್ಲಿ ಒಂದು ಎಂಬ ಕೀರ್ತಿಗೆ ಪಾತ್ರರಾಗಿರುವ ವಂದೇ ಭಾರತ್ ರೈಲು ಬೆಳಗಾವಿಗೆ ಆಗಮಿಸಿದೆ. ಪುಣೆಯಿಂದ ಬೆಳಗಾವಿಗೆ ಆಗಮಿಸಿರುವ ಅತ್ಯಂತ ಮಹತ್ವಾಕಾಂಕ್ಷೆಯ ವಂದೇ ಭಾರತ್ ರೈಲಿಗೆ ಬೆಳಗಾವಿ ಜನತೆ ಅಭೂತಪೂರ್ವ ಸ್ವಾಗತ ಕೋರಿದ್ದಾರೆ.
ಪುಣೆಯಿಂದ ರೈಲು ನಿಗದಿತ ವೇಳೆಗೆ ಆಗಮಿಸಲಿಲ್ಲ. ಬೆಳಗಾವಿಗೆ ರಾತ್ರಿ 8 ಗಂಟೆಗೆ ಆಗಮಿಸುತ್ತದೆ ಎಂಬ ನಿರೀಕ್ಷೆ ಇತ್ತು. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಕಾರ್ಯಕ್ರಮ ಸಹ ಆಯೋಜನೆಗೊಂಡಿತ್ತು. ಆದರೆ, ವಿಳಂಬವಾದ ಕಾರಣ ರೈಲು ನಿಗದಿತ ಸಮಯಕ್ಕೆ ಬೆಳಗಾವಿ ರೈಲ್ವೆ ನಿಲ್ದಾಣಕ್ಕೆ ಬರಲಿಲ್ಲ. ಬೆಳಗಾವಿ ನಿಲ್ದಾಣಕ್ಕೆ ಬರುವಾಗ ಸೋಮವಾರ 10 : 30 ಗಂಟೆಯಾಗಿದೆ. ಆದ್ದರಿಂದ ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ವಂದೇ ಭಾರತ್ ರೈಲಿನ ಸ್ವಾಗತಕ್ಕೆ ಸೇರಿರಲಿಲ್ಲ. ಬೆಳಗಾವಿ ರೈಲ್ವೆ ನಿಲ್ದಾಣದಲ್ಲಿ ಬಿಜೆಪಿ ಕಾರ್ಯಕರ್ತರು ಹಾಗೂ ನಾಗರಿಕರು ಭಾಗವಹಿಸಿ ಪುಷ್ಪವೃಷ್ಟಿಯ ಸ್ವಾಗತ ಕೋರಿದರು.
ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ಬೆಳಗಾವಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಈಗ ಗಣೇಶನನ್ನು ವೀಕ್ಷಿಸಲು ತೆರಳುತ್ತಿದ್ದು ಮಾರ್ಗ ಮಧ್ಯೆ ವಂದೇ ಭಾರತ್ ರೈಲು ಆಗಮಿಸುತ್ತಿರುವುದನ್ನು ನೋಡಿ ಪುಳಕಿತಗೊಂಡರು. ಒಟ್ಟಾರೆ, ಪುಣೆಯಿಂದ ಬೆಳಗಾವಿಗೆ ಆಗಮಿಸಿರುವ ವಂದೇ ಭಾರತ್ ರೈಲು ಬೆಳಗಾವಿ ಜಿಲ್ಲೆಯ ಜನತೆಯಲ್ಲಿ ಹೊಸ ನಿರೀಕ್ಷೆಗಳನ್ನು ಮೂಡಿಸಿದೆ. ಜೊತೆಗೆ ಮುಂದಿನ ದಿನಗಳಲ್ಲಿ ಪುಣೆ ಮುಂತಾದ ಮಹಾರಾಷ್ಟ್ರದ ಪ್ರದೇಶಗಳಿಗೆ ತೆರಳುವ ಜನರಿಗೆ ವಂದೇ ಭಾರತ್ ರೈಲಿನಿಂದ ಹೆಚ್ಚಿನ ಅನುಕೂಲತೆ ಆಗಲಿದೆ ಎಂಬ ಮಾತುಗಳು ವ್ಯಕ್ತವಾಗಿವೆ.